HomePoliticalಇತಿಹಾಸದ ಪುಟ ಸೇರುವ ಧಾವಂತದಲ್ಲಿ ಕಾಂಗ್ರೆಸ್

ಇತಿಹಾಸದ ಪುಟ ಸೇರುವ ಧಾವಂತದಲ್ಲಿ ಕಾಂಗ್ರೆಸ್

ಕಾಂಗ್ರೆಸ್ ಹಿಂದಿನಿಂದಲೂ ಮುಸ್ಲಿಂ‌ ಮತ್ತು ಹಿಂದುಳಿದ, ದಲಿತ ಸಮುದಾಯಗಳ ವೋಟನ್ನೇ ನೆಚ್ಚಿಕೊಂಡು ರಾಜಕಾರಣ ಮಾಡಿದ್ದು. ಹಾಗಾಗಿ ಬಿಜೆಪಿಯನ್ನು ಕೇವಲ ಮೇಲ್ಜಾತಿಯವರ, ಬ್ರಾಹ್ಮಣರ ಪಕ್ಷ ಎಂಬಂತೆ ಇಡೀ ದೇಶದಲ್ಲಿ ಬಿಂಬಿಸಲಾಗುತ್ತಿತ್ತು. ಹಿಂದೆ ಮುಸಲ್ಮಾನರೂ ಕೂಡ ಕಾಂಗ್ರೆಸ್ಸಿನ ಸಾಲಿಡ್ ವೋಟ್ ಬ್ಯಾಂಕ್ ಆಗಿದ್ದರು, ಇದರ ಜೊತೆ ಹಿಂದುಳಿದ,‌ ಮತ್ತು ದಲಿತ ವರ್ಗಗಳ ಬಹುಪಾಲು ವೋಟು ಕೂಡ ಕಾಂಗ್ರೆಸ್ಸಿನ ಪಾಲಾಗುತ್ತಿತ್ತು.

ಆದರೆ ಮೋದಿ ಅಧಿಕಾರಕ್ಕೆ ಬಂದ ನಂತರ ಹಿಂದೂ ಸಮಾಜ ಜಾಗೃತವಾಗತೊಡಗಿತು, ಒಗ್ಗಟ್ಟಾಗತೊಡಗಿತು. ಹೀಗಾಗಿ ಎಂದೂ ಹಿಂದುತ್ವದ ಪರವಾದ ನಿಲುವುಗಳೇ ಇಲ್ಲದ, ಹಿಂದುಗಳ ಭಾವನೆಗಳಿಗೆ ಬೆಲೆಯನ್ನೇ ಕೊಡದ ಕಾಂಗ್ರೆಸ್ ಬೇರೆ ವಿಧಿ ಇಲ್ಲದೆ ಮೃದು ಹಿಂದುತ್ವದ ಕಡೆ ಮುಖ ಮಾಡಬೇಕಾಯಿತು, ರಾಮಮಂದಿರದ ತೀರ್ಪು ಮತ್ತು ರಾಮಮಂದಿರದ ಶಿಲಾನ್ಯಾಸದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಾಗು ಅದರ ಸದಸ್ಯರುಗಳ ಪ್ರತಿಕ್ರಿಯೆ, ಹೇಳಿಕೆಗಳೇ ಇದಕ್ಕೆ ಉದಾಹರಣೆ.

ಇದು ಕಾಂಗ್ರೆಸ್ ಅನ್ನು ಅಕ್ಷರಶಃ ಅಡಕತ್ತರಿಗೆ ಸಿಲುಕಿಸಿತು. ರಾಮಮಂದಿರದ ವಿರುದ್ದ ಮಾತನಾಡಿದ್ರೆ ಕಾಂಗ್ರೆಸ್ ತನ್ನ ಸಮಾಧಿಗೆ ತಾನೇ ಹಳ್ಳ ತೋಡಿಕೊಳ್ಳುತ್ತಿತ್ತು, ಆದರೆ ಕಾಂಗ್ರೆಸ್ ಮೃದು ಹಿಂದುತ್ವದ ಕಡೆ ವಾಲಿದ್ದರಿಂದ ಮುಸಲ್ಮಾನರು ಕಾಂಗ್ರೆಸ್ ಮೇಲಿದ್ದ ನಂಬಿಕೆ ಕಳೆದುಕೊಳ್ಳಲು ಶುರು ಮಾಡಿದರು ಮತ್ತು ಅವರಿಗೆ ತಮ್ಮದೇ ಪರ್ಯಾಯ ನಾಯಕತ್ವ ಬೇಕಿತ್ತು. ಆಗ ಅವರ ಕಣ್ಣಿಗೆ ಕಂಡಿದ್ದು ಅಸಾದುದ್ದಿನ್ ಓವೈಸಿ.
ಇದರ ಜೊತೆಗೆ ಬಿಜೆಪಿ ತೆಗೆದುಕೊಂಡ ತ್ರಿವಳಿ ತಲಾಖ್ ನಿಷೇಧದಂತಹ ಕ್ರಮಗಳಿಂದ ಒಂದಷ್ಟು ಮುಸ್ಲಿಂ ಹೆಣ್ಣುಮಕ್ಕಳು ಬಿಜೆಪಿಯ ಮತ ಬ್ಯಾಂಕ್’ಗೆ ಸೇರ್ಪಡೆ ಆಗಿದ್ದರು.

ಮುಸಲ್ಮಾನರು ಹೀಗೆ ಒಂದು ಪರ್ಯಾಯ ನಾಯಕತ್ವದ ಹುಡುಕಾಟದಲ್ಲಿ ಇದ್ದಾರೆ ಎನ್ನುವುದಕ್ಕೆ ಮುಸ್ಲಿಂ ಸಮುದಾಯದ ಪ್ರಾಬಲ್ಯ ಇರುವ ಕಡೆಗಳಲ್ಲಿ ಓವೈಸಿಯ ಪಕ್ಷ ಗೆಲ್ಲುತ್ತಿರುವುದೇ ಸಾಕ್ಷಿ. ನಿನ್ನೆ ದಿನದ ರಾಜ್ಯದ ಪಾಲಿಕೆ ಪಲಿತಾಂಶಗಳತ್ತ ನೋಡಿದರೆ ತಿಳಿಯುತ್ತದೆ. ಗೆಲ್ಲುವ ಕಡೆ ಗೆಲ್ಲುತ್ತಾರೆ, ಉಳಿದ ಕಡೆ ಕಾಂಗ್ರೆಸ್ ಸೋಲಿಗೆ ಕಾರಣರಾಗುತ್ತಿದ್ದಾರೆ. ಇದು ಕರ್ನಾಟಕ ಮಾತ್ರವಲ್ಲ, ಇಡೀ ದೇಶದಲ್ಲಿ ಆಗುತ್ತಿರುವುದು ಇದೇ. ನಮ್ಮ ರಾಜ್ಯದ ಕರಾವಳಿ ಭಾಗದಲ್ಲಿ ಪಂಚಾಯತ್, ಪುರಸಭೆ ನಗರಸಭೆಗಳಲ್ಲಿ ಮುಸ್ಲಿಂ ನಾಯಕತ್ವದ ಮತ್ತೊಂದು ಪಕ್ಷ ಎಸ್.ಡಿ.ಪಿ.ಐ ಗಳಿಸುತ್ತಿರುವ ಸೀಟುಗಳ ಸಂಖ್ಯೆಯತ್ತ ಒಮ್ಮೆ ಗಮನ ಹರಿಸಿದರೆ ತಿಳಿಯುತ್ತದೆ. ಒಟ್ಟಾರೆ ಇದರ ಹೊಡೆತ ತಿನ್ನುತ್ತಿರುವುದು ಕಾಂಗ್ರೆಸ್.

ಒಂದು ಕಡೆ ಮುಸಲ್ಮಾನರು ಕಾಂಗ್ರೆಸ್ ನಿಂದ ದೂರ ಹೋಗುತ್ತಿದ್ದಾರೆ, ಮತ್ತೊಂದು ಕಡೆ ಹಿಂದೂ ಸಮಾಜದ ಒಗ್ಗಟ್ಟಿನಿಂದ ಕಾಂಗ್ರೆಸ್ ನ ಹಳೇ ಒಡೆದು ಆಳುವ ತಂತ್ರಗಳು ಯಾವುದೂ ಫಲಪ್ರದ ಅಗುತ್ತಿಲ್ಲ. ಕಾಂಗ್ರೆಸಿನ ರಾಷ್ಟ್ರೀಯ ನಾಯಕತ್ವದ ಮೇಲೆ ಜನರಿಗೆ ನಂಬಿಕೆ ಇಲ್ಲ. ಎಲ್ಲೂ ಅಧಿಕಾರ ಇಲ್ಲದಿರೋದರಿಂದ ಪಕ್ಷದಲ್ಲಿ ದುಡ್ಡಿಲ್ಲ, ಆ ಪಕ್ಷದ ನಾಯಕರು ಕೂಡ ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ತೊರೆದು ಬೇರೆ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಒಟ್ಟಾರೆ ಹೇಳಬೇಕು ಅಂದ್ರೆ, ಕಾಂಗ್ರೆಸ್ ನಿಧಾನವಾಗಿ ಇತಿಹಾಸದ ಪುಟಗಳನ್ನು ಸೇರುವತ್ತ ದಾಪುಗಾಲು ಹಾಕುತ್ತಿದೆ.

-ಸುಭಾಷ್ ಬಂಗಾರಪೇಟೆ

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments