
ನವದೆಹಲಿ: ದೇಶದಾದ್ಯಂತ ಎದ್ದಿರುವ ಬೆಲೆ ಏರಿಕೆ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ದೇಶದಾದ್ಯಂತ ಮೂರು ಹಂತಗಳಲ್ಲಿ ಪ್ರತಿಭಟನಾ ಅಭಿಯಾನವನ್ನು ಘೋಷಿಸಿದೆ. “ಮೆಹಂಗೆ ಮುಕ್ತ್ ಭಾರತ್ ಅಭಿಯಾನ್”ದ ಅಡಿಯಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 7 ರವರೆಗೆ ದೇಶಾದ್ಯಂತ ಪ್ರತಿಭಟನಾ ಮೆರವಣಿಗೆಗಳನ್ನು ಆಯೋಜಿಸಿದೆ.
ದೆಹಲಿಯಲ್ಲಿ ಇಂದು (ಶನಿವಾರ) ನಡೆದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಈ ಹೊಸ ಅಭಿಯಾನವನ್ನು ಪ್ರಾರಂಭಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗು ಪಕ್ಷದ ವಕ್ತಾರರೂ ಆಗಿರುವ ರಣದೀಪ್ ಸುರ್ಜೇವಾಲಾ ಅವರು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಘೋಷಿಸಿದರು. “ಮೊದಲ ಹಂತದ ಅಭಿಯಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾಮಾನ್ಯ ಜನರು ಮಾರ್ಚ್ 31 ರಂದು ತಮ್ಮ ಮನೆಗಳ ಹೊರಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತಾರೆ. ಎಲ್ಪಿಜಿ ಸಿಲಿಂಡರ್ಗಳಿಗೆ ಹಾರ ಹಾಕಿ, ಡ್ರಮ್ ಬಾರಿಸಲಾಗುತ್ತದೆ. ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದ ವಿರುದ್ಧ ಬಿಜೆಪಿ ಸರ್ಕಾರದ ಗಮನ ಸೆಳೆಯಲು ಕಾಂಗ್ರೆಸ್ ಕಾರ್ಯಕರ್ತರು ಪ್ರಯತ್ನಿಸುತ್ತಾರೆ ಎಂದು ಹೇಳಿದರು.












































