HomeNationalಉಕ್ರೇನ್ 3 ಭಾಗಗಳಾಗಿ ಒಡೆದ ರಷ್ಯಾ, ಮತ್ತೆ ಮುಖಭಂಗಕ್ಕೊಳಗಾದ ಅಮೆರಿಕ: ಇಂದಿರಾ ಗಾಂಧೀ ತಂತ್ರಗಳನ್ನು ಬಳಸುತ್ತಿರುವ...

ಉಕ್ರೇನ್ 3 ಭಾಗಗಳಾಗಿ ಒಡೆದ ರಷ್ಯಾ, ಮತ್ತೆ ಮುಖಭಂಗಕ್ಕೊಳಗಾದ ಅಮೆರಿಕ: ಇಂದಿರಾ ಗಾಂಧೀ ತಂತ್ರಗಳನ್ನು ಬಳಸುತ್ತಿರುವ ಪುಟಿನ್

ಉಕ್ರೈನ್ ರಷ್ಯಾ ನಡುವೆ ಹಲವು ತಿಂಗಳುಗಳ ಕಾಲ ಬೂದಿ ಕೆಂಡದಂತಿದ್ದ ಪರಿಸ್ಥಿತಿ ತಾರ್ಕಿಕ ಅಂತ್ಯ ಕಾಣುವತ್ತ ಸಾಗಿದ್ದು, ಯುದ್ಧ ಭೀತಿಯ ನಡುವೆ ಯುದ್ಧವೇ ಇಲ್ಲದೆ ರಷ್ಯಾ ಮೊದಲ ಮೇಲುಗೈ ಸಾಧಿಸಿದೆ. ಫೆಬ್ರವರಿ 21ರ ಐತಿಹಾಸಿಕ ಘಟನೆಯಲ್ಲಿ ರಷ್ಯಾ ಪ್ರತ್ಯೇಕತಾ ಹೋರಾಟ ನಡೆಸುತ್ತಿದ್ದ ಉಕ್ರೇನ್ ನ ಎರಡು ಭೂ ಭಾಗಗಳನ್ನು ಪ್ರತ್ಯೇಕ ದೇಶವೆಂದು ಘೋಷಿಸಿ ಅವುಗಳಿಗೆ ಅಧ್ಯಕ್ಷರನ್ನು ಕೂಡ ನೇಮಿಸಿದೆ. ಈ ಮೂಲಕ ಉಕ್ರೇನ್ ಬೆನ್ನಿಗೆ ನಿಂತಿದ್ದ ಅಮೇರಿಕ ನೇತೃತ್ವದ ನ್ಯಾಟೋ ಪಡೆಗಳು ಮುಖಭಂಗಕ್ಕೆ ಒಳಗಾದಂತಾಗಿದೆ.

ಫೆಬ್ರವರಿ 21 ರಂದು ಭಾಷಣ ಮಾಡಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪೂರ್ವ ಉಕ್ರೇನ್‌ನಲ್ಲಿ ಎರಡು ಪ್ರದೇಶಗಳನ್ನು ಪ್ರತ್ಯೇಕ ಸ್ವತಂತ್ರ ಭಾಗ ಎಂದು ಗುರುತಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು. ಅದಾಗಿ ಕೆಲವೇ ನಿಮಿಷಗಳಲ್ಲಿ ಪುಟಿನ್ ಎರಡು ಪ್ರದೇಶಗಳನ್ನು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಮತ್ತು ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಎಂದು ಗುರುತಿಸುವ ಆದೇಶಕ್ಕೆ ಸಹಿ ಹಾಕಿದರು. ಎರಡು ಸ್ವತಂತ್ರ ದೇಶಗಗಳಿಗೆ ಅಧ್ಯಕ್ಷರನ್ನೂ ಕೂಡ ಆರಿಸಲಾಗಿದ್ದು ಡೆನಿಸ್ ಪುಶಿಲಿನ್ ಎಂಬವರು ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ ದೇಶದ ಅಧ್ಯಕ್ಷರಾಗಿದ್ದಾರೆ ಮತ್ತು ಲಿಯೊನಿಡ್ ಪೆಸಾಚ್ನಿಕ್ ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ ದೇಶದ ಅಧ್ಯಕ್ಷರಾಗಿ ನೇಮಿಸಲ್ಪಟ್ಟಿದ್ದಾರೆ. ಪೆಸಾಚ್ನಿಕ್ ಮತ್ತು ಪುಶಿಲಿನ್ ಇಬ್ಬರೂ 2014ರಿಂದ ಉಕ್ರೇನ್ ದೇಶದ ಪೂರ್ವ ಭಾಗದಲ್ಲಿ ಪ್ರತ್ಯೇಕತಾ ಪಡೆಗಳನ್ನು ಮುನ್ನಡೆಸುತ್ತಿದ್ದಾರೆ. ಈಗ ಈ ಎರಡೂ ಹೊಸ ದೇಶಗಳಿಗೆ ಸೇನೆ ಕಳುಹಿಸಿರುವ ರಷ್ಯಾ ಶಾಂತಿಪಾಲನೆಗಾಗಿ ಸೇನೆ ಕಳುಹಿಸುತ್ತಿದ್ದೇವೆ ಎಂದಿದೆ.

ಈ ಮೂಲಕ ಯುದ್ಧನೇ ಮಾಡದೇ ಅಮೇರಿಕ ನೇತೃತ್ವದ ನ್ಯಾಟೋ ದೇಶಗಳ ವಿರುದ್ಧ ಗೆದ್ದ ರಷ್ಯಾ ಅಮೆರಿಕವನ್ನು ಮತ್ತೆ ಜಾಗತಿಕವಾಗಿ ಅವಮಾನಗೊಳ್ಳುವಂತೆ ಮಾಡಿದ್ದಾರೆ. ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಸೇನಾ ಪಡೆಗಳನ್ನು ಹಿಂಪಡೆದು ತಾಲಿಬಾನಿಗಳಿಗೆ ಆಡಳಿತ ನಡೆಸಲು ಅವಕಾಶ ಕೊಟ್ಟು ಅಮೇರಿಕ ಕಂಡ ದುರ್ಬಲ ಅಧ್ಯಕ್ಷ ಎಂದು ಕರೆಸಿಕೊಂಡಿದ್ದ ಜೋ ಬಿಡೆನ್ ಇದೀಗ ಮತ್ತೆ ತಾನೊಬ್ಬ ಕೈಲಾಗದ ಅಧ್ಯಕ್ಷ ಎಂಬುದನ್ನು ಸಾಬೀತು ಮಾಡಿದ್ದಾರೆ. ಈ ಎರಡೂ ಘಟನೆಗಳ ಬಳಿಕ ಅಮೇರಿಕಾದಲ್ಲಿ ಜೋ ಬಿಡೆನ್ ಜನಪ್ರಿಯತೆ ಪಾತಾಳಕ್ಕೆ ಕುಸಿಯುತ್ತಿದೆ. ಅಮೆರಿಕ ಎಂದರೆ ದೊಡ್ಡಣ್ಣ ಎಂಬರ್ಥದಲ್ಲಿ ನೋಡುತ್ತಿದ್ದ ವಿಶ್ವ ಸಮೂಹ ಇದೀಗ ಅಮೇರಿಕ ಎಂದರೆ ಬೆಲೆ ಕೊಡಲಾಗದಂತೆ ಮಾಡಿರುವ ಜೋ ಬಿಡೆನ್ ಅಮೇರಿಕ ಕಂಡ ಅತೀ ದುರ್ಬಲ ಅಧ್ಯಕ್ಷ ಎಂಬ ಹಣೆಪಟ್ಟಿ ತನ್ನ ಹಣೆ ಮೇಲೆ ತಾನೇ ಅಂಟಿಸಿಕೊಂಡು ಬಿಟ್ಟಿದ್ದಾರೆ.

ಪುಟಿನ್ ಅವರ ಹೆಜ್ಜೆ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 1971ರ ನಡೆಗಳನ್ನು ನೆನಪಿಸುವಂತಿದೆ ಎಂಬುದು ರಕ್ಷಣಾ ವಿಶ್ಲೇಷಕರ ಅಭಿಪ್ರಾಯ. ಈಗಿನ ಬಾಂಗ್ಲಾ ಆಗಿನ ಪೂರ್ವ ಪಾಕಿಸ್ತಾನದಲ್ಲಿ ಶೇಖ್ ಮುಜಿಬುರ್ ರೆಹಮಾನ್ ನೇತೃತ್ವದಲ್ಲಿ ಬಂಗಾಳಿಗಳು ಪಾಕಿಸ್ತಾನದ ಉರ್ದು ಮಾತನಾಡುವ ಆಡಳಿತಗಾರರ ವಿರುದ್ಧ ದಂಗೆ ಎದ್ದರು. ದಂಗೆ ಎದ್ದ ಶೇಖ್ ಮುಜೀಬ್ ಅವರನ್ನು ಬಂಧಿಸಿ ಪಶ್ಚಿಮ ಪಾಕಿಸ್ತಾನಕ್ಕೆ (ಈಗಿನ ಪಾಕಿಸ್ತಾನ) ಕರೆದೊಯ್ಯಲಾಯಿತು. ಅದೇ ಹೊತ್ತಿಗೆ ಭಾರತದ ರಕ್ಷಣೆಯಲ್ಲಿದ್ದ ತಾಜುದ್ದೀನ್ ಅಹ್ಮದ್ ಏಪ್ರಿಲ್ 10 ರಂದು ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಘೋಷಿಸಿದರು. ಅವರು ಬಾಂಗ್ಲಾದೇಶದ ಮೊದಲ ಪ್ರಧಾನಿಯಾದರು. ಅಹ್ಮದ್ ಅವರು ಪಾಕಿಸ್ತಾನದ ನಿಯಂತ್ರಣದಿಂದ ಬಾಂಗ್ಲಾ ದೇಶವನ್ನು ಮುಕ್ತಗೊಳಿಸಲು ಭಾರತದ ಮಿಲಿಟರಿ ಪಡೆಗಳನ್ನು ಕಳುಹಿಸಲು ಪ್ರಧಾನಿ ಇಂದಿರಾ ಗಾಂಧಿಯವರಿಗೆ ಮನವಿ ಮಾಡಿಕೊಂಡರು. ಇಂದಿರಾ ಗಾಂಧಿ ಅಸ್ತು ಎಂದರು.

ಪೂರ್ವ ಉಕ್ರೇನ್‌ನಲ್ಲಿರುವ ರಷ್ಯಾದ ಬಂಡುಕೋರರಂತೆ ಇಂದಿರಾ ಗಾಂಧಿಯವರ ಆಗಿನ ಗೂಢಚಾರಿಕೆ ಮುಖ್ಯಸ್ಥ ಆರ್.ಎನ್. ರಾವ್ ಪೂರ್ವ ಪಾಕಿಸ್ತಾನದಲ್ಲಿ ಪಾಕಿಸ್ತಾನದ ನಿಯಂತ್ರಣದ ವಿರುದ್ಧ ಗೆರಿಲ್ಲಾ ಕಾರ್ಯಾಚರಣೆಗಳನ್ನು ನಡೆಸಲು ಕಾವೊ ಮುಕ್ತಿ ಬಹಿನಿ ಎಂಬ ಬಂಡಾಯ ಪಡೆಯನ್ನು ರಚಿಸಿದರು. ಭಾರತದ ಹಸ್ತಕ್ಷೇಪದ ಬಗ್ಗೆ ಜಗತ್ತಿಗೆ ಮನವರಿಕೆ ಮಾಡಲು ಅಂತರರಾಷ್ಟ್ರೀಯ ಪ್ರವಾಸವನ್ನು ನಡೆಸಿದ ಇಂದಿರಾ ಗಾಂಧೀ ರಾಜತಾಂತ್ರಿಕ ವ್ಯೂಹವನ್ನೇ ರಚಿಸಿಬಿಟ್ಟಿದ್ದರು. ಡಿಸೆಂಬರ್ 1971 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧವು ಪ್ರಾರಂಭವಾಗಿ ಬಾಂಗ್ಲಾದೇಶದ ಜನ್ಮಕ್ಕೆ ಕಾರಣವಾದಾಗ ಪಾಕ್ ಪರ ಒಲವು ಹೊಂದಿದ್ದ ಅಮೇರಿಕ ಭಾರತವನ್ನು ಬೆದರಿಸಲು ಆರಂಭಿಸಿತು. ಭಾರತದ ದುರ್ಗೆ ಎಂದು ರಾಜಕೀಯ ವಿರೋಧಿಗಳಿಂದಲೇ ಕರೆಸಲ್ಪಟ್ಟ ಇಂದಿರಾ ಗಾಂಧೀ ಜಗ್ಗಲಿಲ್ಲ. ಮತ್ತೊಂದೆಡೆ ರಷ್ಯಾ ಭಾರತದ ಬೆನ್ನಿಗಿತ್ತು. ಇನ್ನೇನು ಈ ಯುದ್ಧ ದೊಡ್ಡ ಸೂಪರ್ ಪವರ್ ರಾಷ್ಟ್ರಗಳ ನಡುವಿನ ಯುದ್ಧವಾಗಿ ಮಾರ್ಪಾಡಾಗುತ್ತದೆ ಎಂದಾಗ ಭಾರತ ಯಾರದೇ ಸಹಾಯವಿಲ್ಲದೆ ಅತೀ ಕಡಿಮೆ ಸಮಯದಲ್ಲಿ ಪಾಕಿಸ್ತಾನದ ಮೇಲೆ ವಿಜಯ ಸಾಧಿಸಿಬಿಟ್ಟಿತ್ತು. ಬಾಂಗ್ಲಾವನ್ನು ಪಾಕಿಸ್ತಾನದಿಂದ ಬೇರ್ಪಡಿಸಿ ಪಾಕ್ ಜಂಘಾಬಲವನ್ನೇ ಅಡಗಿಸಲಾಯಿತು.

1971ರಲ್ಲಿ, ಇಂದಿರಾ ಗಾಂಧಿ ಅವರು ಬಾಂಗ್ಲಾದೇಶದ ಜನರನ್ನು ರಕ್ಷಿಸಲು ಮತ್ತು ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾ ನಿರಾಶ್ರಿತರನ್ನು ಮರಳಿ ಕಳುಹಿಸಲು ಸಹಾಯ ಮಾಡಲು ಭಾರತದ ಮಿಲಿಟರಿ ಹಸ್ತಕ್ಷೇಪದ ಅಗತ್ಯವನ್ನು ಪ್ರಸ್ತುತಪಡಿಸಿದರು. ಈಗ ರಷ್ಯಾ ಅಧ್ಯಕ್ಷ ಪುಟಿನ್ ಅದೇ ರೀತಿ ವರ್ತಿಸಿದ್ದಾರೆ. ಲುಹಾನ್ಸ್ಕ್ ಮತ್ತು ಡೊನೆಟ್ಸ್ಕ್ ಜನರನ್ನು ರಕ್ಷಿಸಲು ಶಾಂತಿಪಾಲನಾ ಪಡೆಗಳನ್ನು ಕಳುಹಿಸಲು ಪ್ರಾರಂಭಿಸಿದ್ದಾರೆ. ಅಂದು ಇಂದಿರಾ ಗಾಂಧಿಯವರ ಕಾರ್ಯವನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ ಏಕೈಕ ದೇಶವೆಂದರೆ ಸೋವಿಯತ್ ಒಕ್ಕೂಟ. ಅದೇ ಈಗಿನ ರಷ್ಯಾ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments