
ಕಾಬೂಲ್: ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನ್ ಇದೀಗ ಸರ್ಕಾರವನ್ನು ರಚಿಸಿದ್ದು ಮುಲ್ಲಾ ಮೊಹಮದ್ ಹಸನ್ ಅಖುನ್ಡ್ ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಇವರು ಈ ಹಿಂದೆ 1996ರಲ್ಲಿ ರಚನೆಯಾದ ತಾಲೀಬಾನ್ ಸರ್ಕಾರದಲ್ಲಿ ಉಪ ಪ್ರಧಾನಿ ಹಾಗು ರಕ್ಷಣಾ ಸಚಿವನ ಜವಾಬ್ದಾರಿ ನಿರ್ವಹಿಸಿದ್ದರು.
ತಾಲೀಬಾನ್ ಸರ್ಕಾರದ ನಾಯಕನೆಂದೇ ಇಲ್ಲಿಯವರೆಗೆ ಬಿಂಬಿತವಾಗಿದ್ದ ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಅವರಿಗೆ ಉಪ ಪ್ರಧಾನಿ ಪಟ್ಟ ನೀಡಲಾಗಿದೆ. ಬರಾದಾರ್ ಪ್ರಧಾನಿ ಪಟ್ಟವನ್ನು ತಪ್ಪಿಸಿದುದರಲ್ಲಿ ಪಾಕ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಮುಲ್ಲಾ ಯಾಕೂಬ್ ಅಫ್ಘಾನಿಸ್ತಾನದ ನೂತನ ರಕ್ಷಣಾ ಸಚಿವರಾಗಿ ಆಯ್ಕೆಯಾಗಿದ್ದಾರೆ. ಮುಲ್ಲಾ ಯಾಕೂಬ್ ತಾಲಿಬಾನ್ ಸಂಸ್ಥಾಪಕ ದಿವಂಗತ ಮುಲ್ಲಾ ಒಮರ್ ಪುತ್ರನಾಗಿದ್ದಾರೆ. ಈ ಕುರಿತು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ತಾಲಿಬಾನಿನ ನೀತಿ ನಿರ್ಧಾರ ಸಮಿತಿಯಾಗಿರುವ ರೆಹಾಬ್ರಿ ಶುರಾ ಸಮಿತಿ ಈ ಆಯ್ಕೆ ಪ್ರಕ್ರಿಯೆಯನ್ನು ನಡೆಸಿತ್ತು. ಪೂರ್ಣ ಪ್ರಮಾಣದ ಕ್ಯಾಬಿನೆಟ್ ರಚನೆ ಇನ್ನಷ್ಟೇ ಆಗಬೇಕಿದೆ ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ.












































