
ಮಂಗಳೂರು: ಮಂಗಳೂರಿನ ಉಳ್ಳಾಲ ಸಮುದ್ರ ತೀರದಲ್ಲಿ ದೇಶಕ್ಕೆ ಸೇರಿದ ಸರಕು ಸಾಗಾಣಿಕಾ ಹಡಗೊಂದು ಮುಳುಗಿದ ಪರಿಣಾಮ ಹಡಗಿನಿಂದ ತೈಲ ಸೋರಿಕೆ ಭೀತಿ ಎದುರಾಗಿದ್ದು, ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಒಂದು ವೇಳೆ ತೈಲ ಸೋರಿಕೆಯಾದರೆ ಸಮುದ್ರದ ಸುಮಾರು 10 ಕಿಮೀ ವ್ಯಾಪ್ತಿವರೆಗೂ ವ್ಯಾಪಿಸುವ ಹಾಗು ಬೆಂಕಿ ಹೊತ್ತಿಕೊಳ್ಳುವ ಅಪಾಯವಿದೆ. ಹಾಗು ಅಸಂಖ್ಯಾತ ಮೀನುಗಳ ನಾಶದ ಆತಂಕವೂ ಎದುರಾಗಿದೆ.
ಉಳ್ಳಾಲದ ಉಚ್ಛಿಲ ಭಟ್ಟಪಾಳಿ ಸಮೀಪ ಅರಬ್ಬಿ ಸಮುದ್ರದಲ್ಲಿ ಲೆಬನಾನ್ ದೇಶಕ್ಕೆ ಸೇರಿದ ಸರಕು ಸಾಗಾಣೆ ಹಡಗು ಅನಿರೀಕ್ಷಿತವಾಗಿ ಮಂಗಳೂರು ತೀರಕ್ಕೆ ಬಂದು ಮುಳುಗಡೆಯಾಗಿದೆ. ಹಡಗಿನಲ್ಲಿದ್ದ 15 ಮಂದಿ ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸುವಲ್ಲಿ ಯಶಸ್ವಿಯಾಗಿತ್ತು. ತೈಲ ಸೋರಿಕೆ ಭೀತಿಯ ಕಾರಣ ದಕ್ಷಿಣ ಕನ್ನಡ ಜಿಲ್ಲಾಡಳಿತ ಭಾರತೀಯ ನೌಕಾಪಡೆಗೆ ಕಟ್ಟೆಚ್ಚರ ವಹಿಸುವಂತೆ ಸೂಚಸಿದೆ. ಒಂದು ವೇಳೆ ತೈಲ ಸೋರಿಕೆಯಾದರೆ ಭಾರಿ ಪ್ರಮಾಣದ ಅಗ್ನಿಅನಾಹುತ ಸಂಭವಿಸುವ ಭೀತಿ ಕಾಡುತ್ತಿದೆ. ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಡಗು ಮುಳುಗಡೆ ಪ್ರದೇಶದ ಸುತ್ತ ಭಾರತೀಯನೌಕಾಪಡೆಯ ಮಿನಿಜೆಟ್ ರೌಂಡ್ ಹೊಡೆಯುತ್ತಿದ್ದು ತೈಲ ಸೋರಿಕೆಯಾದರೆ ಮಾಹಿತಿ ರವಾನಿಸಲು ಸಜ್ಜಾಗಿದೆ. ಕರಾವಳಿ ಕಾವಲು ಪಡೆಯ 9 ಹಡಗುಗಳು, 3 ಕೋಸ್ಟ್ ಗಾರ್ಡ್ ವಿಮಾನಗಳು ಮಂಗಳೂರಿನ ಸಮುದ್ರ ಪ್ರದೇಶದ ಮೇಲ್ವಿಚಾರಣೆಗಾಗಿ ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ.
ಈ ನಡುವೆ ಲೆಬನಾನ್‌ಗೆ ಹೋಗಬೇಕಾಗಿದ್ದ ಹಡಗು ಅಚಾನಕ್ಕಾಗಿ ಮಂಗಳೂರಿಗೆ ಬಂದಿದ್ದು ಏಕೆ ಎಂಬ ಬಗ್ಗೆ ಅನುಮಾನ ಮೂಡಿದೆ. ಈ ಬಗ್ಗೆ ಕೇಂದ್ರ ತನಿಖಾದಳದಿಂದ ತನಿಖೆ ನಡೆಯುವ ಸಾಧ್ಯತೆ ಇದೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL













































