HomePoliticalಬದಲಾಗುತ್ತಿದೆ ಬಿಹಾರ ರಾಜಕೀಯ: ಬಿಜೆಪಿಯ ಸಾಂಪ್ರದಾಯಿಕ ಮತ ಬ್ಯಾಂಕ್ ಲಾಲು ಅವರ ಆರ್‌ಜೆಡಿಗೆ ಕಡೆಗೆ ವಾಲುತ್ತಾ?

ಬದಲಾಗುತ್ತಿದೆ ಬಿಹಾರ ರಾಜಕೀಯ: ಬಿಜೆಪಿಯ ಸಾಂಪ್ರದಾಯಿಕ ಮತ ಬ್ಯಾಂಕ್ ಲಾಲು ಅವರ ಆರ್‌ಜೆಡಿಗೆ ಕಡೆಗೆ ವಾಲುತ್ತಾ?

ರಾಂಚಿ: ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರು ಕಿಂಗ್‌ಮೇಕರ್ ಆಗುವ ಬದಲು ತಾವೇ “ಕಿಂಗ್” ಆಗಲು ಉತ್ಸುಕರಾಗಿರುವುದರಿಂದ, ಜತೆಗೆ ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ದೊಂದಿಗೆ ಮೇಲ್ಜಾತಿ ಭೂಮಿಹಾರ್ ಸಮುದಾಯದ ಹೆಚ್ಚುತ್ತಿರುವ ನಿಕಟತೆ ಬಿಹಾರದ ಆಡಳಿತ ಪಾಲುದಾರ ಪಕ್ಷ ಬಿಜೆಪಿಯನ್ನು ಗಾಬರಿಗೊಳಿಸಿದೆ. ವಿಚಿತ್ರವೆಂದರೆ, ಯಾದವರು ಮತ್ತು ಭೂಮಿಹಾರ್ ಎರಡು ರಾಜಕೀಯವಾಗಿ ಪ್ರಬಲ ಜಾತಿಗಳು ಕಳೆದ 30 ವರ್ಷಗಳಿಂದ ಪರಸ್ಪರ ಜಗಳವಾಡುತ್ತಿವೆ. ಯಾದವರು ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿಯ ಸಾಂಪ್ರದಾಯಿಕ ಮತಬ್ಯಾಂಕ್ ಆಗಿದ್ದರೆ, ಭೂಮಿಹಾರ್ ಈ ಎಲ್ಲಾ ವರ್ಷಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ಇತ್ತೀಚಿಗೆ ನಡೆದ ಭೂಮಿಹಾರ್-ಬ್ರಾಹ್ಮಣ ಏಕತಾ ಮಂಚ್ ಫೌಂಡೇಶನ್ ಆಯೋಜಿಸಿದ್ದ ಪರಶುರಾಮ ಜಯಂತಿಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಮೂಲಕ ತಾವು ಇಲ್ಲಿಯವರೆಗೆ ಬೆಂಬಲಿಸಿಕೊಂಡು ಬರುತ್ತಿದ್ದ ಕೇಸರಿ ಪಾಳೆಯದ ವಿರುದ್ಧ ಅವರ ಬಹಿರಂಗ ಬಂಡಾಯವನ್ನು ಎತ್ತಿ ತೋರಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿ, ಹಿಂದಿನ ತಪ್ಪುಗಳಿದ್ದಲ್ಲಿ ಪಕ್ಷದ ಪರವಾಗಿ ವಿಷಾದ ವ್ಯಕ್ತಪಡಿಸಿ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು. ಯಾರಾದರೂ ತಪ್ಪು ಮಾಡಿದ್ದರೆ, ಅವರಿಗೆ ಸುಧಾರಣೆಗೆ ಅವಕಾಶ ನೀಡಬೇಕು ಎಂದು ತೇಜಸ್ವೀ ಹೇಳುವ ಮೂಲಕ ಭೂಮಿಹಾರ್ ಸಮುದಾಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಅಡಿಪಾಯ ಹಾಕಿಯೇಬಿಟ್ಟರು.

24 ಸ್ಥಾನಗಳಿಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ್ತು ಬಿಹಾರದ ಮುಜಾಫರ್‌ಪುರ ಜಿಲ್ಲೆಯ ಬೊಚಾಹಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮೇಲ್ಜಾತಿ ಸಮುದಾಯಗಳು ಆರ್‌ಜೆಡಿಗೆ ಭಾರಿ ಬೆಂಬಲ ನೀಡಿದ್ದವು. ಇತ್ತೀಚಿನ ಚುನಾವಣೆಗಳಲ್ಲಿ ಆರ್‌ಜೆಡಿ ಉತ್ತಮ ಪ್ರದರ್ಶನ ನೀಡಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮರಳಿ ಅಧಿಕಾರಕ್ಕೆ ಏರುವ ಮುನ್ಸೂಚನೆ ನೀಡಿದೆ.

ಭೂಮಿಹಾರ್ ಫೌಂಡೇಶನ್ ಮುಖ್ಯಸ್ಥ ಅಶುತೋಷ್ ಕುಮಾರ್ ತಮ್ಮ ಸಮುದಾಯವನ್ನು ಇನ್ನು ಮುಂದೆ ಯಾರೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ ಮತ್ತು ಇತ್ತೀಚಿನ ಚುನಾವಣೆಗಳ ಫಲಿತಾಂಶಗಳು ಇದನ್ನು ಸಾಕಷ್ಟು ಸಾಬೀತುಪಡಿಸಿವೆ. ನಮಗೆ ಗೌರವ ನೀಡುವವರನ್ನು ಮಾತ್ರ ನಾವು ಬೆಂಬಲಿಸುತ್ತೇವೆ ಎಂದು ಘೋಷಿಸಿದರು. ಈ ಸಮಾವೇಶವು ಭೂಮಿಹರ್ ಸಮುದಾಯವು ಹೇಗೆ ನಿಧಾನವಾಗಿ ಬಿಜೆಪಿಯ ನೆರಳಿನಿಂದ ಹೊರಬರಲು ಪ್ರಯತ್ನಿಸುತ್ತಿದೆ ಎಂಬುದರ ಕುರಿತು ಸಾಕಷ್ಟು ಸುಳಿವುಗಳನ್ನು ಬಿಟ್ಟುಕೊಟ್ಟಿತು. ಭೂಮಿಹಾರ್ ಹಾಗು ಯಾದವ ಸಮುದಾಯ ಸೇರಿದರೆ ಆರ್ಜೆಡಿ ಪಕ್ಷ ಮುಂದಿನ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಉದಯಿಸುವುದರಲ್ಲಿ ಸಂಶಯವಿಲ್ಲ. ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಭೂಮಿಹಾರ್ ಸಮುದಾಯವನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ಯಾವ ಕಸರತ್ತು ನಡೆಸಲಿದೆ ಎಂಬುದರ ಮೇಲೆ ಇದು ನಿಂತಿದೆ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments