HomeMovieಚಾಲಿಪೋಲಿಲು ನಿರ್ದೇಶಕರ "ಮಗನೇ ಮಹಿಷ" ಸಿನೆಮಾ ಪೋಸ್ಟರ್ ಬಿಡುಗಡೆ: ಏಪ್ರಿಲ್ ತಿಂಗಳಲ್ಲಿ ಚಿತ್ರ ತೆರೆಗೆ

ಚಾಲಿಪೋಲಿಲು ನಿರ್ದೇಶಕರ “ಮಗನೇ ಮಹಿಷ” ಸಿನೆಮಾ ಪೋಸ್ಟರ್ ಬಿಡುಗಡೆ: ಏಪ್ರಿಲ್ ತಿಂಗಳಲ್ಲಿ ಚಿತ್ರ ತೆರೆಗೆ

ಮಂಗಳೂರು: ಚಾಲಿಪೋಲಿಲು ಎಂಬ ಸಿನೆಮಾ ತುಳು ಚಿತ್ರರಂಗದಲ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಭರ್ಜರಿ ಕಲೆಕ್ಷನ್ ಜತೆಗೆ ಬರೋಬ್ಬರಿ ಒಂದು ವರ್ಷ ಓಡಿದ ಚಿತ್ರವದು. ತುಳು ಚಿತ್ರರಂಗಕ್ಕೆ ಆ ಒಂದು ಮಾಸ್ಟರ್ ಪೀಸ್ ಅನ್ನು ನೀಡಿದ ನಿರ್ದೇಶಕ ವೀರೇಂದ್ರ ಶೆಟ್ಟಿ ಇದೀಗ ಮತ್ತೊಂದು ತುಳು ಸಿನೆಮಾ ಜತೆಗೆ ಹಾಜರಾಗಿದ್ದಾರೆ. ಅದುವೇ ಬಹು ನಿರೀಕ್ಷಿತ “ಮಗನೇ ಮಹಿಷ”. ಅಂದ ಹಾಗೆ ಇದು ತುಳು ಹಾಗು ಕನ್ನಡ ಎರಡೂ ಭಾಷೆಗಳಲ್ಲಿ ತಯಾರಾದ ದ್ವಿ ಭಾಷಾ ಚಿತ್ರವೆಂಬುದು ವಿಶೇಷ.

“ಮಗನೇ ಮಹಿಷ” ಎಂಬ ಯಕ್ಷಗಾನದ ಜನಪ್ರಿಯ ಡೈಲಾಗ್ ಅನ್ನು ಚಿತ್ರಕ್ಕೆ ಶೀರ್ಷಿಕೆ ಇಟ್ಟು ಚಿತ್ರದ ಬಗೆಗಿನ ಕುತೂಹಲವನ್ನು ಟೈಟಲ್ ನಿಂದಲೇ ಹೆಚ್ಚಿಸಿರುವ ವೀರೇಂದ್ರ ಶೆಟ್ಟಿ ಚಾಲಿಪೋಲಿಲುವಿನ ಯಶಸ್ವೀ ತಾರಾಗಣವನ್ನೇ ಇಲ್ಲೂ ಮುಂದುವರೆಸಿದ್ದಾರೆ. ನವೀನ್ ಪಡೀಲ್, ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಪ್ರಮುಖ ಪಾತ್ರದಲ್ಲಿದ್ದು ಮತ್ತೊಮ್ಮೆ ನಗಿಸಲು ಸಜ್ಜಾಗಿದ್ದಾರೆ. ಇಂದು ಬಿಡುಗಡೆಯಾದ ಪೋಸ್ಟರಿನಲ್ಲಿ ಈ ನಾಲ್ವರು ನೃತ್ಯ ಮಾಡುವ ಭಂಗಿಯಲ್ಲಿರುವ ಚಿತ್ರಗಳಿದ್ದು ಚಾಲಿಪೋಲಿಲುವಿನ ಮುಂದುವರೆದ ಪಾತ್ರಗಳೇ ಎಂಬುದಕ್ಕೆ ಚಿತ್ರ ಬಿಡುಗಡೆವರೆಗೆ ಕಾಯಬೇಕಾಗಿದೆ.

“ಮಗನೇ ಮಹಿಷ” ತುಳು ಹಾಗು ಕನ್ನಡ ಎರಡೂ ಭಾಷೆಗಳಲ್ಲಿ ಬರುತ್ತಿದ್ದು ಏಪ್ರಿಲ್ 19 ರಂದು ತುಳು ವರ್ಷನ್ ಮಾತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆ ಯಾಗಲಿದೆ. ಕನ್ನಡ ವರ್ಷನ್ ಓಟಿಟಿ ಪ್ಲಾಟ್-ಫಾರ್ಮ್ ಅಲ್ಲಿ ಬಿಡುಗಡೆಯಾಗಲಿದ್ದು ಅದರ ದಿನಾಂಕವನ್ನು ಇನ್ನಷ್ಟೇ ಘೋಷಿಸಬೇಕಾಗಿದೆ ಎಂದು ನಿರ್ದೇಶಕ ವೀರೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಚಾಲಿಪೋಲಿಲು ಚಿತ್ರದ ನಂತರ ಕನ್ನಡದತ್ತ ವಾಲಿದ್ದ ನಿರ್ದೇಶಕ ವೀರೇಂದ್ರ ಶೆಟ್ಟಿ ಅಲ್ಲಿ “ಸವರ್ಣ ದೀರ್ಘ ಸಂಧಿ” ಎನ್ನುವ ಕನ್ನಡ ಸಿನೆಮಾ ನಿರ್ದೇಶಿಸಿ ಆ ಚಿತ್ರದ ಮೂಲಕ ನಾಯಕರಾಗಿಯೂ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆಗೈದಿದ್ದರು. ಆ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಸಾಧನೆ ತೋರದಿದ್ದರೂ ಚಿತ್ರ ವಿಮರ್ಶಕರಿಂದ ಭರವಸೆಯ ಚಿತ್ರ ಎಂಬ ಪಾಸಿಟಿವ್ ವಿಮರ್ಶೆ ಪಡೆದಿತ್ತು. ಇದೀಗ ಔಟ್ ಅಂಡ್ ಔಟ್ ಕಾಮಿಡಿಯೊಂದಿಗೆ ಮತ್ತೆ ತುಳು ಸೇರಿ ಕನ್ನಡ ಭಾಷೆ ಎರಡರಲ್ಲೂ ಸಿನೆಮಾ ಹೊರತರುತ್ತಿದ್ದು ತುಳುವರು ನಿರ್ದೇಶಕರ ಮೇಲಿನ ಅಪಾರ ವಿಶ್ವಾಸದಿಂದ ಕಾಯುತ್ತಿರುವುದು ಸುಳ್ಳಲ್ಲ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments