
ಲಖನೌ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಭಾಗಶಃ ಹೊರಬಿದ್ದಿದ್ದು ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮರಳಿ ಅಧಿಕಾರಕ್ಕೆ ಏರುವುದರ ಮೂಲಕ 37 ವರ್ಷಗಳ ಬಳಿಕ ದಾಖಲೆ ಬರೆದಿದ್ದಾರೆ. ಸತತ 2ನೇ ಬಾರಿಗೆ ಯೋಗಿ ಸರ್ಕಾರ್ ರಚನೆಯಾಗುತ್ತಿದ್ದು ಇತ್ತೀಚಿನ ಎಣಿಕೆ ಪ್ರಕಾರ ಬಿಜೆಪಿ ಮತ್ತು ಮಿತ್ರ ಪಕ್ಷಗಳು 265 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು.
ಕುತೂಹಲ ಕೆರಳಿಸಿದ್ದ ಮತ್ತೊಂದು ರಾಜ್ಯವಾದ ಪಂಜಾಬ್ ಆಮ್ ಆದ್ಮಿ ಕಡೆಗೆ ವಾಲಿದ್ದು ಆಪ್ ಪಕ್ಷ ಅಭೂತಪೂರ್ವ ಗೆಲುವು ದಾಖಲಿಸಿದೆ. ಈ ಗೆಲುವು ಆಪ್ ದೆಹಲಿಯಲ್ಲಿ ದಾಖಲಿಸಿದ್ದ ಗೆಲುವಿನಂತೆಯೇ ಕಂಡು ಬರುತ್ತಿದ್ದು ಒಟ್ಟು 117 ಸೀಟುಗಳಲ್ಲಿ 90 ಸೀಟುಗಳಲ್ಲಿ ಜಯಭೇರಿ ಮೊಳಗಿಸಿದೆ. ಆಡಳಿತಾರೂಢ ಕಾಂಗ್ರೆಸ್ 17 ಸ್ಥಾನಗಳಿಗೆ ಕುಸಿದಿದೆ.
ಉತ್ತರಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯಾನಾಥ್ ನೇತೃತ್ವದ ಬಿಜೆಪಿ ಸತತ 2ನೇ ಬಾರಿಗೆ ಅಧಿಕಾರಕ್ಕೆ ಏರುವುದು ಅಧಿಕೃತವಾಗಿದೆ. ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಅರ್ಧಕ್ಕಿಂತ ಹೆಚ್ಚು ಅಂದರೆ 265 ಸ್ಥಾನಗಳಲ್ಲಿ ಯೋಗಿ ಆದಿತ್ಯಾನಾಥ್ ನೇತೃತ್ವದ ಬಿಜೆಪಿ ಮುನ್ನಡೆ ಸಾಧಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿ ನಿಂತಿದೆ. ಪ್ರಬಲ ಸ್ಪರ್ಧೆ ಒಡ್ಡಿದ್ದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು 133 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವೀಯಾಗಿದೆ. ಮಾಯಾವತಿ ಅವರ ಬಿಎಸ್ ಪಿ 3, ಕಾಂಗ್ರೆಸ್ 1 ಮತ್ತು ಇತರರು 3 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಪ್ರತಿ ಚುನಾವಣೆಯಲ್ಲಿ ಸರಕಾರ ಬದಲಿಸುತ್ತಿರುವ ಯುಪಿ ಜನತೆ ಈ ಬಾರಿ ಬಿಜೆಪಿಗೇ ಮರಳಿ ಅಧಿಕಾರದ ಖುರ್ಚಿ ನೀಡಿದೆ. 1985ರ ಬಳಿಕ ಇದೇ ಮೊದಲ ಬಾರಿಗೆ ಆಡಳಿತ ಪಕ್ಷವೇ ಚುನಾವಣೆಯಲ್ಲಿ ಗೆದ್ದು ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿದಂತಾಗಲಿದೆ. 2017ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 312 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಎಸ್ಪಿ 47, ಬಿಎಸ್ಪಿ 19 ಹಾಗೂ ಕಾಂಗ್ರೆಸ್ 07ರಲ್ಲಿ ಗೆಲುವು ಸಾಧಿಸಿದ್ದವು. ಈ ಬಾರಿ ಸಮಾಜವಾದಿ ಪಕ್ಷದ ಪ್ರಬಲ ಸ್ಪರ್ಧೆಯ ಕಾರಣ ಹಾಗು ಕೆಲವೆಡೆ ಕಂಡು ಬಂದ ಆಡಳಿತ ವಿರೋಧಿ ಅಲೆಯ ಕಾರಣ ಸೀಟುಗಳ ಸಂಖ್ಯೆಯಲ್ಲಿ ಕೊಂಚ ತಗ್ಗಿಸಿಕೊಂಡಿದೆ.












































