HomeArticlesದುಸ್ಥಿತಿಯಲ್ಲಿ ಶ್ರೀಲಂಕಾದ ಆರ್ಥಿಕತೆ ಮತ್ತು ವಿಶ್ವಕ್ಕೆ ಅದು ಕಲಿಸುವ ಪಾಠ

ದುಸ್ಥಿತಿಯಲ್ಲಿ ಶ್ರೀಲಂಕಾದ ಆರ್ಥಿಕತೆ ಮತ್ತು ವಿಶ್ವಕ್ಕೆ ಅದು ಕಲಿಸುವ ಪಾಠ

ಲೇಖನ: ವಿನಾಯಕ ಗಾವಂಕರ

ಶ್ರೀಲಂಕಾದ ಜನರು  ಅವರ ಹೊಸ ವರ್ಷವನ್ನು ಕೆಲವೇ ದಿನಗಳ ಹಿಂದೆ ಬರಮಾಡಿಕೊಂಡರು. ಆದರೆ ಅಲ್ಲಿ ಸಂಭ್ರಮವಿರಲಿಲ್ಲ, ನೋವು ಆಕ್ರೋಶಗಳು ಅವರ ಪ್ರತಿಭಟನೆಯಲ್ಲಿ ಎದ್ದು ಕಾಣುತ್ತಿದ್ದವು. ದೂರದೃಷ್ಟಿ ಇಲ್ಲದ ರಾಜಕಾರಣಿಗಳು ಇಂದು ಶ್ರೀಲಂಕಾವನ್ನು ಅಸಹನೀಯ ಪರಿಸ್ಥಿತಿಗೆ ನೂಕಿದ್ದಾರೆ. ದಿನಕ್ಕೆ ಹನ್ನೆರಡು ಗಂಟೆಗಳ ಕಾಲ ವಿದ್ಯುತ್ ಕಡಿತ ಸಾಮಾನ್ಯವಾಗಿದೆ. ಅವಶ್ಯಕ ಇಂಧನ, ಆಹಾರ- ಧಾನ್ಯಗಳಿಗಾಗಿ ಶ್ರೀಲಂಕಾದ ಜನರು ಆಂಜನೇಯನ ಬಾಲದಂತಹ ಉದ್ದನೆಯ ಸಾಲುಗಳಲ್ಲಿ ನಿಲ್ಲುವಂತಾಗಿದೆ. ಶ್ರೀಲಂಕಾದಲ್ಲಿ ಹಣದುಬ್ಬರ ( Inflation) ಗಗನಕ್ಕೇರಿದ್ದು 17.5% ನ್ನು ತಲುಪಿದೆ. ವರ್ಷದ ಹಿಂದೆ ಪ್ರತಿ ಕೆ.ಜಿ. ಅಕ್ಕಿಗೆ 80 ರೂಪಾಯಿಗಳನ್ನು ನೀಡುತ್ತಿದ್ದ ಲಂಕೆಯ ಜನ ಇಂದು 500 ರೂಪಾಯಿಗಳನ್ನು ಕೊಟ್ಟು 1 ಕೆ.ಜಿ. ಅಕ್ಕಿಯನ್ನು ಖರೀದಿಸುತ್ತಿದ್ದಾರೆ. ಸಾಲದ ಸುಳಿಗೆ ಸಿಲುಕಿರುವ ಶ್ರೀಲಂಕಾದ ಸಾಲ ಹಾಗೂ ಜಿ.ಡಿ.ಪಿ.ಯ ಅನುಪಾತ ಈಗ ದಿಗ್ಭ್ರಮೆಗೊಳಿಸುವ 120% ರಷ್ಟಾಗಿದೆ. ಈಗ ಶ್ರೀಲಂಕಾದ ಬಳಿ ಇರುವ ವಿದೇಶಿ ವಿನಿಮಯ ಸಂಗ್ರಹ (  Foreign Exchange  Reserves) ಕೇವಲ 1.9 ಬಿಲಿಯನ್ ಡಾಲರ್ , ಕೇವಲ ಒಂದು ತಿಂಗಳ ಶ್ರೀಲಂಕಾದ ಆಮದಿಗೆ ಸಾಕಾಗುವಷ್ಟು ! ಇದನ್ನು ಭಾರತದ 630 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಸಂಗ್ರಹದೊಂದಿಗೆ ಹೋಲಿಸಿ ನೋಡಿ!

ಪರಿಸ್ಥಿತಿ ವಿಕೋಪಕ್ಕೆ ಹೋಗಿ ಶ್ರೀಲಂಕಾದ ಅಧ್ಯಕ್ಷ  ಗೊಟಬಾಯ ರಾಜಪಕ್ಸ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಜನರ ಆಕ್ರೋಶ ಭುಗಿಲೆದ್ದ ಕಾರಣ ತುರ್ತು ಪರಿಸ್ಥಿತಿಯನ್ನು ಕೆಲವೇ ದಿನಗಳಲ್ಲಿ ವಾಪಸ್ ಪಡೆಯಲಾಯಿತು. ಹದಗೆಟ್ಟ ಆರ್ಥಿಕ ಸ್ಥಿತಿಯ ವಿರುದ್ಧ ಪ್ರತಿಭಟಿಸಿದ ಜನರು ಅಧ್ಯಕ್ಷ ಗೊಟಬಾಯ ಮತ್ತು ಅವರ ಸಹೋದರ ಹಾಗೂ ಲಂಕೆಯ ಪ್ರಧಾನಿಯಾಗಿರುವ ಮಹಿಂದಾ ರಾಜಪಕ್ಸ ಇವರುಗಳ ರಾಜೀನಾಮೆಗೆ ಆಗ್ರಹಿಸಿದರು. ಆದರೆ ಕೇವಲ ಕ್ಯಾಬಿನೆಟ್ ಸದಸ್ಯರು ಮಾತ್ರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ಪರಿಣಾಮ ಶ್ರೀಲಂಕಾದಲ್ಲಿ ಹಣಕಾಸು ಸಚಿವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ನೂತನ ಹಣಕಾಸು ಸಚಿವರಾಗಿ ಅಲಿ ಸಬ್ರಿ ಅಧಿಕಾರ ವಹಿಸಿಕೊಂಡಿದ್ದಾರೆ. 

ಅಧ್ಯಕ್ಷ  ಗೊಟಬಾಯ ವಿರೋಧ ಪಕ್ಷಗಳ ಸದಸ್ಯರನ್ನು ಒಳಗೊಂಡ ಕ್ಯಾಬಿನೆಟ್ ನ್ನು ರಚಿಸುವ ಪ್ರಸ್ತಾಪವನ್ನು ಮುಂದಿಟ್ಟಾಗ ವಿರೋಧ ಪಕ್ಷಗಳು ಅದನ್ನು ತಿರಸ್ಕರಿಸಿದವು. ಕಂಗೆಟ್ಟ ಶ್ರೀಲಂಕಾ ಸರ್ಕಾರ ಕೊನೆಗೂ ಐ.ಎಂ.ಎಫ್ ( ಅಂತರಾಷ್ಟ್ರೀಯ ಹಣಕಾಸು ನಿಧಿ) ನ ಸಹಾಯಕ್ಕಾಗಿ ಕೈಚಾಚಿದೆ, ಸುಮಾರು 4 ಬಿಲಿಯನ್ ಡಾಲರ್ ಗಳ ಆರ್ಥಿಕ ನೆರವನ್ನು ಶ್ರೀಲಂಕಾ ಕೇಳುತ್ತಿದೆ. ಇತ್ತ ಭಾರತ ಶ್ರೀಲಂಕಾದ ನೆರವಿಗೆ ನಿಂತಿದ್ದು ಸುಮಾರು 2.5 ಬಿಲಿಯನ್ ಡಾಲರ್ ಮೊತ್ತದ  ಆರ್ಥಿಕ ನೆರವನ್ನು ನೀಡಿದೆ. ಅಷ್ಟಲ್ಲದೆ ಇಂಧನ ಹಾಗೂ ಸಾವಿರಾರು ಟನ್ ಆಹಾರ ಧಾನ್ಯದ ನೆರವನ್ನು ನೀಡಿದೆ. ಶ್ರೀಲಂಕಾ ಇನ್ನೂ 500  ಮಿಲಿಯನ್ ಡಾಲರ್ ಆರ್ಥಿಕ ಸಹಾಯವನ್ನು ಭಾರತದ ಬಳಿ ಕೋರಿದೆ. ಅತ್ತ ಚೀನಾ ಕೂಡ ಶ್ರೀಲಂಕಾಕ್ಕೆ ಸಹಾಯ ಹಸ್ತವನ್ನು ಚಾಚಿದೆ.ಈ ಮಧ್ಯೆ ಶ್ರೀಲಂಕಾ, ತಾನು ಈ ವರ್ಷ ಪಾವತಿ ಮಾಡಬೇಕಾಗಿದ್ದ ಸಾಲವನ್ನು ಪಾವತಿಸದೆ, ಸುಸ್ತಿದಾರ(defaulter)ನಾಗಲು ತೀರ್ಮಾನಿಸಿದೆ. ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಶ್ರೀಲಂಕಾ ಹೀಗೆ ಸಾಲವನ್ನು ಮರುಪಾವತಿಸದಿರಲು(Debt default) ತೀರ್ಮಾನಿಸಿರುವುದು.

ಶ್ರೀಲಂಕಾದ ಇಂದಿನ ಆರ್ಥಿಕ ದುಸ್ಥಿತಿಗೆ ಕಾರಣಗಳೇನು ಎಂದು ವಿಶ್ಲೇಷಿಸೋಣ. ಆರ್ಥಿಕ ತಜ್ಞರು ಶ್ರೀಲಂಕಾದ ಆರ್ಥಿಕತೆ  ಅವಳಿ ಕೊರತೆ(Twin Deficit) ಗೆ ಉತ್ತಮ ಉದಾಹರಣೆ ಎನ್ನುತ್ತಾರೆ. ಅವಳಿ ಕೊರತೆಯಲ್ಲಿ ರಾಷ್ಟ್ರೀಯ ವೆಚ್ಚ ( National Expenditure), ರಾಷ್ಟ್ರೀಯ ಆದಾಯ ( National Income) ಕ್ಕಿಂತ ಹೆಚ್ಚಾಗಿರುತ್ತದೆ ಅಲ್ಲದೆ ದೇಶದ ಆಮದು(import) ರಫ್ತಿ(export)ಗಿಂತ ಹೆಚ್ಚಾಗಿರುತ್ತದೆ.ಸರ್ಕಾರದ ನೀತಿಗಳು ಜನಪ್ರಿಯವಾದವುಗಳೇ ಅಥವಾ ಜನಪರ ವಾದವುಗಳೇ ಎಂಬುದು ತೀರಾ ಮುಖ್ಯ. ಈಗ ಅಧಿಕಾರದಲ್ಲಿರುವ ಮಹಿಂದಾ ರಾಜಪಕ್ಸ  ಅಧಿಕಾರಕ್ಕೆ ಬರಲು ಆಯ್ದುಕೊಂಡದ್ದು ಜನಪ್ರಿಯ ನೀತಿಗಳನ್ನೇ ಹೊರತು ಜನಪರವಾದ ನೀತಿಗಳನ್ನಲ್ಲ. ಜನಪ್ರಿಯ ನೀತಿಗಳು ಸಿಹಿ ತಿಂಡಿಗಳಂತೆ! ಸಿಹಿ ತಿಂಡಿಗಳು ಬಾಯಿಗೆ ಮುದ ನೀಡಿ, ಆರೋಗ್ಯವನ್ನು ಹದಗೆಡಿಸುವಂತೆ, ಜನಪ್ರಿಯ ನೀತಿಗಳು ದೇಶದ ಆರ್ಥಿಕತೆಯ ಆರೋಗ್ಯವನ್ನು ಹದಗೆಡಿಸುತ್ತವೆ. ರಾಜಪಕ್ಸ ಸರ್ಕಾರದ ಜನಪ್ರಿಯ ನೀತಿಗಳು ಶ್ರೀಲಂಕಾದ ಆರ್ಥಿಕತೆಗೆ ದೊಡ್ಡ ಹೊಡೆತವನ್ನು ನೀಡಿದವು. ಅವರು ವ್ಯಾಟ್ ತೆರಿಗೆಯನ್ನು 15% ರಿಂದ  8% ಕ್ಕೆ ಇಳಿಸಿದರು. ಇತರ ಕೆಲವು ತೆರಿಗೆಗಳನ್ನು ರದ್ದುಪಡಿಸಿದರು. ಆದಾಯ ತೆರಿಗೆಯ ಮಿತಿಯನ್ನು 5 ಲಕ್ಷ ರೂಪಾಯಿಗಳಿಂದ 30 ಲಕ್ಷ ರೂಪಾಯಿಗಳಿಗೆ ಏರಿಸಲಾಯಿತು. ಅಂದರೆ ವರ್ಷಕ್ಕೆ 29,00,000 ರೂಪಾಯಿ ಆದಾಯವನ್ನು ಗಳಿಸುವವನೂ ಆದಾಯ ತೆರಿಗೆಯನ್ನು ಕಟ್ಟುವಂತಿಲ್ಲ!ಕಾರ್ಪೊರೇಟ್ ತೆರಿಗೆಯನ್ನೂ ಇಳಿಸಲಾಯಿತು. ಇವೆಲ್ಲವೂ ಶ್ರೀಲಂಕಾದ ಬೊಕ್ಕಸಕ್ಕೆ ಅಪಾರ ನಷ್ಟವನ್ನು ತಂದವು.

ಶ್ರೀಲಂಕಾದ ಆರ್ಥಿಕತೆ ಪ್ರವಾಸೋದ್ಯಮದ ಮೇಲೆ ಗಾಢವಾಗಿ ಅವಲಂಬಿತವಾಗಿತ್ತು. 2019 ರಲ್ಲಿ ನಡೆದ ಈಸ್ಟರ್ ಬಾಂಬ್ ಸ್ಪೋಟ ಶ್ರೀಲಂಕಾದ ಪ್ರವಾಸೋದ್ಯಮಕ್ಕೆ ಭಾರೀ ಹೊಡೆತವನ್ನು ನೀಡಿತು. ಇದಾದ ನಂತರ ಬಂದ ಕೋವಿಡ್-19 ಎಂಬ ಸಾಂಕ್ರಾಮಿಕ ಶ್ರೀಲಂಕಾದ ಪ್ರವಾಸೋದ್ಯಮವನ್ನು ಇನ್ನಿಲ್ಲದಂತೆ ಮಲಗಿಸಿತು. ಇದಲ್ಲದೆ ಕಳೆದ ಮೂರು ವರ್ಷಗಳಿಂದ ಶ್ರೀಲಂಕಾದಲ್ಲಿ ವಿದೇಶಿ ಹೂಡಿಕೆ ಕಡಿಮೆಯಾಗುತ್ತಲೆ  ಬರುತ್ತಿದೆ.

ಶ್ರೀಲಂಕಾ ಅಪಾರ ಪ್ರಮಾಣದ ರಾಸಾಯನಿಕ ಗೊಬ್ಬರವನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದಕ್ಕೆ ಅಪಾರ ವಿದೇಶಿ ವಿನಿಮಯ ಸಂಗ್ರಹ ಖರ್ಚಾಗುತ್ತಿತ್ತು. ಹಾಗಾಗಿ ರಾಸಾಯನಿಕ ಗೊಬ್ಬರದ ಆಮದಿನ ಮೇಲೆ ಶ್ರೀಲಂಕಾದ ರಾಜಪಕ್ಸ ಸರ್ಕಾರ ನಿಷೇಧವನ್ನು ಹೇರಿ ರಾತ್ರೋರಾತ್ರಿ ಶ್ರೀಲಂಕಾವನ್ನು ಸಂಪೂರ್ಣ ಸಾವಯವ ರಾಷ್ಟ್ರವನ್ನಾಗಿ ಘೋಷಿಸಿತು. ಆದರೆ ಸಾವಯವ ಕೃಷಿಯಿಂದಾಗಿ ( organic farming) ಇಳುವರಿ ತೀವ್ರವಾಗಿ ಕುಂಠಿತವಾಯಿತು. ಇದರಿಂದಾಗಿ ಶ್ರೀಲಂಕಾ ಅಕ್ಕಿಯನ್ನೂ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿಗೆ ತಲುಪಿತು. ಅಲ್ಲದೆ ರಬ್ಬರ್ ಹಾಗೂ ಟೀ ಗಳ ಇಳುವರಿ ಕಡಿಮೆಯಾಗಿ  ರಫ್ತು ಕೂಡ ಕುಂಠಿತವಾಯಿತು. ಇದರಿಂದಾಗಿ ಶ್ರೀಲಂಕಾದ ವಿದೇಶಿ ವಿನಿಮಯ ಸಂಗ್ರಹ ಕುಸಿಯಿತು . ಶ್ರೀಲಂಕಾ ಸರಕಾರ ದುಬಾರಿ ಎನಿಸುವ ಅಲ್ಪಾವಧಿಯ ಸಾಲಗಳನ್ನು ಪಡೆದಿತ್ತು. ಆದರೆ ಈ ಸಾಲವನ್ನು ಪಡೆದು ನಿರ್ಮಿಸಿದ ಮೂಲಸೌಕರ್ಯ ಯೋಜನೆಗಳು ಸರ್ಕಾರಕ್ಕೆ ಯಾವುದೇ ಲಾಭವನ್ನು ತಂದು ಕೊಡಲಿಲ್ಲ.

ಈಗ ತುಂಬಾ ತಡವಾಗಿ ಅಲ್ಲಿನ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ಮೊದಲು ಐ.ಎಂ.ಎಫ್.ನ ನೆರವು ಯಾಚಿಸಲು ಹಿಂದೇಟು ಹಾಕುತ್ತಿದ್ದ ಸರ್ಕಾರ ಈಗ ನೆರವು ಕೇಳಿದೆ, ಅಷ್ಟೇ ಅಲ್ಲ ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಗೆ ನಂದಾಲಾಲ್ ವೀರ ಸಿಂಘೆ ಎಂಬ ಆರ್ಥಿಕ ತಜ್ಞರನ್ನು ಮುಖ್ಯಸ್ಥರನ್ನಾಗಿ ನಿಯೋಜಿಸಿದೆ.  ಆದರೆ ಮುಂದಿನ ದಿನಗಳಲ್ಲಿ ಶ್ರೀಲಂಕಾದ ಆರ್ಥಿಕತೆ ಇನ್ನೂ ಹದಗೆಡುವ ಸಾಧ್ಯತೆಗಳಿವೆ ಎಂದು ಕೆಲವು ಆರ್ಥಿಕ ತಜ್ಞರು ಭಾವಿಸುತ್ತಾರೆ. ಇದೇನೇ ಇರಲಿ ಮುಂದಿನ ದಿನಗಳಲ್ಲಿ ಶ್ರೀಲಂಕಾದ ಆರ್ಥಿಕತೆ ಹಳಿಗೆ ಮರಳಲಿ ಎಂದು ಆಶಿಸೋಣ.

ಶ್ರೀಲಂಕಾದ ಆರ್ಥಿಕ ದುಸ್ಥಿತಿ ಭಾರತದ ರಾಜಕಾರಣಿಗಳಿಗೆ ಹಾಗೂ ಆರ್ಥಿಕ ನೀತಿ ನಿರೂಪಕರಿಗೆ ಎಚ್ಚರಿಕೆಯ ಗಂಟೆ ಎನ್ನಲಡ್ಡಿಯಿಲ್ಲ. ಭಾರತದ ಅನೇಕ ರಾಜಕಾರಣಿಗಳು ಚುನಾವಣೆಯ ಕಾರಣದಿಂದ ಜನರನ್ನು ಅಲ್ಪಾವಧಿಗೆ ಮರುಳುಗೊಳಿಸುವ, ಆದರೆ ದೇಶ ಹಾಗೂ ರಾಜ್ಯಗಳ ಆರ್ಥಿಕತೆಯನ್ನು ತೊಂದರೆಗೆ ಸಿಲುಕಿಸುವ ನೀತಿಗಳನ್ನು ಜಾರಿಗೆ ತರುತ್ತಾರೆ.  2017 ರಲ್ಲಿ ರಚನೆಯಾದ ಹಣಕಾಸು ಸಮಿತಿಯು ಮಿತಿಯನ್ನು ನಿಗದಿ ಪಡಿಸಿ ರಾಜ್ಯಗಳ ಸಾಲ ಹಾಗೂ ಜಿ.ಡಿ.ಪಿ ಅನುಪಾತ 20% ನ್ನು ಮತ್ತು ಕೇಂದ್ರದ ಸಾಲ ಹಾಗೂ  ಜಿ.ಡಿ.ಪಿ ಅನುಪಾತ 40%ನ್ನು ಮೀರಬಾರದು ಎಂದು ಹೇಳಿದೆ. ಆದರೆ ಭಾರತ ಕೆಲವು ರಾಜ್ಯಗಳಲ್ಲಿ ಸಾಲ ಹಾಗೂ ಜಿ.ಡಿ.ಪಿ.ಯ ಅನುಪಾತ 50% ಕ್ಕೂ ಹೆಚ್ಚಿದೆ. ಕೇವಲ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳು ಆರೋಗ್ಯಕರ ಎನಿಸುವ ಸಾಲ ಹಾಗೂ ಜಿಡಿಪಿಯ ಅನುಪಾತವನ್ನು ಹೊಂದಿವೆ. ಪಂಜಾಬ್ ರಾಜ್ಯವು ಶೇಕಡ 50% ಕ್ಕಿಂತ ಹೆಚ್ಚು ಸಾಲ ಹಾಗೂ ಜಿಡಿಪಿಯ ಅನುಪಾತವನ್ನು ಹೊಂದಿದೆ. ಇಂತಹ ಅತಿಯಾದ ಸಾಲದ ಭಾರವನ್ನು ಹೊಂದಿದಾಗಲೂ ಪಂಜಾಬ್ ನ ನೂತನ ಮುಖ್ಯಮಂತ್ರಿ 300 ಯುನಿಟ್ ಗಳಷ್ಟು ಉಚಿತ ವಿದ್ಯುತ್ ಅನ್ನು ಅಲ್ಲಿನ ಜನರಿಗೆ ನೀಡುವುದಾಗಿ ಘೋಷಿಸಿದ್ದಾರೆ. ಇಂತಹ ನೀತಿಗಳು ಚುನಾವಣೆಯನ್ನು ಗೆಲ್ಲಲು ಸಹಾಯಕವಾಗಬಹುದು, ಆದರೆ ರಾಜ್ಯದ ಆರ್ಥಿಕತೆಗೆ ಗಂಭೀರ ಹೊಡೆತವನ್ನು ನೀಡಬಲ್ಲವು. ಹಾಗಾಗಿ ದೇಶದ ಆರ್ಥಿಕತೆಯನ್ನು ಹಳ್ಳ ಹಿಡಿಸದಂತಹ ಆರ್ಥಿಕ ನೀತಿಗಳನ್ನು ಹೊಂದುವುದು ಅತಿ ಅನಿರ್ವಾಯವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments