
ಕಲಬುರಗಿ: ಕರ್ನಾಟಕದ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯಲ್ಲಿ ಅಗೆದಷ್ಟು ಆರೋಪಿಗಳು ಹೊರಬರುತ್ತಿದ್ದು ಇದೀಗ ಹಲವು ಪೊಲೀಸ್ ಅಧಿಕಾರಿಗಳ ಹೆಸರುಗಳೂ ತಳುಕು ಹಾಕಿಕೊಳ್ಳಲು ಆರಂಭವಾಗಿದೆ. ಸಿಐಡಿ ತಂಡ ರಾಯಚೂರು ಜಿಲ್ಲೆಯ ಲಿಂಗಸೂಗೂರು ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಹಾಗೂ ಕಲಬುರಗಿ ಬೆರಳಚ್ಚು ವಿಭಾಗದ ಸಿಪಿಐ ಆನಂದ್ ಮೇತ್ರೆ ಅವರನ್ನು ಗುರುವಾರ ಬಂಧಿಸಿದೆ.
ಈ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಬುಧವಾರದಿಂದ ಸುಮಾರು 10 ಗಂಟೆಗಳ ಸುದೀರ್ಘ ವಿಚಾರಣೆ ನಡೆಸಿ ನಂತಾರಾ ಬಂಧಿಸಿತು. ಆರೋಪಿ ಅಧಿಕಾರಿಗಳನ್ನು 3ನೇ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಮಲ್ಲಿಕಾರ್ಜುನ ಸಾಲಿ ಮತ್ತು ಆನಂದ್ ಮೈತ್ರೆ ಇಬ್ಬರನ್ನೂ 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತಂಡ, ಡಿವೈಎಸ್‌ಪಿ ಗ್ರೇಡ್ ಅಧಿಕಾರಿಯನ್ನು ಬಂಧಿಸಿರುವುದು ಇದೇ ಮೊದಲು. ಸಾಲಿ ಮತ್ತು ಮೈತ್ರೆ ಬಂಧನದೊಂದಿಗೆ ಪಿಎಸ್‌ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ಬಂಧಿತರ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ.












































