
ನವದೆಹಲಿ: ದೇಶದ ಪ್ರಮುಖ ನದಿಗಳಲ್ಲಿ ಒಂದಾದ ಯಮುನಾ ನದಿಯ ನೀರು ಕಲುಷಿತಗೊಂಡಿದ್ದು ಇದು ಯಮುನಾ ನದಿಯ ನೀರನ್ನು ಬಳಸುತ್ತಿರುವ ದೆಹಲಿಯ ಜನರಿಗೆ ಸಮಸ್ಯೆ ತಂದೊಡ್ಡಿದೆ. ಯಮುನಾ ನದಿಯ ನೀರಿನಲ್ಲಿ ಅಮೋನಿಯಾದ ಮಟ್ಟ 0.5 ppm ಗಿಂತ ಹೆಚ್ಚಾಗಿರುವುದು ಕಳವಳಕ್ಕೆ ಕಾರಣವಾಗಿದೆ.
ಅಮೋನಿಯ ಮಟ್ಟದ ಹೆಚ್ಚಳದಿಂದಾಗಿ ಯಮುನಾ ನದಿಯ ನೀರನ್ನು ದೆಹಲಿಯ ಜನತೆಗೆ ಕುಡಿಯಲು ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಅಮೋನಿಯಾದ ಮಟ್ಟ ಯಮುನಾ ನದಿಯಲ್ಲಿ 2.2 ppm ಇರುವುದು ಕಂಡು ಬಂದಿದೆ. ಇದು ಯಮುನಾ ನದಿಯಲ್ಲಿ ಜಲಚರಗಳ ನಾಶಕ್ಕೆ ಕಾರಣವಾಗಬಹುದು .
ಅಮೋನಿಯಾದ ಮಟ್ಟ ಇರಬಹುದಾದ ಗರಿಷ್ಠ ಪ್ರಮಾಣವನ್ನು ದಾಟಿರುವುದರಿಂದ ದೆಹಲಿಯ ಪ್ರಮುಖ ನಾಲ್ಕು ನೀರು ಸಂಸ್ಕರಣ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಈ ಒಂದು ಕಾರಣದಿಂದ ಮುಂದಿನ ದಿನಗಳಲ್ಲಿ ರಾಷ್ಟ್ರದ ರಾಜಧಾನಿಯಲ್ಲಿ ನೀರಿನ ಸಮಸ್ಯೆ ತಲೆದೋರಬಹುದು.












































