HomeMovieಸಿನೆಮಾ ವಿಮರ್ಶೆ: ಕಾತರ ಕುತೂಹಲದ ಹೂರಣ 'ಚೇಸ್'

ಸಿನೆಮಾ ವಿಮರ್ಶೆ: ಕಾತರ ಕುತೂಹಲದ ಹೂರಣ ‘ಚೇಸ್’

ರೇಟಿಂಗ್: 4/5

ಚಿತ್ರ: ಚೇಸ್ (ಕನ್ನಡ)
ತಾರಾಗಣ: ರಾಧಿಕಾ ನಾರಾಯಣ್, ಅವಿನಾಶ್ ದಿವಾಕರ್, ಶೀತಲ್ ಶೆಟ್ಟಿ, ಅರವಿಂದ್ ರಾವ್, ಅರ್ಜುನ್ ಯೋಗಿ, ರಾಜೇಶ್ ನಟರಂಗ, ಅರವಿಂದ್ ಬೋಳಾರ್ ಮತ್ತಿತರರು.
ನಿರ್ದೇಶನ: ವಿಲೋಕ್
ನಿರ್ಮಾಣ: ಸಿಂಪ್ಲಿ ಫನ್ ಮೀಡಿಯಾ

  • ವಿಮರ್ಶೆ : ಅಶ್ವಿನ್ ಅಮೀನ್

ಚೇಸ್.. ಬಹು ದಿನಗಳಿಂದ ಒಂದು ಒಳ್ಳೆಯ ನಿರೀಕ್ಷೆ ಹುಟ್ಟು ಹಾಕಿದಂತಹ ಸಿನೆಮಾ. ಮೊದ ಮೊದಲು ಹಾಡುಗಳಿಂದ ಸದ್ದು ಮಾಡಿದ ಚೇಸ್ ಬಳಿಕ ತನ್ನ ಟ್ರೈಲರ್ ಮೂಲಕ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿ ಇದೀಗ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಉತ್ತಮವಾದ ತನಿಖಾ ಕಥೆಯನ್ನು ಬಿಗಿಯಾದ ಚಿತ್ರಕಥೆಯೊಂದಿಗೆ ಉಣಬಡಿಸಿದರೆ ಯಾರಿಗೆ ತಾನೇ ಇಷ್ಟವಾಗೋದಿಲ್ಲ ಹೇಳಿ? ಅಂತಹ ಚಿತ್ರಗಳ ಸಾಲಿಗೆ ಹೊಸ ಸೇರ್ಪಡೆ ಈ ಚೇಸ್.

ಚಿತ್ರದ ಆರಂಭದಿಂದ ಅಂತ್ಯದವರೆಗೂ ಎಲ್ಲೂ ಅನವಶ್ಯಕ ಎನ್ನುವ ದೃಶ್ಯಗಳಿಗೆ ಆಸ್ಪದ ಕೊಡದೆ ದೃಶ್ಯದಿಂದ ದೃಶ್ಯಕ್ಕೆ ಕುತೂಹಲವನ್ನು ಹೆಚ್ಚಿಸುತ್ತಾ ಸಾಗುವುದು ಚೇಸ್ ಸಿನೆಮಾದ ವಿಶೇಷತೆ. ಒಂದು ಅನಾಮಿಕ ಹೆಣ್ಣಿನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಹಾಕಿದ ಮರ್ಡರ್ ಮಿಸ್ಟರಿಯಿಂದ ಆರಂಭವಾಗುವ ಚಿತ್ರ ಮುಂದೆ ಅದರಲ್ಲಿ ಬರುವ ಎಲ್ಲ ಪಾತ್ರಗಳನ್ನು ಬೆಸೆಯುವ ರೀತಿ, ಅಪರಿಚಿತರಂತೆ ಎದುರಾಗುವ ಎಲ್ಲ ಪಾತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಒಂದಕ್ಕೊಂದು ಕನೆಕ್ಟ್ ಆಗಿರುವುದು ಚಿತ್ರಕ್ಕೆ ಮತ್ತಷ್ಟು ತೂಕ ನೀಡಿದೆ.

ಹಿಟ್ ಆಂಡ್ ರನ್ ಕೇಸಿನ ಸಂಬಂಧ ಸಾಕ್ಷಿ ಹೇಳಲು ಬರುವ ಮಾಜಿ ಪೊಲೀಸ್ ಅಧಿಕಾರಿ ನಿಧಿ (ರಾಧಿಕಾ ನಾರಾಯಣ್) ತನ್ನಲ್ಲಿನ ಕೆಲ ನ್ಯೂನತೆಗಳಿಂದಾಗಿ ಘಟನೆಯ ಬಗ್ಗೆ ಸರಿಯಾದ ಮಾಹಿತಿ ಕೊಡುವಲ್ಲಿ ಎಡವುತ್ತಾಳೆ. ಅದೇ ಮುಂದೆ ಹಲವು ತಿರುವುಗಳಿಗೆ ಕಾರಣವಾಗುತ್ತದೆ. ಕೇಸು ಕೈಗೆತ್ತಿಕೊಳ್ಳುವ ಅವಿನಾಶ್ ದಿವಾಕರ್ ಹಾಗು ತಂಡಕ್ಕೆ ತನಿಖೆ ಮುಂದುವರಿದಂತೆಲ್ಲ ಹೊಸ ಹೊಸ ಟ್ವಿಸ್ಟ್ ಗಳು ಸಿಗಲಾರಂಭಿಸುತ್ತವೆ. ಒಂದು ಸರ್ವೇ ಸಾಧಾರಣ ಹಿಟ್ ಆಂಡ್ ರನ್ ಕೇಸು ಕೊನೆಗೆ ಒಂದು ದೊಡ್ಡ ಮೆಡಿಕಲ್ ಮಾಫಿಯಾ ಬಗ್ಗೆ ಬೆಳಕು ತೋರುವಷ್ಟರ ಮಟ್ಟಿಗೆ ಬೆಳೆಯುತ್ತದೆ. ಅದರ ಮಧ್ಯೆ ಬರುವ ಹಲವು ಫ್ಲಾಶ್ ಬ್ಯಾಕ್’ಗಳು, ಹಲವು ಪಾತ್ರಗಳು ಒಳ್ಳೆಯವರು ಯಾರು ಕೆಟ್ಟವರು ಯಾರು ಅನ್ನುವ ಚಿಂತನೆಗೆ ಹಚ್ಚಿದರೆ, ಕೊಲೆ ಹಾಗು ಮಾಫಿಯಾದ ಸೂತ್ರಧಾರರು ಯಾರು ಅನ್ನುವ ಪ್ರಶ್ನೆ ನಮ್ಮಲ್ಲೇ ಮೂಡಿ ಮುಂದಿನ ದೃಶ್ಯಕ್ಕೆ ಹೋಗುವ ಆತುರತೆ ಹೆಚ್ಚಾಗುತ್ತದೆ.

ಇಲ್ಲಿ ಪಾತ್ರಗಳೇ ಚಿತ್ರದ ಜೀವಾಳವಾಗಿದ್ದು ಪ್ರತಿ ಪಾತ್ರಗಳು ಗಟ್ಟಿತನದಿಂದ ಕೂಡಿದೆ. ಪಾತ್ರಗಳ ಜತೆಗೆ ಪಾತ್ರಧಾರಿಗಳ ಆಯ್ಕೆಯಲ್ಲೂ ನಿರ್ದೇಶಕರು ಅಳೆದು ತೂಗಿ ಆರಿಸಿದಂತಿದೆ. ಪ್ರತಿ ಕಲಾವಿದರೂ ಒಬ್ಬರಿಗೊಬ್ಬರು ಮೀರಿಸುವ ಅಭಿನಯ ನೀಡಿದ್ದಾರೆ. ನಿಧಿಯಾಗಿ ರಾಧಿಕಾ ನಾರಾಯಣ್ ಇಡೀ ಚಿತ್ರದುದ್ದಕ್ಕೂ ಆವರಿಸಿ ಬಿಡುತ್ತಾರೆ. ಸಿಸಿಬಿ ಅಧಿಕಾರಿಯಾಗಿ ಅವಿನಾಶ್ ದಿವಾಕರ್ ತನ್ನ ಜೀವನ ಶ್ರೇಷ್ಠ ಅಭಿನಯ ನೀಡಿದ್ದರೆ, ಅವಿನಾಶ್ ಪತ್ನಿಯಾಗಿ ಹಾಗು ವೈದ್ಯೆಯಾಗಿ ಶೀತಲ್ ಶೆಟ್ಟಿ ವಿಭಿನ್ನವಾಗಿ ಕಾಣುತ್ತಾರೆ. ಕ್ಯೂಟ್ ವೈದ್ಯೆಯಾಗಿ, ಮುದ್ದಿನ ಹೆಂಡತಿಯಾಗಿ, ಮಗುವಿನ ತಾಯಿಯಾಗಿ ಶೀತಲ್ ಮೆಚ್ಚುಗೆಯಾಗುತ್ತಾರೆ. ಒಂದೇ ಒಂದು ನೋಟದಲ್ಲೇ ಅರವಿಂದ್ ರಾವ್ ‘ವಾವ್’ ಅನಿಸಿದರೆ ತನ್ನ ಎಂದಿನ ಗಂಭೀರ ಶೈಲಿಯಲ್ಲೇ ರಾಜೇಶ್ ನಟರಂಗ ಚಿತ್ರಕ್ಕೆ ಗಾಂಭೀರ್ಯ ತಂದಿದ್ದಾರೆ. ತರಲೆ ಹುಡುಗನಾಗಿ ಅರ್ಜುನ್ ಯೋಗಿ ನೆರೆಮನೆ ಹುಡುಗನ ಫೀಲ್ ನೀಡುತ್ತಾರೆ. ಮತ್ತೊಂದೆಡೆ ತುಳು ಚಿತ್ರರಂಗದ ಹಾಸ್ಯ ದಿಗ್ಗಜ ಅರವಿಂದ್ ಬೋಳಾರ್ ಪಂಚ್ ಡೈಲಾಗ್ ಇಲ್ಲಿ ವರ್ಕ್ ಔಟ್ ಆಗಿದ್ದು ಸಿನೆಮಾದ ಗಂಭೀರ ಪಯಣದ ಮಧ್ಯೆ ಪ್ರೇಕ್ಷಕರನ್ನು ಬಿದ್ದು ಬಿದ್ದು ನಗುವಂತೆ ಮಾಡಿ ಒಂದು ಬ್ರೇಕ್ ಕೊಡುತ್ತಾರೆ. ಮನುಷ್ಯರ ಪಾತ್ರಗಳು ಥ್ರಿಲ್ ನೀಡುವ ಜತೆಗೆ ಇಲ್ಲಿ ನಾಯಿ ಪಾತ್ರವೂ (ಮ್ಯಾಕ್ಸ್) ಥ್ರಿಲ್ ಒದಗಿಸುತ್ತದೆ. ರಾಧಿಕಾ ಹಾಗು ನಾಯಿ ಬ್ರೂನೋ (ಮ್ಯಾಕ್ಸ್), ಅರವಿಂದ್ ರಾವ್ ಜತೆಗೆ ಕಾದಾಡುವ ಒಂದು ಸಾಹಸ ದೃಶ್ಯ ಕೂಡ ಇದ್ದು, ಮೈ ನವಿರೇಳಿಸುವಂತಿದೆ. ಉಳಿದಂತೆ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಪ್ರಮೋದ್ ಶೆಟ್ಟಿ, ಅತಿಥಿ ಪಾತ್ರದಲ್ಲಿ ಬರುವ ಬಾಲಿವುಡ್ ನಟ ಸುಶಾಂತ್ ಪೂಜಾರಿ, ಪೊಲೀಸ್ ಅಧಿಕಾರಿಗಳಾಗಿ ರೆಹಮಾನ್ ಹಾಸನ್, ಸುಂದರ್ ವೀಣಾ, ವೈದ್ಯೆಯಾಗಿ ವೀಣಾ ಸುಂದರ್, ಶ್ವೇತಾ ಸಂಜೀವುಲು ನೆನಪಿಡುವ ಪಾತ್ರಗಳಾಗಿ ಉಳಿಯುತ್ತಾರೆ.

ಪ್ರತಿಭಾವಂತರೇ ತಾಂತ್ರಿಕ ವರ್ಗದಲ್ಲಿದ್ದು ರಾಜ್ಯಪ್ರಶಸ್ತಿ ವಿಜೇತ ಛಾಯಾಗ್ರಾಹಕ ಅನಂತ್ ಅರಸ್ ಛಾಯಾಗ್ರಹಣ, ಸಂಕಲನಕಾರರಾಗಿ ಶ್ರೀ ಕ್ರೇಜಿ ಮೈಂಡ್ಸ್, ಕಲಾ ನಿರ್ದೇಶಕ ನಾಯಕ ಅವಿನಾಶ್ ದಿವಾಕರ್, ಡಿಐ ಹಾಗು ಕಲರ್ ಗ್ರೇಡಿಂಗ್ ಮಾಡಿರುವ ಕೇರಳದ ತಂತ್ರಜ್ಞ ರಾಜ್ಯಪ್ರಶಸ್ತಿ ವಿಜೇತ ಲಿಜು ಪ್ರಭಾಕರನ್, ಸೌಂಡ್ ಡಿಸೈನರ್ ಗೀತಾ ಗುರುಪ್ಪ ಚಿತ್ರದ ಪ್ರತಿ ಫ್ರೇಮ್ ಅನ್ನು ಶ್ರೀಮಂತವಾಗಿಸಿದ್ದಾರೆ. ಚೊಚ್ಚಲ ನಿರ್ದೇಶನದಲ್ಲೇ ನಿರ್ದೇಶಕ ವಿಲೋಕ್ ಶೆಟ್ಟಿ ಪಳಗಿದಂತೆ ಕಾಣುತ್ತಾರೆ. ಉಮೇಶ್ ಪಿಲಿಕುಡೇಲು ಬರಹದ ‘ಮನದ ಹೊಸಿಲ’ ಹಾಗು ‘ನಿಜಾನಾ ಏನಿದು’ ಹಾಡುಗಳು ಮತ್ತೆ ಗುನುಗುವಂತಿದೆ.

ಚಿತ್ರದ ಆರಂಭದಿಂದ ಅಂತ್ಯದವರೆಗೂ ಕುತೂಹಲ ಕಾಯ್ದುಕೊಂಡು ಸೀಟಿಗೆ ಅಂಟಿ ಕೂರುವಂತೆ ಮಾಡುವ ಚೇಸ್ ಎರಡೂವರೆ ಗಂಟೆ ಥ್ರಿಲ್ ನೀಡುತ್ತದೆ. ಒಂದು ಪಕ್ಕಾ ಥ್ರಿಲ್ಲರ್ ಅನುಭವ ನಿಮ್ಮದಾಗಬೇಕಾದರೆ ಹಾಗು ಉತ್ತಮ ಕಥಾಹಂದರದ ಸವಿ ಉಣ್ಣಬೇಕಾದರೆ ಚಿತ್ರ ಮಿಸ್ ಮಾಡಿಕೊಳ್ಳಬೇಡಿ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments