
ಟೋಕಿಯೊ: ಜಪಾನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ “ಭಾರತವು ಸ್ವತಂತ್ರ, ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಬದ್ಧವಾಗಿದ್ದು, ಶಾಂತಿ ಮತ್ತು ಸಮೃದ್ಧಿಯ ಗುರಿಯನ್ನು ಸಾಧಿಸುವ ಉದ್ದೇಶದಿಂದ ಪಾಲುದಾರರ ನಡುವೆ ಆರ್ಥಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ಕುರಿತು ಭಾರತ ಎದುರು ನೋಡುತ್ತಿದೆ” ಎಂದು ಹೇಳಿದ್ದಾರೆ
ಜಪಾನಿನ ಟೋಕಿಯೋದಲ್ಲಿ ಇಂಡೋ-ಪೆಸಿಫಿಕ್ ಎಕನಾಮಿಕ್ ಫ್ರೇಮ್‌ವರ್ಕ್ ಫಾರ್ ಪ್ರಾಸ್ಪೆರಿಟಿಯ ಚರ್ಚೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದರು. “ಭಾರತವು ಹಿಂದಿನಿಂದಲೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ವ್ಯಾಪಾರದ ಹರಿವಿನ ಕೇಂದ್ರವಾಗಿದ್ದು, ಗುಜರಾತ್‌ನ ಲೋಥಾಲ್‌ನಲ್ಲಿ ವಿಶ್ವದ ಅತ್ಯಂತ ಹಳೆಯ ವಾಣಿಜ್ಯ ಬಂದರನ್ನು ಹೊಂದಿದೆ. ಹಾಗೆಯೇ ಇಂಡೋ-ಪೆಸಿಫಿಕ್ ಪ್ರದೇಶದ ಆರ್ಥಿಕ ಸವಾಲುಗಳನ್ನು ಎದುರಿಸಲು ಸೃಜನಶೀಲ ಪರಿಹಾರಗಳನ್ನು ಕಂಡುಹಿಡಿಯುವ ಅಗತ್ಯತೆ ಇದೆ” ಎಂದು ಮೋದಿ ಹೇಳಿದರು.
“ಭಾರತ ಸ್ವತಂತ್ರ ಹಾಗು ಮುಕ್ತವಾದ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಬದ್ಧವಾಗಿದೆ. ಪಾಲುದಾರರ ನಡುವೆ ಬೆಳವಣಿಗೆ, ಶಾಂತಿ ಮತ್ತು ಸಮೃದ್ಧಿಗೆ ಆಳವಾದ ಆರ್ಥಿಕ ಒಪ್ಪಂದವು ನಿರ್ಣಾಯಕವಾಗಿದೆ ಎಂದು ಬಯಸುತ್ತದೆ. ಇಂಡೋ-ಪೆಸಿಫಿಕ್ ಎಕನಾಮಿಕ್ ಫ್ರೇಮ್‌ವರ್ಕ್ ಫಾರ್ ಪ್ರಾಸ್ಪೆರಿಟಿ ಅಡಿಯಲ್ಲಿ ಪಾಲುದಾರ ರಾಷ್ಟ್ರಗಳೊಂದಿಗೆ ಭಾರತ ಸಹಕರಿಸಲು ಉತ್ಸುಕವಾಗಿದೆ” ಎಂದು ಪ್ರಧಾನಿ ಮೋದಿ ಹೇಳಿದರು.












































