
ಬೆಳಗಾವಿ: ದಿನೇ ದಿನೇ ಹೆಚ್ಚಾಗುತ್ತಿರುವ ಪಂಚಮಸಾಲಿ ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯದ ಮೀಸಲಾತಿ ಬೇಡಿಕೆ ಹಿನ್ನೆಲೆಯಲ್ಲಿ ಇಂದು (ಗುರುವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, 2 ಸಿ ಹಾಗೂ 2 ಡಿ ಪ್ರವರ್ಗ ಸೃಷ್ಟಿ ಮಾಡಿ ಎರಡು ಪ್ರಬಲ ಸಮುದಾಯಗಳಿಗೆ ಮೀಸಲಾತಿ ನೀಡುವ ತೀರ್ಮಾನ ಕೈಗೊಂಡಿದೆ.
ಹಿದುಳಿದ ವರ್ಗಗಳಿಗೆ ಇರುವ 2 ಎ ಹಾಗೂ 2 ಬಿ ಜೊತೆಗೆ 2 ಸಿ ಹಾಗೂ 2 ಡಿ ಪ್ರವರ್ಗ ಸೃಷ್ಟಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, 3 ಎ ನಲ್ಲಿ ಇರುವ ಒಕ್ಕಲಿಗರನ್ನು 2 ಸಿ ಗೆ ಸೇರ್ಪಡೆ ಹಾಗೂ 3 ಬಿ ಯಲ್ಲಿ ಇದ್ದ ಲಿಂಗಾಯತರನ್ನು 2 ಡಿ ಗೆ ಸೇರ್ಪಡೆ ಮಾಡಲು ತೀರ್ಮಾನ ಮಾಡಲಾಗಿದೆ. ಆದರೆ ಮೀಸಲಾತಿ ಪ್ರಮಾಣವನ್ನು ನಂತರ ನಿರ್ಧರಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ರಾಜ್ಯ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ, “ಹಿಂದುಳಿದ ವರ್ಗಗಳ 2ಎ ಕೆಟಗರಿನಲ್ಲಿ 15% ಜನಸಂಖ್ಯೆ ಇದ್ದು, ಅವರಿಗೆ ನೀಡಲಾಗಿರುವ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡದಿರಲು ತೀರ್ಮಾನ ಮಾಡಲಾಗಿದೆ. ಅದೇ ರೀತಿ 2 ಬಿ ಪ್ರವರ್ಗದಲ್ಲಿಯೂ ಯಾವುದೇ ಬದಲಾವಣೆ ಮಾಡದೆ ಇರಲು ನಿರ್ಧಾರ ಮಾಡಲಾಗಿದೆ. 3ಎ ನಲ್ಲಿ ಇದ್ದ ಒಕ್ಕಲಿಗರನ್ನು 2ಸಿ ಗೆ ತರಲು ಹಾಗೂ 3ಬಿ ನಲ್ಲಿ ಇದ್ದ ಲಿಂಗಾಯತರನ್ನು 2ಡಿ ಪ್ರವರ್ಗಕ್ಕೆ ಸೇರ್ಪಡೆ ಮಾಡಲಾಗುವುದು” ಎಂದು ಹೇಳಿದರು.












































