
ನವದೆಹಲಿ: ರಾಷ್ಟ್ರಪತಿ ಚುನಾವಣೆ 2022ರ ವಿಪಕ್ಷಗಳ ಅಭ್ಯರ್ಥಿಯಾಗಿ ಶರದ್ ಪವಾರ್, ಗೋಪಾಲಕೃಷ್ಣ ಗಾಂಧಿ, ಫಾರೂಕ್ ಅಬ್ದುಲ್ಲಾ ಹೆಸರು ಕೇಳಿ ಬಂದ ಬಳಿಕ ಹಾಗು ಸ್ವತಃ ಆ ಮೂವರೂ ಅಭ್ಯರ್ಥಿಯಾಗಲು ನಿರಾಕರಿಸಿದ ನಂತರ ಕಾಂಗ್ರೆಸ್ ನೇತೃತ್ವದ ಬಿಜೆಪಿಯೇತರ ಪಕ್ಷಗಳು ಇದೀಗ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾರತ್ತ ಒಲವು ತೋರಿಸಿವೆ.
ಯಶವಂತ್ ಸಿನ್ಹಾ ಅವರು ಈ ಹಿಂದೆ ಬಿಜೆಪಿಯ ರಾಷ್ಟ್ರೀಯ ನಾಯರಕರಾಗಿದ್ದರು ಹಾಗು ಅಟಲ್ ಬಿಹಾರಿ ವಾಜಪೇಯಿ ಸರಕಾರದಲ್ಲಿ ಅತ್ಯಂತ ಪ್ರಮುಖ ಕ್ಯಾಬಿನೆಟ್ ಸಚಿವರಾಗಿದ್ದರು. ಹಣಕಾಸು ಖಾತೆ ಹಾಗು ವಿದೇಶಾಂಗ ಖಾತೆ ನಿರ್ವಹಿಸಿದ್ದರು. ಈ ಹಿಂದೆ ವಿಪಕ್ಷಗಳ ಜಂಟಿ ರಾಷ್ಟ್ರಪತಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಗೋಪಾಲಕೃಷ್ಣ ಗಾಂಧಿ ಹೆಸರು ಬಲವಾಗಿ ಕೇಳಿ ಬಂದಿತ್ತು ಮತ್ತು ಬಹುತೇಕ ಅವರೇ ಖಚಿತ ಅನ್ನುವ ಭಾವನೆಯಿತ್ತು. ಆದರೆ ಅವರು ಇದೀಗ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ಮೋದಿ ಪ್ರಧಾನಿಯಾದ ಬಳಿಕ ಬಿಜೆಪಿಯ ಬದ್ಧ ವಿರೋಧಿಯಾಗಿ ಬದಲಾಗಿರುವ ಟಿಎಂಸಿ ನಾಯಕ ಯಶವಂತ್ ಸಿನ್ಹಾ ಅವರನ್ನು ಅಭ್ಯರ್ಥಿಯನ್ನಾಗಿ ಈಗ ಪರಿಗಣಿಸಲಾಗಿದೆ. ಜೂನ್ 21 ರಂದು ದೆಹಲಿಯಲ್ಲಿ ಶರದ್ ಪವಾರ್ ನೇತೃತ್ವದಲ್ಲಿ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕುರಿತು ಸಭೆ ನಡೆಯಲಿದೆ. ಟಿಎಂಸಿ ಮೂಲಗಳ ಪ್ರಕಾರ, ಪಕ್ಷದ ಪರವಾಗಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆ ಸಭೆಯಲ್ಲಿ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಪರಿಗಣಿಸಲು ಸಿದ್ಧತೆ ನಡೆದಿದೆ. ಯಶವಂತ್ ಸಿನ್ಹಾ ಪ್ರಸ್ತುತ ಟಿಎಂಸಿ ಪಕ್ಷದಲ್ಲಿದ್ದಾರೆ.












































