
ಕೋಲ್ಕತ್ತಾ: ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಚುನಾವಣೆಯಲ್ಲಿ ಗೆಲ್ಲುವ ಹೆಚ್ಚು ಅವಕಾಶವಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಾದ ರಾಜಕೀಯ ಬೆಳವಣಿಗೆ ಬಳಿಕ ದ್ರೌಪದಿ ಅವರ ಆಯ್ಕೆ ಸುಲಭವಾಗಲಿದೆ ಎಂದು ಅವರು ಹೇಳಿದರು.
ಇಸ್ಕಾನ್ನ ಜಗನ್ನಾಥನ ರಥಯಾತ್ರೆಯನ್ನು ಉದ್ಘಾಟಿಸಿದ ಮಮತಾ, ದ್ರೌಪದಿಯ ಹೆಸರನ್ನು ಘೋಷಿಸುವ ಮೊದಲು ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಚರ್ಚಿಸಲಿಲ್ಲ. ಒಂದು ವೇಳೆ ಹೇಳುತ್ತಿದ್ದರೆ ನಾವು ಬೆಂಬಲ ನೀಡುವ ಬಗ್ಗೆ ಯೋಚಿಸುತ್ತಿದ್ದೆವು ಎಂದು ಮಮತಾ ಬ್ಯಾನರ್ಜಿ ಹೇಳಿದರು.
“ನನಗೆ ಮಹಿಳೆಯರ ಬಗ್ಗೆ ಪ್ರೀತಿಯ ಭಾವನೆ ಇದೆ ಮತ್ತು ಅದೂ ಕೂಡ ಬುಡಕಟ್ಟು ವರ್ಗದಿಂದ ಗೆಲ್ಲಲು ಉತ್ತಮ ಅವಕಾಶವಿದೆ. ವಿಶೇಷವಾಗಿ ಮಹಾರಾಷ್ಟ್ರದ ಇತ್ತೀಚಿನ ಬೆಳವಣಿಗೆಯ ನಂತರ ಅವಕಾಶ ಹೆಚ್ಚಿದೆ. ಅಭ್ಯರ್ಥಿ ಘೋಷಣೆಗೂ ಮುನ್ನ ಬಿಜೆಪಿ ಹೆಸರನ್ನು ಚರ್ಚಿಸಿದ್ದರೆ ದೇಶದ ಮುಂದಿನ ರಾಷ್ಟ್ರಪತಿಯನ್ನು ಒಮ್ಮತದಿಂದ ನಿರ್ಧರಿಸಬಹುದಿತ್ತು. ಒಮ್ಮತದಿಂದ ಅಭ್ಯರ್ಥಿಯನ್ನು ನಿರ್ಧರಿಸಿದ್ದರೆ ನನಗೆ ಸಂತೋಷವಾಗುತ್ತಿತ್ತು” ಎಂದು ಮಮತಾ ಹೇಳಿದರು.
“ನನಗೆ ಎಲ್ಲ ಧರ್ಮದ ಜನರ ಬಗ್ಗೆ ಗೌರವವಿದೆ. ಎಪಿಜೆ ಅಬ್ದುಲ್ ಕಲಾಂ ಅವರನ್ನೂ ಒಮ್ಮತದಿಂದ ಆಯ್ಕೆ ಮಾಡಲಾಗಿತ್ತು. 17-18 ವಿರೋಧ ಪಕ್ಷಗಳು ವಿರೋಧ ಪಕ್ಷದ ಅಭ್ಯರ್ಥಿಯನ್ನು ನಿರ್ಧರಿಸಿರುವುದರಿಂದ ಈಗ ನಾನು ಏನನ್ನೂ ಹೇಳಲಾರೆ ಮತ್ತು ಉಳಿದ ಪಕ್ಷಗಳು ಏನು ತೀರ್ಮಾನಿಸುತ್ತವೆಯೋ ಅದರಂತೆ ನಾನು ಹೋಗುತ್ತೇನೆ” ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹೇಳಿದರು.












































