ಪುತ್ತೂರು : ಚಿನ್ನದ ಆಭರಣಗಳನ್ನು ತೊಳೆದು ಹೊಳಪು ನೀಡುವುದಾಗಿ ಹೇಳಿ ಆಭರಣಗಳನ್ನು ಎಗರಿಸುತ್ತಿರುವ ತಂಡವೊಂದು ಜಿಲ್ಲೆಯಲ್ಲಿ ಕಂಡು ಬಂದಿದ್ದು ಗುರುವಾರ ಪುತ್ತೂರಿನಲ್ಲಿ ಓರ್ವ ಮಹಿಳೆಗೆ ವಂಚಿಸಿದ ಘಟನೆ ನಡೆದಿದೆ.

ಪುತ್ತೂರಿನ ನೆಟ್ಟಣಿಗೆ ಮುನ್ನೂರು ಗ್ರಾಮಪಂಚಾಯಿತಿಯ ಸದಸ್ಯೆ ಆಗಿರುವ ಪೆರ್ನಾಜೆ ನಿವಾಸಿ ಇಂದಿರಾ ಅವರಿಗೆ ಸೇರಿದ ೨ ಪವನ್ ಕರಿಮಣಿ ಸರ ಸೇರಿ ಒಟ್ಟು ಐದೂವರೆ ಪವನ್ ಬಂಗಾರವನ್ನು ಖದೀಮರು ಎಗರಿಸಿದ್ದಾರೆ.
ಈ ತಂಡದ ಖದೀಮನೊಬ್ಬ ಮನೆಯಲ್ಲಿನ ಟಿವಿ, ಬೆಳ್ಳಿ, ಚಿನ್ನದ ಆಭರಣಗಳನ್ನು ಹೊಳಪು ಮಾಡಿಕೊಡುತ್ತೇನೆ ಎಂದು ಹೇಳಿಕೊಂಡು ಇಂದಿರಾ ಅವರ ಮನೆಗೆ ಬಂದಿದ್ದ. ನೋಡೋಣ ಎಂದುಕೊಂಡು ಇಂದಿರಾ ಅವರು ತನ್ನ ಬೆಳ್ಳಿಯ ಕಾಲ್ಗೆಜ್ಜೆಯನ್ನು ತೆಗೆದು ಕೊಟ್ಟಿದ್ದರು. ಆತ ಆ ಕೂಡಲೇ ಅದನ್ನು ಪಾಲೀಶು ಮಾಡಿ ಹೊಳೆಯುವಂತೆ ಮಾಡಿ ಕೊಟ್ಟಿದ್ದ. ನಂತರ ಮನೆಯಲ್ಲಿ ಬೇರೆ ಚಿನ್ನಾಭರಣ ಇದ್ದರೆ ಕೊಡಿ ಹೊಳೆಯುವಂತೆ ಮಾಡಿಕೊಡುತ್ತೇನೆ ಎಂದು ಕೇಳಿದ್ದ. ಕಾಲ್ಗೆಜ್ಜೆ ಹೊಳಪು ಬರಿಸಿದ್ದನ್ನು ನೋಡಿ ಈತನನ್ನು ನಂಬಬಹುದು ಎಂದುಕೊಂಡು ಆಕೆ ತನ್ನ ಮಾಂಗಲ್ಯ ಸೇರಿದಂತೆ ಕೆಲವೊಂದು ಆಭರಣಗಳನ್ನು ನೀಡಿದ್ದಾರೆ.
ಅದನ್ನು ಪಡೆದ ಆತ ಅದರ ಮೇಲೆ ಹರಡಿ ಪೌಡರ್ ಹಾಕಿ ಯಾವುದೊ ಜೆಲ್ ಬಳಸಿ ಬ್ರಷ್ ನಲ್ಲಿ ಉಜ್ಜಿ ತೊಳೆಯುವಂತೆ ಮಾಡಿದ್ದಾನೆ. ನಂತರ ಬ್ಯಾಟರಿಚಾಲಿತ ನೀರು ಕುದಿಸುವ ಒಂದು ಸಾಧನದಲ್ಲಿ ಕುದಿಸಿದ್ದಾನೆ. ಯಾಕೆ ಕುದಿಸುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಚಿನ್ನದಲ್ಲಿರುವ ಮಣ್ಣು ಧೂಳು ಹೋಗಲು ಎಂದು ತಿಳಿಸಿದ್ದಾನೆ. ನಂತರ ನೀರಿನಿಂದ ತೊಳೆದು ಅದರ ಮೇಲೆ ಹಳದಿ ಪುಡಿ ಹಾಕಿ ಪೇಪರ್ ಒಂದರಲ್ಲಿ ಕಟ್ಟಿ ಅರ್ಧ ಗಂಟೆ ಬಿಟ್ಟು ಕಟ್ಟು ಬಿಚ್ಚಿ ತೆಗೆಯುವಂತೆ ಇಂದಿರಾ ಅವರಿಗೆ ತಿಳಿಸಿ ಅಲ್ಲಿಂದ ತೆರಳಿದ್ದಾನೆ. ಆದರೆ ಯಾಕೋ ಅನುಮಾನಗೊಂಡ ಇಂದಿರಾ ಆತ ಹೋದ ಐದೇ ನಿಮಿಷದಲ್ಲಿ ಕಟ್ಟು ತೆರೆದು ನೋಡಿದಾಗ ಮಾಂಗಲ್ಯ ಸರ ಹಾಗು ಚಿನ್ನಾಭರಣಗಳು ತುಂಡು ತುಂಡಾಗಿರುವುದು ಕಾಣಿಸಿದೆ. ಖದೀಮ ಆಭರಣಗಳಲ್ಲಿದ್ದ ಚಿನ್ನದ ಅಂಶವನ್ನು ಕರಗಿಸಿ ದ್ರವ ಮಾದರಿಯಲ್ಲಿ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












































