
ಕಾಸರಗೋಡು: ಕಾಸರಗೋಡು ಜಿಲ್ಲೆಯ ಮೆಯೆಂಜಾ ಗ್ರಾಮ ಪಂಚಾಯತ್ ನ ಮೀಯಪದವು ಎಂಬಲ್ಲಿ ಶುಕ್ರವಾರ ಬೆಳಗ್ಗೆ ಶಾಲಾ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಂಗಳೂರು ಕಾಲೇಜಿಗೆ ಬರುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮೂವರು ಪ್ರತಿ ದಿನ ಒಂದೇ ಬೈಕಿನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತರನ್ನು ಮಿಯಪದವು ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಹರೀಶ್ ಶೆಟ್ಟಿ ಪೂರ್ಣಿಮಾ ಶೆಟ್ಟಿ ದಂಪತಿಯ ಪುತ್ರ ಪ್ರೀತೇಶ್ ಶೆಟ್ಟಿ (18) ಮತ್ತು ಮಿಯಾಪದವ್‌ನ ದಿನಗೂಲಿ ಕಾರ್ಮಿಕರಾದ ಸುರೇಶ್ ಭಂಡಾರಿ ಮತ್ತು ಹರಿನಾಶಿ ಭಂಡಾರಿ ದಂಪತಿಯ ಪುತ್ರ ಅಭಿಷೇಕ್ ಭಂಡಾರಿ (18) ಎಂದು ಗುರುತಿಸಲಾಗಿದೆ. ಗಾಯಗೊಂಡ ಮತ್ತೋರ್ವ ವಿದ್ಯಾರ್ಥಿಯನ್ನು ದಿನಗೂಲಿ ಕಾರ್ಮಿಕ ವಿಶ್ವನಾಥ ಶೆಟ್ಟಿ ಅವರ ಪುತ್ರ ನಮಿತ್ ಶೆಟ್ಟಿ (17) ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನ ಶ್ರೀ ದೇವಿ ಕಾಲೇಜು ಹಾಗು ಪ್ರೇರಣಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಾದ ಮೂವರು ವಿದ್ಯಾರ್ಥಿಗಳು ಮೋಟಾರ್ ಸೈಕಲ್‌ನಲ್ಲಿ ಟ್ರಿಪಲ್ ರೈಡಿಂಗ್ ಮಾಡುತ್ತಿದ್ದರು. ಪ್ರತಿದಿನ 12 ಕಿ.ಮೀ ದೂರದ ಮಂಜೇಶ್ವರ ರೈಲು ನಿಲ್ದಾಣಕ್ಕೆ ಮೋಟಾರು ಸೈಕಲ್‌ನಲ್ಲಿ ಹೋಗಿ ತಮ್ಮ ಕಾಲೇಜಿಗೆ ತೆರಳಲು ಮಂಗಳೂರಿಗೆ ರೈಲನ್ನು ಹತ್ತುತ್ತಿದ್ದರು. ಎಂದಿನಂತೆ ಇಂದು ಕೂಡ ರೈಲ್ವೆ ಸ್ಟೇಷನ್ನಿಗೆ ಹೋಗುವಾಗ ಬೆಳಿಗ್ಗೆ 7.15 ರ ಸುಮಾರಿಗೆ ಗ್ರಾಮದ ರಸ್ತೆಯ ಮಿಯಾಪದವ್ ಎಂಬಲ್ಲಿ ತೀಕ್ಷ್ಣವಾದ ತಿರುವಿನಲ್ಲಿ ಮೋಟರ್‌ಸೈಕಲ್ ಬಸ್‌ಗೆ ಡಿಕ್ಕಿ ಹೊಡೆದು ದುರ್ಘಟನೆ ಜರಗಿದೆ.
ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL












































