
ಬೆಂಗಳೂರು: ಇತ್ತೀಚಿನ ಎಂ.ಬಿ. ಪಾಟೀಲ್ ಹಾಗು ಬಿಜೆಪಿ ಸಚಿವ ಅಶ್ವಥ್ ನಾರಾಯಣ್ ಭೇಟಿಯನ್ನು ಪಿಎಸ್ ಐ ನೇಮಕಾತಿ ಅಕ್ರಮ ಹಗರಣದಲ್ಲಿ ರಕ್ಷಣೆ ಪಡೆಯಲು ಭೇಟಿಯಾಗಿದ್ದಾರೆ ಎಂದು ವಿಶ್ಲೇಷಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಮಾಜಿ ಸಂಸದೆ, ಒಂದು ಕಾಲದ ರಾಹುಲ್ ಆಪ್ತೆ ರಮ್ಯಾ ಟಾಂಗ್ ಕೊಟ್ಟಿದ್ದಾರೆ.
ಈ ಕುರಿತು ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಮಾಜಿ ಸಂಸದೆ, ಎಂಬಿ ಪಾಟೀಲ್ ಹಾಗೂ ಅಶ್ವತ್ಥನಾರಾಯಣ್ ಭೇಟಿಯನ್ನ ಸಮರ್ಥಿಸಿಕೊಂಡಿದ್ದು, ರಾಜಕೀಯ ನಾಯಕರು ಪಕ್ಷಾತೀತವಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಸಹಜ ಎಂದು ಹೇಳಿಕೊಂಡಿದ್ದಾರೆ.
ಬೇರೆ ಬೇರೆ ರಾಜಕೀಯ ಪಕ್ಷದ ನಾಯಕರು ಮದುವೆ ಸಂಬಂಧಗಳ ಮೂಲಕ ಸಂಬಂಧಿಕರಾಗಿರುತ್ತಾರೆ. ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಎಂಬಿ ಪಾಟೀಲ್ ಅವರ ಬಗ್ಗೆ ನೀಡಿರುವ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ. ಪಕ್ಷ ಒಳಜಗಳ ಬಿಟ್ಟು ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕಲ್ಲವೇ ಎಂದು ಕನಕಪುರ ಬಂಡೆಗೆ ಮೋಹಕ ತಾರೆ ಡಿಚ್ಚಿ ಹೊಡೆದಿದ್ದಾರೆ.












































