
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜತೆ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಮಾತುಕತೆ ಬಗ್ಗೆ ಸ್ವತಃ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಫ್ಘಾನ್ ಬಿಕ್ಕಟ್ಟಿನ ಹಿನ್ನಲೆಯಲ್ಲಿ ಈ ಮಾತುಕತೆ ಭಾರೀ ಮಹತ್ವ ಪಡೆದಿದೆ. ಅಫ್ಘಾನ್ ಸಮಸ್ಯೆಗಳು ಹಾಗು ಅದರಿಂದಾಗುವ ಸಂಭಾವ್ಯ ಪರಿಣಾಮಗಳ ಕುರಿತು ಮೋದಿ ಪುತಿನ್ ಚರ್ಚಿಸಿದರು. ಈಗಾಗಲೇ ಭಾರತ ಅಫ್ಘಾನಿಸ್ತಾನದ ಕಾಬೂಲಿನಿಂದ ತನ್ನ ರಾಯಭಾರ ಕಚೇರಿಯನ್ನು ತೆರವುಗೊಳಿಸಿದೆ.
ಅಫ್ಘಾನ್ ವಿಚಾರಗಳ ಹೊರತಾಗಿ ಭಾರತ ರಷ್ಯಾ ನಡುವಿನ ಅಜೆಂಡಾ ಹಾಗು ರಷ್ಯಾ ಸಹಭಾಗಿತ್ವದಲ್ಲಿ ಕೋವಿಡ್ ನಿಯಂತ್ರಣದ ಕುರಿತು ಉಭಯದ್ವಯರು ವಿಚಾರ ವಿನಿಮಯ ನಡೆಸಿದರು. ಹಾಗು ಮುಂದಿನ ಯಾವುದೇ ಪ್ರಮುಖ ಅಂತರರಾಷ್ಟ್ರೀಯ ತೀರ್ಮಾನಗಳ ಸಂದರ್ಭ ಉಭಯ ದೇಶಗಳು ಪರಸ್ಪರ ಚರ್ಚಿಸುವ ನಿರ್ಧಾರಕ್ಕೆ ಬರಲಾಯಿತು.
ಮಾತುಕತೆ ಸಂದರ್ಭ ರಷ್ಯಾ ಅಧ್ಯಕ್ಷ ಪುತಿನ್, ಅಮೇರಿಕ ಹಾಗು ನ್ಯಾಟೋ ಪಡೆಗಳು ಅಫ್ಘಾನ್ ನಿರಾಶ್ರಿತರನ್ನು ಮಧ್ಯ ಏಷ್ಯಾ ದೇಶಗಳತ್ತ ಸಾಗಿಸುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.












































