
ಬೆಂಗಳೂರು: ಸೆಪ್ಟೆಂಬರ್ 13ರ ರಾಜ್ಯ ವಿಧಾನಮಂಡಲಗಳ ಅಧಿವೇಶನ ಆರಂಭವಾಗಲಿದ್ದು ಪ್ರತಿಪಕ್ಷ ಕಾಂಗ್ರೆಸ್ ಆಡಳಿತ ಪಕ್ಷದ ವಿರುದ್ಧ ಧಾಳಿ ಮಾಡಲು ಸಜ್ಜಾಗಿ ನಿಂತಿದೆ. ವಿಧಾನ ಮಂಡಲ ಅಧಿವೇಶನದ ಆರಂಭದ ದಿನವಾದ ನಾಳೆ (ಸೋಮವಾರ) ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ಆಗಮಿಸಲಿದ್ದಾರೆ.
ಬಿಜೆಪಿ ಸರಕಾರವು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ಬೆಲೆಗಳನ್ನು ಏರಿಸುತ್ತಲೇ ಇದ್ದು ಇದರಿಂದಾಗಿ ಅಗತ್ಯ ವಸ್ತುಗಳ ಬೆಳೆಗಳಲ್ಲಿಯೂ ಏರಿಕೆ ಉಂಟಾಗಿದೆ. ಬೆಲೆ ಏರಿಕೆಯನ್ನು ವಿರೋಧಿಸಿ ನಾನು ಹಾಗು ಸಿದ್ದರಾಮಯ್ಯನವರು ವಿಧಾನ ಸೌಧಕ್ಕೆ ಎತ್ತಿನಗಾಡಿಯಲ್ಲಿ ತೆರಳಲಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಬಿಜೆಪಿಗೆ ಬರಲು ಹಣದ ಆಮಿಷ ಒಡ್ಡಲಾಗಿತ್ತು ಎಂದಿರುವ ಶ್ರೀಮಂತ್ ಪಾಟೀಲ್ ಹೇಳಿಕೆ ಉಲ್ಲೇಖಿಸಿದ ಡಿಕೆ ಶಿವಕುಮಾರ್, ಅವರು ಸತ್ಯ ಒಪ್ಪಿಕೊಂಡಿದ್ದಕ್ಕೆ ಧನ್ಯವಾದಗಳು. ಈ ಬಗ್ಗೆ ಎಸಿಬಿಯವರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಮಾಡಬೇಕು. ಹಣದ ಕೊಡುವವರು ಯಾರು ಎಂಬುದನ್ನು ತಿಳಿಯಬೇಕು ಎಂದು ಹೇಳಿದರು.
ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಡಳಿತ ಸರಿಯಾಗಿಲ್ಲ. ಹಾಗಾಗಿಯೇ ಹಲವು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತಿದ್ದಾರೆ. ಕರ್ನಾಟದಲ್ಲಿ ಕೂಡ ಯಡಿಯೂರಪ್ಪನವರನ್ನು ಬದಲಾಯಿಸಿದರು. ಅವರ ಆಡಳಿತ ಸರಿಯಾಗಿಲ್ಲ ಎಂಬುದಕ್ಕೆ ಬದಲಾಯಿಸಲಾಗಿದೆ. ಸರಿಯಾಗಿದ್ದರೆ ಬದಲಾವಣೆ ಪ್ರಶ್ನೆ ಬರುತ್ತಿರಲಿಲ್ಲ. ಯಡಿಯೂರಪ್ಪನವರು ರಾಜೀನಾಮೆ ಕೊಡುವ ಸಂದರ್ಭ ಕಣ್ಣೀರು ಹಾಕುವ ಪರಿಸ್ಥಿತಿ ಬಂತು ಎಂದು ಡಿಕೆಶಿ ಮುಖಮಂತ್ರಿ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸಿದರು.












































