
ಉಡುಪಿ: ಹಿಜಾಬ್ ಧರಿಸಿಕೊಂಡು ಬರುವವರಿಗೆ ಆನ್‌ಲೈನ್ ತರಗತಿ ಆರಂಭಿಸುವ ಪ್ರಸ್ತಾಪಕ್ಕೆ ಆರು ಮಂದಿ ವಿದ್ಯಾರ್ಥಿನಿಯರು ವಿರೋಧ ವ್ಯಕ್ತಪಡಿಸಿದ್ದು ನಾವು ಆನ್ಲೈನ್ ಕ್ಲಾಸಿಗೆ ಹಾಜರಾಗುವುದಿಲ್ಲ ಎಂದು ಹೇಳಿದ್ದಾರೆ.
ವಿರೋಧ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೇ ತರಗತಿಗೆ ಹಾಜರಾಗಲು ಈಗಲೂ ಅವಕಾಶವಿದೆ. ಒಂದು ವೇಳೆ ಹಿಜಾಬ್ ಧರಿಸುವುದೇ ಆದರೆ ಅಂತವರಿಗೆ ಅವರ ಶೈಕ್ಷಣಿಕ ಹಿತದೃಷ್ಟಿಯಿಂದ ಈ ವರ್ಷ ಇನ್ನುಳಿದ ಅವಧಿಗೆ ಅವರಿಗಾಗಿ ಆನ್‌ಲೈನ್ ಕ್ಲಾಸ್ ನಡೆಸಲು ಆಡಳಿತ ಮಂಡಳಿ ಸಿದ್ಧವಿದೆ. ಈ ಮೂಲಕ ಅವರು ಈ ವರ್ಷದ ವಾರ್ಷಿಕ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಸ್ಥಳೀಯ ಶಾಸಕ ಕೆ. ರಘುಪತಿ ಭಟ್ ಬುಧವಾರ ಹೇಳಿಕೆ ನೀಡಿದ್ದರು.
“ಹಿಜಾಬ್ ನಮ್ಮ ಸಂವಿಧಾನಾತ್ಮಕ ಹಕ್ಕು. ನಾವು ಹಿಜಾಬ್ ಹಾಕಿ ಕಾಲೇಜಿಗೆ ಹೋಗುತ್ತೇವೆ. ನಮಗೆ ಯಾವುದೇ ಆನ್ಲೈನ್ ಕ್ಲಾಸ್ ಗಳು ಬೇಡ. ಸರಕಾರಿ ಕಾಲೇಜಿನಲ್ಲಿ ನಮಗೆ ನಮ್ಮ ಹಕ್ಕು ಸಿಗದಿದ್ದರೆ ನಾವು ಬೇರೆಡೆ ಅದನ್ನು ನಿರೀಕ್ಷಿಸಲು ಸಾಧ್ಯವೇ” ಎಂದು ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿದ್ದಾರೆ.
ಆದರೆ ಹೀಗೆ ಪ್ರಶ್ನಿಸುವ ವಿದ್ಯಾರ್ಥಿನಿಯರು ಸಂವಿಧಾನದಲ್ಲೂ ಹಲವು ನಿಯಮಗಳಿವೆ ಅನ್ನೋದನ್ನ, ಮೂಲಭೂತ ಹಕ್ಕುಗಳಂತೆ ಮೂಲಭೂತ ಕರ್ತವ್ಯಗಳೂ ಇವೆ ಅನ್ನೋದನ್ನ ಓದಿದಂತೆ ತೋರುತ್ತಿಲ್ಲ. ಒಂದು ದೇಶಕ್ಕೆ ಒಂದು ಸಂವಿಧಾನ ಇರುವಂತೆ ಒಂದು ಶಿಕ್ಷಣ ಸಂಸ್ಥೆಗೂ ಅದರದ್ದೇ ಆದಂತಹ ಸಂವಿಧಾನ ಇರುತ್ತವೆ. ಅದರಲ್ಲಿ ಅದರದ್ದೇ ಆದಂತಹ ನಿಯಮಗಳಿರುತ್ತವೆ ಎಂಬ ಜ್ಞಾನ ಆ 6 ಮಂದಿ ಮುಸ್ಲಿಂ ವಿದ್ಯಾರ್ಥಿನಿಯರುಗಳ ಅಪ್ರಬುದ್ಧ ಮನಸ್ಸಿನಲ್ಲಿ ಇಲ್ಲವೇ ಇಲ್ಲ. ಒಂದು ಸಂಸ್ಥೆಯಲ್ಲಿ ಒಂದು ಯೂನಿಫಾರ್ಮ್ ಪದ್ದತಿ ಇದೆ ಎಂದಾದರೆ ತಾವೂ ಕೂಡ ಆ ಯೂನಿಫಾರ್ಮ್ ನಿಯಮವನ್ನು ಒಪ್ಪಿಕೊಳ್ಳಬೇಕು ಅನ್ನುವ ಸಾಮಾನ್ಯ ಜ್ಞಾನ ಆ ಮತಾಂಧ ವಿದ್ಯಾರ್ಥಿನಿಯರುಗಳಲ್ಲಿ ಇದ್ದಂತೆ ಕಾಣುತ್ತಿಲ್ಲ. ಒಂದು ಸಂಸ್ಥೆಯ ನಿಯಮವನ್ನು ಗಾಳಿಗೆ ತೂರಿ ಅಲ್ಲೂ ಕೂಡ ತಮ್ಮ ಧರ್ಮವನ್ನು ಹೊತ್ತು ತರುತ್ತೇವೆ, ನಮಗಿಷ್ಟ ಬಂದಂತೆ ಇರುತ್ತೇವೆ ಅಂದರೆ ಇವರುಗಳು ಶಿಕ್ಷಣ ಕಲಿಯೋದಕ್ಕೆ ಬಂದವರ ಎಂಬ ಸಂಶಯ ಕೂಡ ಮೂಡುವಂತೆ ಮಾಡುತ್ತದೆ.
ತಮಗೆ ಕ್ಲಾಸಿಗೆ ಹಾಜರಾಗಲು ಬಿಡುತ್ತಿಲ್ಲ, ನಮ್ಮ ಒಂದು ತಿಂಗಳ ತರಗತಿಗಳು ನಷ್ಟವಾಗಿವೆ ಎಂದು ಹಲುಬುವ ಈ ವಿದ್ಯಾರ್ಥಿನಿಯರಿಗೆ ಶಿಕ್ಷಣ ಮುಖ್ಯ ಅನ್ನುವ ಭಾವ ಲವಲೇಶವೂ ಇದ್ದಂತಿಲ್ಲ. ಶಿಕ್ಷಣ ಮುಖ್ಯವಾಗಿದ್ದರೆ ಕಳೆದ ಒಂದೂವರೆ ವರ್ಷಗಳಿಂದ ಹಿಜಾಬ್ ಧರಿಸದೇ ಕಾಲೇಜಿಗೆ ಹಾಜರಾಗಿದ್ದ ಇದೇ 6 ಮಂದಿ ವಿದ್ಯಾರ್ಥಿನಿಯರುಗಳು ಒಮ್ಮಿಂದೊಮ್ಮೆಲೆ ಕಳೆದ ಒಂದು ತಿಂಗಳ ಹಿಂದಿನಿಂದ ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಹಾಜರಾಗಿದ್ದು ಯಾಕೆ. ಈ ಅಚಾನಕ್ ಬೆಳವಣಿಗೆ ಯಾರ ಕುಮ್ಮಕ್ಕಿನಿಂದ ಆಗಿದ್ದು ಅನ್ನುವಂತದ್ದನ್ನು ಸ್ವತಃ ಆ 6 ವಿದ್ಯಾರ್ಥಿನಿಯರೇ ಹೇಳಬೇಕಾಗಿದೆ.
ಒಟ್ಟಿನಲ್ಲಿ ಮತಾಂಧತೆಯನ್ನು ಇಂತಹ ಬೆಳೆಯುವ ಕಲಿಯುವ ಮಕ್ಕಳ ತಲೆ ಹೊಕ್ಕಿಸಿದರೆ ಇವರ ಭವಿಷ್ಯವೇನು, ಈ ಬೆಳವಣಿಗಳಿಂದ ಕಾಲೇಜಿನ ಇತರೆ ವಿದ್ಯಾರ್ಥಿನಿಯರಿಗೆ ಆಗುವ ಕಿರಿಕಿರಿಗಳೇನು ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಮೂಡುತ್ತಿದೆ.












































