HomePoliticalಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಶರದ್ ಪವಾರ್: ಎನ್.ಸಿ.ಪಿಯ ಅಚ್ಚರಿಯ ನಡೆ

ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಿಸಿದ ಶರದ್ ಪವಾರ್: ಎನ್.ಸಿ.ಪಿಯ ಅಚ್ಚರಿಯ ನಡೆ

ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಬಿಜೆಪಿಯ ಕಟ್ಟರ್ ವಿರೋಧಿಯಾಗಿರುವ ಶರದ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಹಾಗು ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ತನ್ನ ಬೆಂಬಲ ಪ್ರಕಟಿಸುವ ಮೂಲಕ ಅಚ್ಚರಿಗೆ ಕಾರಣವಾಗುವಂತೆ ಮಾಡಿದೆ.

ಎನ್ಸಿಪಿ ಸರ್ಕಾರದೊಂದಿಗೆ ಕೈಜೋಡಿಸುವುದರೊಂದಿಗೆ ನಾಗಾಲ್ಯಾಂಡ್ ರಾಜ್ಯ ಮತ್ತೊಮ್ಮೆ ವಿರೋಧ ಪಕ್ಷವಿಲ್ಲದ ಸರ್ಕಾರ ಕಾಣುವಂತಾಗಿದೆ. ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಪಿಪಿ 25 ಮತ್ತು ಮಿತ್ರ ಪಕ್ಷ ಬಿಜೆಪಿ 12 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ನೀಫಿಯು ರಿಯೊ ಅವರು ಐದನೇ ಬಾರಿಗೆ ನಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೆ ಸಂದರ್ಭ ಎನ್‌ಡಿಪಿಪಿಯ ಏಳು ಹಾಗೂ ಬಿಜೆಪಿಯ ಐವರು ಶಾಸಕರು ಸಚಿವರಾಗಿ ಪ್ರಮಾಣವಚನಗೈದಿದ್ದರು.

7 ಸೀಟುಗಳನ್ನು ಪಡೆದು ಎನ್‌ಸಿಪಿ ನಾಗಾಲ್ಯಾಂಡ್ ನ ಮೂರನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ವಿರೋಧ ಪಕ್ಷದ ಸ್ಥಾನಕ್ಕೆ ಹಕ್ಕು ಪ್ರತಿಪಾದಿಸಲು ಶರದ್ ಪವಾರ್ ನೇತೃತ್ವದ ಪಕ್ಷಕ್ಕೆ ಸಾಕಷ್ಟು ಸದಸ್ಯ ಬಲ ಇತ್ತು. ಅಲ್ಲಿನ ಎನ್‌ಸಿಪಿ ಶಾಸಕರು ಪಕ್ಷದ ಈಶಾನ್ಯ ಉಸ್ತುವಾರಿ ನರೇಂದ್ರ ವರ್ಮಾ ಅವರು ನಾಗಾಲ್ಯಾಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ತಾವು ಸರ್ಕಾರದೊಂದಿಗೆ ಸೇರಿಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದರು. ಎನ್‌ಪಿಪಿ- ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡುವ ಶಾಸಕರ ಬೇಡಿಕೆಗೆ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ತಮ್ಮ ಅನುಮೋದನೆ ನೀಡಲು ನಿರ್ಧರಿಸಿದ್ದಾರೆ ಎಂದು ವರ್ಮಾ ಘೋಷಿಸಿದ್ದಾರೆ. ಈ ಮೂಲಕ ಎನ್‌ಸಿಪಿ ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮೈತ್ರಿ ಸರ್ಕಾರದ ಭಾಗವಾದಂತಾಗಿದೆ.

“ನಾಗಾಲ್ಯಾಂಡ್ ಸರ್ಕಾರದ ಭಾಗವಾಗಬೇಕೇ ಅಥವಾ ಬೇಡವೇ ಎನ್ನುವುದು ಎನ್‌ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಅವರ ತೀರ್ಮಾನಕ್ಕೆ ಬಿಟ್ಟ ವಿಷಯವಾಗಿತ್ತು. ಈಶಾನ್ಯ ರಾಜ್ಯ ಉಸ್ತುವಾರಿಯ ಮಾಹಿತಿಯನ್ನು ಆಲಿಸಿದ ಬಳಿಕ ಮಂಗಳವಾರ ಬೆಳಿಗ್ಗೆ ಅವರು ಈ ಬೇಡಿಕೆಯನ್ನು ಒಪ್ಪಿಕೊಂಡಿದ್ದಾರೆ” ಎಂದು ವರ್ಮಾ ತಿಳಿಸಿದ್ದಾರೆ.

ನಮ್ಮ ವಾಟ್ಸಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ : https://chat.whatsapp.com/CMUDdTXoFVn7atm3zHYGrd

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments