
ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ) ಅಭ್ಯರ್ಥಿಯಾಗಿಬುಡಕಟ್ಟು ಸಮುದಾಯದ ನಾಯಕಿ, ಜಾರ್ಖಂಡ್ನ ಮಾಜಿ ರಾಜ್ಯಪಾಲ ದ್ರೌಪದಿ ಮುರ್ಮು ಅವರನ್ನು ಘೋಷಿಸಲಾಗಿದೆ. ಇದಕ್ಕೂ ಮುನ್ನ ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ವಿಪಕ್ಷಗಳು ಆಯ್ಕೆ ಮಾಡಿತ್ತು.
ದ್ರೌಪದಿ ಮುರ್ಮು ಅವರು 2015 ರಲ್ಲಿ ಜಾರ್ಖಂಡ್ನ ಮೊದಲ ಮಹಿಳಾ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರು ಒಡಿಶಾದ ಸಂತಾಲ್ ಬುಡಕಟ್ಟಿನವರು. ಮುರ್ಮು ಅವರು ಶಿಕ್ಷಕರಾಗಿ ವೃತ್ತಿ ಪ್ರಾರಂಭಿಸಿದರು ಮತ್ತು ನಂತರ 1997 ರಲ್ಲಿ ಒಡಿಶಾ ರಾಜಕೀಯಕ್ಕೆ ಪ್ರವೇಶಿಸಿದರು. ಬಿಜೆಪಿಯ ಪರಿಶಿಷ್ಟ ಪಂಗಡಗಳ ಮೋರ್ಚಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಂತರ, ದ್ರೌಪದಿ ಮುರ್ಮು 2000 ಮತ್ತು 2009 ರಲ್ಲಿ ರಾಯರಂಗಪುರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಒಡಿಶಾದಲ್ಲಿ ಬಿಜು ಜನತಾ ದಳ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ, ದ್ರೌಪದಿ ಮುರ್ಮು ಅವರು ವಾಣಿಜ್ಯ ಮತ್ತು ಸಾರಿಗೆ ಇಲಾಖೆಯಲ್ಲಿ ಸಚಿವರಾಗಿ ಮತ್ತು ನಂತರ 2000 ಮತ್ತು 2004 ರ ನಡುವೆ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 21 ರಂದು ಫಲಿತಾಂಶ ಪ್ರಕಟವಾಗಲಿದೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL













































