
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಇಬ್ಬರು ನಾಯಕರು ಕುಟುಂಬ ರಾಜಕಾರಣದಲ್ಲಿ ಪಾಲ್ಗೊಳ್ಳಲು ಮಕ್ಕಳನ್ನು ಪಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ಸುದ್ದಿ ಸಂಸ್ಥೆಯೊಂದಕ್ಕೆ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಕುಟುಂಬ ರಾಜಕೀಯವನ್ನು ಪ್ರಜಾಪ್ರಭುತ್ವಕ್ಕೆ ಅಪಾಯ ಎಂದು ಟೀಕಿಸಿದ ನಂತರ ಲಾಲು ಪ್ರಸಾದ್ ಅವರಿಂಗ ಈ ರೀತಿಯ ಹೇಳಿಕೆ ಹೊರ ಬಿದ್ದಿದೆ.
“ನಿತೀಶ್ ಕುಮಾರ್ ಮತ್ತು ಪ್ರಧಾನಿ ಮೋದಿಗೆ ಮಕ್ಕಳಾಗದಿದ್ದರೆ ನಾನೇನು ಮಾಡಲಿ, ನಿತೀಶ್ ಕುಮಾರ್ ಅವರಿಗೆ ಮಗನಿದ್ದಾನೆ, ಆದರೆ ರಾಜಕೀಯಕ್ಕೆ ಯೋಗ್ಯನಲ್ಲ, ನಾನೇನು ಮಾಡಲಿ, ಅವರಿಗೆ ಮಕ್ಕಳಾಗಲಿ ಎಂದು ನಾನೀಗ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಲಾಲು ಪ್ರಸಾದ್ ಯಾದವ್ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ನೀಡಿದ ಹೇಳಿಕೆಯಲ್ಲಿ ಕುಟುಂಬ ರಾಜಕಾರಣವನ್ನು ತರಾಟೆಗೆ ತೆಗೆದುಕೊಂಡಿದ್ದರು. “ಲೋಹಿಯಾ ಅವರ ಕುಟುಂಬವನ್ನು ನೀವು ಎಲ್ಲಿಯಾದರೂ ರಾಜಕೀಯದಲ್ಲಿ ನೋಡುತ್ತೀರಾ? ಅವರು ಸಮಾಜವಾದಿಯಾಗಿದ್ದರು; ನೀವು ಜಾರ್ಜ್ ಫರ್ನಾಂಡಿಸ್ ಅವರ ಕುಟುಂಬವನ್ನು ನೋಡುತ್ತೀರಾ? ಅವರು ಕೂಡ ಸಮಾಜವಾದಿಯಾಗಿದ್ದರು. ನಿತೀಶ್ ಕುಮಾರ್ ಅವರು ನಮ್ಮೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾರೆ, ಅವರು ಸಹ ಸಮಾಜವಾದಿ, ಅವರ ಕುಟುಂಬವನ್ನು ನೀವು ರಾಜಕೀಯದಲ್ಲಿ ನೋಡಿದ್ದೀರಾ?. ಆದರೆ ಕೆಲವರು ಪರಿವಾರ ರಾಜಕಾರಣ ಮಾಡುತ್ತಾ ತಾವುಗಳು ಸಮಾಜವಾದಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಅಂತಹವರು ನಕಲಿ ಸಮಾಜವಾದಿಗಳು” ಎಂದು ಪ್ರಧಾನಿ ಮೋದಿ ಹರಿಹಾಯ್ದಿದ್ದರು.
“ಎರಡು ಪ್ರತ್ಯೇಕ ಕುಟುಂಬಗಳು ನಡೆಸುತ್ತಿರುವ ಎರಡು ಪಕ್ಷಗಳಿರುವ ಜಮ್ಮು ಕಾಶ್ಮೀರದಿಂದ ಆರಂಭಿಸಿ, ಹರಿಯಾಣ, ಜಾರ್ಖಂಡ್, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಇದೇ ರೀತಿಯ ಪ್ರವೃತ್ತಿಯನ್ನು ನೀವು ನೋಡಬಹುದು. ವಂಶಾಡಳಿತ ರಾಜಕಾರಣ ಪ್ರಜಾಪ್ರಭುತ್ವದ ಬಹುದೊಡ್ಡ ಶತ್ರು” ಎಂದು ಪ್ರಧಾನಿ ಮೋದಿ ಹೇಳಿದ್ದರು.












































