
ಲಿಖ್ಹಿಂಪುರ: ಇಲ್ಲಿ ನಡೆದ ರೈತರ ಹಾಗು ಬಿಜೆಪಿ ಕಾರ್ಯಕರ್ತರ ನಡುವಿನ ಹಿಂಸಾಚಾರದ ಸ್ಥಳ ಪರಿಶೀಲನೆಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು 1 ದಿನದವರೆಗೆ ಪಿಎಸಿ ಅತಿಥಿ ಗೃಹದಲ್ಲಿ ಇರಿಸಿದ ಬಳಿಕ ಇದೀಗ ಅಧಿಕೃತವಾಗಿ ಬಂಧಿಸಲಾಗಿದೆ. ಪ್ರಿಯಾಂಕಾ ಗಾಂಧಿ ಜತೆಗೆ ಇತರ 10 ಮಂದಿ ಕಾಂಗ್ರೆಸ್ ಪಕ್ಷೀಯರೂ ಬಂಧನಕ್ಕೆ ಒಳಗಾಗಿದ್ದಾರೆ.
ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವಪ್ರಸಾದ್ ಮೌರ್ಯ ಭೇಟಿಯನ್ನು ವಿರೋಧಿಸಿ ಲಿಖ್ಹಿಂಪುರದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಮೇಲೆ ಕೇಂದ್ರ ಸಚಿವರ ಪುತ್ರನೊಬ್ಬ ಕಾರು ಹರಿಸಿ ಪ್ರತಿಭಟನಾನಿರತ ರೈತನ ಹತ್ಯೆಗೆ ಕಾರಣವಾಗಿದ್ದ. ಇದರಿಂದ ರೊಚ್ಚಿಗೆದ್ದ ರೈತರು ಬಿಜೆಪಿ ಕಾರ್ಯಕರ್ತರ ಮೇಲೆ ಧಾಳಿ ನಡೆಸಿದರು. ಒಟ್ಟಾರೆ ಹಿಂಸಾಚಾರದಲ್ಲಿ ಒಟ್ಟು 8 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದರಲ್ಲಿ ನಾಲ್ವರು ರೈತರು ಸೇರಿದ್ದರು.
ಪ್ರಿಯಾಂಕಾ ಗಾಂಧಿ ಜತೆಗೆ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು, ಎಂಎಲ್ ಸಿ ದೀಪಕ್ ಸಿಂಗ್, ಕಾಂಗ್ರೆಸ್ ನಾಯಕರಾದ ದೀಪೇಂದ್ರ ಸಿಂಗ್ ಹೂಡ, ಸಂದೀಪ್ ರಾಜ್ ಕುಮಾರ್, ನರೇಂದ್ರ ಶೇಖಾವತ್, ಯೋಗೇಂದ್ರ ಹರಿಕಾಂತ್, ಧೀರಜ್ ಗುರ್ಜರ್ ಹಾಗೂ ಅಮಿತ್ ಅವರನ್ನು ಬಂಧಿಸಲಾಗಿದೆ.












































