ಲಕ್ನೋ: ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ದಾಖಲೆಯ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ತನ್ನ ಎರಡನೇ ಅವಧಿಯನ್ನು ಭರ್ಜರಿಯಾಗಿಯೇ ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಲಕ್ನೋದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್ ಶುಕ್ರವಾರ (ಮಾರ್ಚ್ 25, 2022) ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸತತ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು.
ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಯೋಗಿ ಅವರು ಪದಗ್ರಹಣ ಮಾಡಿದರು. ಯೋಗಿ ಜತೆಗೆ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಅವರು ಉತ್ತರಪ್ರದೇಶದ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದಿನ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಹಿಂದುಳಿದ ವರ್ಗಗಳ ನಾಯಕ ಕೇಶವ ಪ್ರಸಾದ್ ಮೌರ್ಯ ಈ ಬಾರಿಯ ಚುನಾವಣೆಯಲ್ಲಿ ಸೋಲು ಕಂಡಿದ್ದರೂ ಪಕ್ಷಕ್ಕೆ ಅವರ ಕೊಡುಗೆ ಮತ್ತು ಅಗತ್ಯ ಅರಿತು ಅವರನ್ನು ಮತ್ತೆ ಉಪಮುಖ್ಯಮಂತ್ರಿಯಾಗಿ ಮುಂದುವರೆಸಲಾಗಿದೆ. ಯೋಗಿ ಆದಿತ್ಯನಾಥ್ ಅವರು 37 ವರ್ಷಗಳಲ್ಲಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ ಮೊದಲ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ.
ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಪ್ರಮಾಣ ವಚನ ಬೋಧಿಸಿದರು. ಸುಮಾರು 85,000 ಜನ ಈ ಸಮಾರಂಭಕ್ಕೆ ಸಾಕ್ಷಿಯಾದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಮೈತ್ರಿಕೂಟವು 403 ಸ್ಥಾನಗಳಲ್ಲಿ 273 ಸ್ಥಾನಗಳನ್ನು ಗೆದ್ದಿದ್ದರೆ, ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷ (ಎಸ್‌ಪಿ) ನೇತೃತ್ವದ ಮೈತ್ರಿಕೂಟ 125 ಸ್ಥಾನಗಳನ್ನು ಗಳಿಸಿತ್ತು.












































