
ಉಡುಪಿ: ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯ ಸಭಾ ಸದಸ್ಯ, ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರು ದೀರ್ಘ ಕಾಲದ ಅಸೌಖ್ಯದ ಕಾರಣ ಇಂದು ಇಹಲೋಕ ತ್ಯಜಿಸಿದರು.
ಕೆಲ ದಿನಗಳಿಂದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜುಲಾಯಿ 18ರಂದು ಅವರು ಮನೆಯಲ್ಲಿ ಯೋಗ ಮಾಡುತ್ತಿದ್ದಾಗ ಜಾರಿ ಬಿದ್ದಿದ್ದರು. ಆ ಬಳಿಕ ತಪಾಸಣೆಗಾಗಿ ವೈದ್ಯರ ಬಳಿ ತೆರಳಿದ ಸಂದರ್ಭ ಅವರ ತಲೆ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ ಎಂಬುದು ತಿಳಿದಿತ್ತು. ಆ ನಂತರ ಅವರನ್ನು ತೀವ್ರ ನಿಗಾ ಘಟಕ (ಐ.ಸಿ.ಯು)ದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.
ನೆಹರೂ ಪರಿವಾರದ ಆಪ್ತರಾಗಿ ಗುರುತಿಸಿಕೊಂಡಿದ್ದ ಆಸ್ಕರ್ ಫೆರ್ನಾಂಡಿಸ್ 1980ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಗೆದ್ದು ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದರು. ಹಲವು ಬಾರಿ ರಾಜ್ಯಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಆಸ್ಕರ್ ಕೊಡುಗೆ ಅಪಾರ. ಶಿರಾಡಿ ಸಕಲೇಶಪುರ ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ಅನುದಾನ ಮಂಜೂರು ಆಗುವಂತೆ ದೆಹಲಿ ಮಟ್ಟದಲ್ಲಿ ಪ್ರಯತ್ನಿಸುತ್ತಿದ್ದರು. ಅವರ ಅಗಲಿಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ತುಂಬಲಾರದ ನಷ್ಟವೆಂದು ಭಾವಿಸಲಾಗಿದೆ.












































