
ಬೆಂಗಳೂರು: ಹಿಜಾಬ್ ಕುರಿತ ಮುಂದುವರೆದ ವಿಚಾರಣೆಯಲ್ಲಿ ಇಂದು ಹೈಕೋರ್ಟ್ ಮಹತ್ವದ ಸ್ಪಷ್ಟನೆ ನೀಡಿದ್ದು ವಿಷಯ ಇತ್ಯರ್ಥ ಆಗೋವರೆಗೂ ಹಿಜಾಬ್ ಸೇರಿದಂತೆ ಯಾವುದೇ ಧಾರ್ಮಿಕ ಉಡುಪುಗಳನ್ನು ಧರಿಸದಂತೆ ಸ್ಪಷ್ಟಪಡಿಸಿದೆ. “ನಾವು ಅದನ್ನು ಸ್ಪಷ್ಟವಾಗಿ ಹೇಳುತ್ತಿದ್ದೇವೆ, ಎಲ್ಲೆಲ್ಲಿ ಸಮವಸ್ತ್ರ ನಿಗದಿಪಡಿಸಲಾಗಿದೆ ಅಲ್ಲಿ ಖಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಅದು ಪದವಿ ಕಾಲೇಜು, ಪಿಜಿ ಕಾಲೇಜು ಅಥವಾ ಪದವಿಪೂರ್ವ ಕಾಲೇಜೇ ಇರಲಿ ಸಮವಸ್ತ್ರ ನಿಯಮವನ್ನು ಅನುಸರಿಸಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಅವಸ್ತಿ ಹೇಳಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಉಡುಪುಗಳನ್ನು ಅನುಮತಿಸಬಾರದು ಎಂಬ ನ್ಯಾಯಾಲಯದ ಮಧ್ಯಂತರ ಪ್ರಸ್ತಾವನೆಯು ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ, ಆದರೆ ಅವರು ಕಾಲೇಜು ಸೂಚಿಸಿದ ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅವಸ್ತಿ ಹೇಳಿದರು. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬನ್ನು ತೆಗೆದುಹಾಕಲು ಕೆಲ ಶಿಕ್ಷಕರನ್ನು ಒತ್ತಾಯಿಸಿದ ಘಟನೆಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಟ್ಟ ಮುಖ್ಯ ನ್ಯಾಯಾಧೀಶರು, ನ್ಯಾಯಾಲಯದ ಆದೇಶವು ವಿದ್ಯಾರ್ಥಿಗಳಿಗೆ ಮಾತ್ರ ಎಂದು ಹೇಳಿದರು.
ವಿಚಾರಣೆಯನ್ನು ಗುರುವಾರಕ್ಕೆ (ಫೆಬ್ರವರಿ 24) ಮುಂದೂಡಲಾಗಿದೆ.












































