
ಅಹಮದಾಬಾದ್: ಅನಿರೀಕ್ಷಿತ ಬೆಳವಣಿಗೆಯಲ್ಲಿ ಗುಜರಾಜ್ ಸಿಎಂ ವಿಜಯ್ ರೂಪಾಣಿ ರಾಜೀನಾಮೆ ನೀಡಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಇರುವ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಹೊಸ ನಾಯಕತ್ವದತ್ತ ಮುಖ ಮಾಡಿದೆ.
ಇತ್ತೀಚಿಗೆ ಉತ್ತರಾಖಂಡ್ ಹಾಗು ಕರ್ನಾಟಕದಲ್ಲಿ ಬಿ.ಎಸ್ ಯಡಿಯೂರಪ್ಪ ರಾಜೀನಾಮೆ ಪಡೆದ ಬಿಜೆಪಿ ಹೊಸ ಮುಖಕ್ಕೆ ಮುಖ್ಯಮಂತ್ರಿ ಪಟ್ಟ ನೀಡಿತ್ತು. ಇದೀಗ ಗುಜರಾತ್ ನಲ್ಲಿ ಕೂಡ ಮತ್ತದೇ ಪ್ರಯೋಗಕ್ಕೆ ಮುಂದಾಗಿದೆ. ಇದೀಗ ವಿಜಯ್ ರೂಪಾಣಿ ಸ್ಥಾನಕ್ಕೆ ಯಾರು ಬಂದು ಕೂರುತ್ತಾರೆ ಅನ್ನುವುದು ಕುತೂಹಲದ ಪ್ರಶ್ನೆ.
ಮೂಲಗಳ ಪ್ರಕಾರ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಕೃಷಿ ಸಚಿವ ಆರ್ ಸಿ ಪಾಲ್ದು, ಕೇಂದ್ರ ಸಚಿವರಾದ ಪುರುಷೋತ್ತಮ್ ರೂಪಾಲ, ಮನ್ಸುಖ್ ಮಾಂಡವೀಯ ಸಂಭಾವ್ಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಕೇಂದ್ರ ಹೈಕಮಾಂಡ್ ಯಾರ ಮೇಲೆ ಕೃಪಾಕಟಾಕ್ಷ ತೋರುತ್ತದೆಯೋ ಅವರೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಗುಜರಾತಿನ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ ಎನ್ನಲಾಗಿದೆ.
ಈ ಬಾರಿ ಪಾಟೀದಾರ್ ಸಮುದಾಯಕ್ಕೆ ಅವಕಾಶ ನೀಡಬೇಕೆಂದು ಕೂಗು ಕೇಳಿಬರುತ್ತಿದೆ. ಅದಕ್ಕೆ ಹೈಕಮಾಂಡ್ ಮನಸ್ಸು ಮಾಡಿದ್ದಲ್ಲಿ ಮಾಂಡವೀಯ ಮುಖ್ಯಮಂತ್ರಿಯಾಗಲಿದ್ದಾರೆ. ಪಾಟೀದಾರ್ ಸಮುದಾಯ ಗುಜರಾತಿನಲ್ಲಿ ಪಟೇಲ್ ಸಮುದಾಯದಷ್ಟೇ ಪ್ರಬಲವಾಗಿದೆ.












































