
ಮಂಡ್ಯ: ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದಕ್ಕೆ ಸ್ವ ಪಕ್ಷ ಬಿಜೆಪಿಯಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಡ್ಯದಲ್ಲಿ ಸ್ವಪಕ್ಷೀಯರೇ ಅಶೋಕ್ ವಿರುದ್ಧ “ಗೋ ಬ್ಯಾಕ್’ ಹಾಗೂ “ಬಾಯ್ಕಟ್’ ಪೋಸ್ಟರ್ ಹಚ್ಚುವ ಮೂಲಕ ಅಭಿಯಾನ ಆರಂಭಿಸಿದ್ದಾರೆ.
ಗೋಡೆ ಬರಹಗಳ ಮೂಲಕ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ಅಶೋಕ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಅಭಿಯಾನ ಆರಂಭಿಸಿದ್ದು ಮಂಡ್ಯ ನಗರದ ಬೀದಿಗಳ ಗೋಡೆಗಳ ಮೇಲೆ “ಆರ್.ಅಶೋಕ್ ಗೋಬ್ಯಾಕ್’, “ಬಾಯ್ಕಟ್’ ಎಂಬ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಅಶೋಕ್ ಒಬ್ಬ ಅಡ್ಜಸ್ಟ್-ಮೆಂಟ್ ರಾಜಕಾರಣಿ ಅವರು ಅನ್ಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾ ಬಂದಿರುವವವರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಚಿವ ಅಶೋಕ್ ಅವರು ಜೆಡಿಎಸ್ ಜತೆ ಹೊಂದಾಣಿಕೆ ರಾಜಕಾರಣ ಮಾಡುದ್ದಾರೆ. ಆ ಕಾರಣದಿಂದಲೇ ಮಂಡ್ಯ ಜಿಲ್ಲೆಯಲ್ಲಿ ಈವರೆಗೂ ಬಿಜೆಪಿ ಪಕ್ಷ ಬೆಳೆಯಲು ಸಾಧ್ಯವಾಗಿಲ್ಲ. ದಯಮಾಡಿ ನೀವು ವಾಪಸ್ ಹೋಗಿ ಎಂದು ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಅಶೋಕ್ ವಿರುದ್ಧ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದ ಆರೋಪಗಳು ಕೇಳಿ ಬಂದಿದ್ದವು. ಬಿಜೆಪಿಯ ರಾಷ್ಟ್ರೀಯ ಪರಿಷತ್ ಸದಸ್ಯ ಡಾ. ಸಿದ್ದರಾಮಯ್ಯ ಅವರು ಬಹಿರಂಗವಾಗಿಯೇ ಅಶೋಕ್ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.












































