
ಮಂಗಳೂರು : ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಜಾಗ ನೀಡಿದ್ದು ಮುಸ್ಲಿಂ ರಾಜರು ಎಂಬ ತನ್ನದೇ ಹೊಸ ಇತಿಹಾಸ ಸೃಷ್ಟಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದು ಈ ಕುರಿತು ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಇವರು ಯಾವ ಇತಿಹಾಸ ಹೇಳುತ್ತಿದ್ದಾರೆ ಎಂದು ಕೇಳಿರುವ ಹಿಂದೂ ನಾಯಕರುಗಳು ಮಿಥುನ್ ರೈ ಹೇಳಿರುವ ರಾಜ ಯಾರು ಎಂದು ಪ್ರಶ್ನಿಸಿದ್ದಾರೆ.
ಮೂಡಬಿದಿರೆಯ ಪುತ್ತಿಗೆಯಲ್ಲಿ ನಡೆದ ‘ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಥುನ್ ರೈ ಈ ವಿವಾದಾತ್ಮಕ ಹೇಳಿಕೆ ನೀಡಿದ್ದು ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಮಿಥುನ್ ರೈ ಮತ್ತೆ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಸೌಹಾರ್ದತೆಯ ಕುರಿತು ಹೇಳಿಕೆ ನೀಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮಿಥುನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಉಡುಪಿ ಶಾಸಕ ರಘುಪತಿ ಭಟ್, ಯಾವ ಮುಸ್ಲಿಂ ರಾಜನೂ ಕೃಷ್ಣ ಮಠಕ್ಕೆ ಜಾಗ ಕೊಟ್ಟಿಲ್ಲ. ಅನಂತೇಶ್ವರ ದೇಗುಲಕ್ಕೆ ರಾಮಭೋಜ ಎಂಬವರು ಭೂಮಿ ಕೊಟ್ಟ ಉಲ್ಲೇಖವಿದ್ದು, ಆ ಭೂಮಿಯೇ ಕೃಷ್ಣ ಮಠಕ್ಕೆ ಬಳಕೆಯಾಗಿದೆ ಮತ್ತು 850 ವರ್ಷಗಳ ಹಿಂದೆ ಮಧ್ವಾಚಾರ್ಯರು ಕೃಷ್ಣ ಮಠ ನಿರ್ಮಾಣ ಮಾಡಿದ್ದರು. ಹಾಗೆ ನೋಡಿದರೆ ಉಡುಪಿಯಲ್ಲಿರುವ ಜಾಮಿಯಾ ಮಸೀದಿ ಕೂಡ ಹಿಂದೆ ಜಂಗಮರ ಮಠದ ಜಾಗದಲ್ಲಿತ್ತು ಎಂದು ಹೇಳಲಾಗಿತ್ತು. ಉಡುಪಿಯ ಶೋಕಮಾತಾ ಚರ್ಚ್ ಗೆ ಭೂಮಿಯನ್ನು ಕೃಷ್ಣಾಪುರ ಮಠದವರು ನೀಡಿರುವ ಬಗ್ಗೆ ಮಾಹಿತಿಗಳಿವೆ ಎಂದು ಹೇಳಿದ್ದಾರೆ.
ಈ ಹಿಂದೆ ಹಾಜಿ ಅಬ್ದುಲ್ಲಾ ಸಾಹೇಬರು ಮಠದ ಭಕ್ತರಾಗಿ ಕೃಷ್ಣ ಮಠಕ್ಕೆ ಸಹಾಯ ಮಾಡಿದ್ದಾರೆ. ಅದು ಬಿಟ್ಟರೆ ಬೇರೆ ಯಾವುದೇ ಸಂಬಂಧವಿಲ್ಲ. ಮಿಥುನ್ ರೈ ಹೇಳಿರುವ ರಾಜ ಯಾರು ಎಂದು ಪ್ರಶ್ನಿಸಿದ್ದಾರೆ. ಪ್ರಮೋದ್ ಮುತಾಲಿಕ್ ಸೇರಿರದಂತೆ ಹಲವು ಹಿಂದೂ ಮುಖಂಡರು ಮಿಥುನ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು ಪ್ರತಿಕ್ರಿಯಿಸಿ, ಆ ಹೇಳಿಕೆಗೆ ಆಧಾರವೇ ಇಲ್ಲ ಎಂದ ಮೇಲೆ ಅದರ ಮೇಲೆ ಚರ್ಚೆ ಅಗತ್ಯವೇ ಇಲ್ಲ ಎಂದಿದ್ದಾರೆ.
ನಮ್ಮ ವಾಟ್ಸಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ : https://chat.whatsapp.com/CMUDdTXoFVn7atm3zHYGrd












































