
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 14 ಅನ್ನು ವಿಭಜನೆಯ ಭಯಾನಕ ಸ್ಮರಣೆಯ ದಿನವನ್ನಾಗಿ ಘೋಷಿಸಿದನ್ನು ತೃಣಮೂಲ ಕಾಂಗ್ರೆಸ್ ಟೀಕಿಸಿದ್ದು ಪ್ರಧಾನಿ ಅವರಿಗೆ ಇತಿಹಾಸವೇ ತಿಳಿದಿಲ್ಲ ಎಂದು ಹೇಳಿದೆ. ಟಿಎಂಸಿಯ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರಾಯ್ ಕೇಂದ್ರ ಸರ್ಕಾರವನ್ನು ಟೀಕಿಸಿದ್ದು, ‘ಮೋದಿ ಅವರು ಇತಿಹಾಸ ಗೊತ್ತಿಲ್ಲದೆಯೇ ಇತಿಹಾಸ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಬಂಗಾಳ ಮತ್ತು ಪಂಜಾಬ್ ವಿಭಜನೆಗೆ ಯಾರು ಕಾರಣ ಅನ್ನುವುದನ್ನು ಮೊದಲು ತಿಳಿಯಬೇಕು’ ಎಂದಿದ್ದಾರೆ.
ಉತ್ತರ ಬಂಗಾಳದಲ್ಲಿ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಕ್ಕಾಗಿ ಬಿಜೆಪಿಯ ಜಾನ್ ಬಾರ್ಲಾ ಸಲ್ಲಿಸಿದ ಬೇಡಿಕೆಯನ್ನು ಉಲ್ಲೇಖಿಸಿದ ಶೇಖರ್ ರಾಯ್, ಬಿಜೆಪಿ ಹಿಂದೂ ಮಹಾಸಭಾದ ಹೊಸ ಅವತಾರವಾಗಿದ್ದು, ಪದೇ ಪದೇ ಬಿಜೆಪಿಯು ವಿಭಜನೆಯ ರಾಜಕಾರಣ ಮಾಡಲು ಯತ್ನಿಸುತ್ತಿದೆ ಎಂದಿದ್ದಾರೆ.
ಇತ್ತೀಚೆಗೆ ಪ್ರಧಾನಿ ಮೋದಿಯವರು ಆಗಸ್ಟ್ 14ರ ದಿನವನ್ನು ದೇಶ ವಿಭಜನೆಯ ಭಯಾನಕ ಸ್ಮರಣೆಯ ದಿನವನ್ನಾಗಿ ಘೋಷಿಸಿದ್ದರು. ‘ದೇಶ ವಿಭಜನೆಯ ನೋವುಗಳನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ದ್ವೇಷ ಹಾಗು ಹಿಂಸೆಯಿಂದಾಗಿ ನಮ್ಮ ಲಕ್ಷಾಂತರ ಸಹೋದರಿಯರು ಮತ್ತು ಸಹೋದರರು ಸ್ಥಳಾಂತರಗೊಂಡರು ಮತ್ತು ಅನೇಕರು ತಮ್ಮ ಜೀವಗಳನ್ನು ಕಳೆದುಕೊಂಡರು. ನಮ್ಮ ಜನರ ಹೋರಾಟಗಳು ಮತ್ತು ತ್ಯಾಗಗಳ ನೆನಪಿಗಾಗಿ ಇನ್ನು ಮುಂದೆ ಆಗಸ್ಟ್ 14 ಅನ್ನು ವಿಭಜನೆಯ ಭಯಾನಕ ಸ್ಮರಣೆಯ ದಿನವಾಗಿ ಆಚರಿಸಲಾಗುತ್ತದೆ’ ಎಂದು ಹೇಳಿದ್ದರು.












































