
ಶಿವಮೊಗ್ಗ: ಶಿಕ್ಷಣಕ್ಕಿಂತ ತಮ್ಮ ಮತವೇ ಹೆಚ್ಚು ಎಂದು ಕೆಲ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ವಾಪಾಸ್ ಹೋದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಾಲೆ ಬೇಕಾದರೆ ಬಿಡುತ್ತೇವೆ ಆದರೆ ಹಿಜಾಬ್ ತೆಗೆಯುವುದಿಲ್ಲ ಎಂದು ಶಿವಮೊಗ್ಗದಲ್ಲಿ 13 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯದೆ ವಾಪಸಾಗಿದ್ದಾರೆ.
ಹಿಜಾಬ್ ವಿವಾದದಿಂದಾಗಿ 3 ದಿವಸ ರಜೆ ಕಳೆದು ಇಂದು ಸರ್ಕಾರದ ಆದೇಶ ಪ್ರಕಾರ 9 ಮತ್ತು 10ನೇ ತರಗತಿಗೆ ಶಾಲೆ ಪುನಾರಂಭವಾಗಿದೆ. ಕರ್ನಾಟಕ ಹೈಕೋರ್ಟ್ ಹಿಜಾಬ್ ಅಥವಾ ಕೇಸರಿ ಶಾಲು ರೀತಿಯ ಯಾವುದೇ ಧಾರ್ಮಿಕ ಗುರುತು ಇರುವ ಬಟ್ಟೆಗಳನ್ನು ಧರಿಸಬಾರದು ಎಂದು ಮಧ್ಯಂತರ ಆದೇಶ ನೀಡಿತ್ತು. ಆದರೆ ಹೆಚ್ಚಿನ ಕಡೆ ಮುಸ್ಲಿಂ ವಿದ್ಯಾರ್ಥಿನಿಯರು ಕೋರ್ಟ್ ಆದೇಶಕ್ಕೆ ಕಿಮ್ಮತ್ತು ನೀಡದೆ ಹಿಜಾಬ್ ಧರಿಸಿ ಬಂದಿದ್ದರು. ಆ ನಂತರ ಶಿಕ್ಷಕರು ಒಳಗಡೆ ಬಿಡದೆ ಕೋರ್ಟ್ ಆದೇಶವನ್ನು ಪಾಲಿಸಲು ಆದೇಶಿಸಿದ ನಂತರ ಹೆಚ್ಚಿನವರು ಹಿಜಾಬ್ ತೆಗೆದು ತರಗತಿಗಳಿಗೆ ಪ್ರವೇಶಿಸಿದರು. ಕೆಲವರು ಹಿಜಾಬ್ ತೆಗೆಯಲು ಒಪ್ಪದೇ ವಾಪಸಾದರು.
ಶಿವಮೊಗ್ಗದಲ್ಲಿ ಎಸ್ ಎಸ್ ಎಲ್ ಸಿ ಪೂರ್ವಭಾವಿ ಪರೀಕ್ಷೆಗೆ 13 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬಂದಿದ್ದರು. ತರಗತಿಯೊಳಗೆ ಹಿಜಾಬ್ ತೆಗೆಯಲು ಒಪ್ಪದ ಅವರುಗಳಿಗೆ ಶಿಕ್ಷಕರು ಪರೀಕ್ಷೆ ಬರೆಯಲು ಬಿಡಲಿಲ್ಲ. ಹಿಜಾಬ್ ತೆಗೆಯುವುದಿಲ್ಲ, ಪರೀಕ್ಷೆಯೂ ಬರೆಯುವುದಿಲ್ಲ ಎಂದ 13 ಮಂದಿ ವಿದ್ಯಾರ್ಥಿನಿಯರು ಮನೆಗೆ ವಾಪಸಾದರು.
ಇಂತಹುದೇ ಘಟನೆ ಕೊಡಗು ಜಿಲ್ಲೆಯಲ್ಲೂ ನಡೆದಿದ್ದು ಮುಸ್ಲಿಮರೇ ಹೆಚ್ಚಿರುವ ಪ್ರದೇಶದಲ್ಲಿರುವ ಕೊಡಗು ಜಿಲ್ಲೆಯ ನೆಲ್ಲಿಹುಡಿಕೇರಿ ಸರಕಾರಿ ಶಾಲೆಯಲ್ಲಿ ಇಂದು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದಿದ್ದರು. ಆದರೆ ಕೋರ್ಟ್ ಆದೇಶದ ಅನ್ವಯ ತರಗತಿ ಒಳಗಡೆ ಪ್ರವೇಶ ನೀಡದ ಕಾರಣ, ಹಿಜಾಬ್ ತೆಗೆಯಲು ಒಪ್ಪದ ಸುಮಾರು ೩೦ ಮಂದಿ ವಿದ್ಯಾರ್ಥಿಗಳು ಪೋಷಕರೊಡನೆ ಮನೆಗೆ ತೆರಳಿದರು.












































