
ಲಕ್ನೋ: ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ತಾರಕಕ್ಕೆ ಏರಿದೆ. ಕಳೆದ ಬಾರಿ ಅತ್ಯದ್ಭುತ ಬಹುಮತ ಗಳಿಸಿದ್ದ ಬಿಜೆಪಿ ಈ ಬಾರಿ ಮತ್ತದೇ ಸಾಧನೆ ಮರುಕಳಿಸುವ ಸಾಧ್ಯತೆ ಇಲ್ಲವಾದರೂ ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಏರಲಿದೆ ಎಂದು ಹಲವು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಸಮೀಕ್ಷೆಯಂತೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ ಉತ್ತಮ ಸಾಧನೆ ತೋರಲಿದ್ದು ಬಿಜೆಪಿ ಜತೆ ನೇರ ನೇರಾ ಸ್ಪರ್ಧೆ ಕೊಡುತ್ತಿದೆ. ಅದಕ್ಕೆ ಪೂರಕವಾಗಿ ಬಿಜೆಪಿಯ ಹಲವು ಸಚಿವರು, ಶಾಸಕರುಗಳು, ಮುಖಂಡರುಗಳು ಪಕ್ಷ ತೊರೆದು ಸಮಾಜವಾದಿ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ.
ಬಿಜೆಪಿ ತೊರೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಮಧ್ಯೆ ಇತ್ತೀಚಿಗೆ ಸಮಾಜವಾದಿ ಪಕ್ಷದಿಂದ ಬಿಜೆಪಿ ತೆಕ್ಕೆಗೆ ಬಂದ ವ್ಯಕ್ತಿಯೊಬ್ಬರ ಬಗ್ಗೆ ರಾಜಕೀಯ ಲೆಕ್ಕಾಚಾರಗಳು ಚರ್ಚೆಯಾಗುತ್ತಿವೆ. ಬಿಜೆಪಿಗೆ ಸಿಕ್ಕ ಬೋನಸ್ ಎಂಬಂತೆ ಬಿಂಬಿಸಲಾಗುತ್ತಿರುವ ಆ ವ್ಯಕ್ತಿ ಸಮಾಜವಾದಿ ಪಕ್ಷದ ಪರಮೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣ ಯಾದವ್. ಮುಲಾಯಂ ಸಿಂಗ್ ಅವರ ಎರಡನೆಯೇ ಪತ್ನಿಯ ಮಗನ ಪತ್ನಿಯಾಗಿರುವ ಅಪರ್ಣ ಯಾದವ್ ಆಗಮನದಿಂದ ನಿಜಕ್ಕೂ ಬಿಜೆಪಿಗೆ ಲಾಭವಿದೆಯೇ? ಸಮಾಜವಾದಿ ಪಕ್ಷದ ಸ್ವಲ್ಪವಾದರೂ ಮತಗಳು ಬಿಜೆಪಿ ಬುಟ್ಟಿಗೆ ಬಂದು ಬೀಳಲಿದೆಯೇ.? ಎಂಬಿತ್ಯಾದ ಪ್ರಶ್ನೆಗಳನ್ನು ನೋಡಹೊರಟರೆ ಒಮ್ಮೆ ಉತ್ತರ ಪ್ರದೇಶದ ರಾಜಕೀಯದ ಒಳ ಹೊಕ್ಕು ನೋಡಬೇಕಾಗುತ್ತದೆ.
ಅಂದ ಹಾಗೆ ಮುಲಾಯಂ ಕುಟುಂಬದಿಂದ ಪಕ್ಷ ತೊರೆಯುತ್ತಿರುವುದು ಇದೆ ಮೊದಲೇನಲ್ಲ. ಈ ಹಿಂದೆ ಅಖಿಲೇಶ್ ಯಾದವ್ ಅವರ ಮಾವ ಪಕ್ಷದಲ್ಲಿ ಪ್ರಭಾವಿ ಮುಖಂಡರಾಗಿದ್ದ ಶಿವಪಾಲ್ ಯಾದವ್ ಕೂಡ ಅಖಿಲೇಶ್ ಜತೆಗಿನ ವೈಮನಿಸ್ಸಿನಿಂದಾಗಿ ಪಕ್ಷ ತೊರೆದು ಹೊಸ ಪಕ್ಷ ಕಟ್ಟಿದ್ದರು. ಆದರೆ ಸಮಾಜವಾದಿ ಪಕ್ಷದ ಮತಗಳನ್ನು ವಿಭಜಿಸಲು ಸಾಧ್ಯವಾಗಿರಲಿಲ್ಲ. ಇನ್ನು ಬಿಜೆಪಿಗೆ ಸೇರಿರುವ ಅಪರ್ಣ ಯಾದವ್ ಶಿವಪಾಲ್ ಯಾದವ್ ಅವರಂತೆ ದೊಡ್ಡ ನಾಯಕರೇನೂ ಅಲ್ಲ. ಚುನಾವಣೆಯಲ್ಲಿ ಒಮ್ಮೆಯೂ ಗೆದ್ದವರಲ್ಲ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ರೀಟಾ ಬಹುಗುಣ ಜೋಶಿ ಎದುರು ಸ್ಪರ್ಧಿಸಿ ಸೋಲು ಕಂಡಿದ್ದರು. ಹಾಗಾಗಿ ಅಪಾರ ಜನಬೆಂಬಲ ಇರುವ ನಾಯಕಿ ಅಂತೂ ಅಲ್ಲ.
ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಎಂದ ಮಾತ್ರಕ್ಕೆ ಆ ಪಕ್ಷದ ಕಾರ್ಯಕರ್ತರು ಬಿಜೆಪಿ ಕಡೆ ವಾಲುತ್ತಾರೆ ಅನ್ನುವುದು ಸುಳ್ಳಾಗುತ್ತದೆ. ಆ ಕಾರ್ಯಕರ್ತರು ಸದಾ ಮುಲಾಯಂ ಸಿಂಗ್ ಅವರಿಗೆ ನಿಷ್ಠರು. ಅಂತಹ ಬದಲಾವಣೆಗೆ ಮುಲಾಯಂ ಸಿಂಗ್ ಬಿಜೆಪಿ ಸೇರಬೇಕಷ್ಟೆ. ಹಾಗಾಗಿ ಬಿಜೆಪಿಗೆ ಮತದ ದೃಷಿಯಿಂದ ಲಾಭವೇನೂ ಇಲ್ಲ. ಮುಲಾಯಂ ಸೊಸೆ ನಮ್ಮ ಪಕ್ಷಕ್ಕೆ ಬಂದರು ಎನ್ನುವುದನ್ನು ಪ್ರಚಾರಕ್ಕೆ ಬಳಸಿಕೊಳ್ಳಬಹುದು ಅಷ್ಟೇ. ಸ್ವತಃ ಸಮಾಜವಾದಿ ಪಕ್ಷ ಕೂಡ ಈ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಅಪರ್ಣ ಯಾದವ್ ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್ ಬಿಜೆಪಿಯವರಲ್ಲಿ ಸಮಾಜವಾದಿ ಸಂಸ್ಕೃತಿ ಕಡಿಮೆಯಾಗಿದೆ ಹಾಗಾಗಿ ಅವರಿಗೆ ಆ ಬಗ್ಗೆ ತಿಳಿಸಿಕೊಡಲು ನಮ್ಮ ಪಕ್ಷದಿಂದ ಬಿಜೆಪಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಈ ವರ್ಷ ಸಾಕಾರಗೊಂಡ ಕಾಶಿ ಕಾರಿಡಾರ್, ಅಯೋಧ್ಯೆ ಹಾಗು ಹಿಂದುತ್ವದ ವಿಷಯಗಳನ್ನೇ ಹಿಡಿದು ಸಾಗಿದರೆ ಸಾಕು. ಬಿಜೆಪಿ ಬಹುಮತ ಪಡೆಯುವುದು ಕಷ್ಟವೇನಿಲ್ಲ. ಆದರೆ ಅಪರ್ಣ ಯಾದವ್ ಅವರು ಪಕ್ಷಕ್ಕೆ ಬಂದುದ್ದನ್ನೇ ಪ್ರಚಾರದ ಸಾಧನವಾಗಿ ಹೆಚ್ಚು ಒತ್ತು ಕೊಟ್ಟು ನಿಂತರೆ ಅದೇ ಬಿಜೆಪಿಗೆ ತಿರುಗುಬಾಣವಾಗುವುದು ಖಂಡಿತ.












































