
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದು ಹೋಗಿದ್ದು ಇದೀಗ ಫಲಿತಾಂಶದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆಡಳಿತಾರೂಢ ಬಿಜೆಪಿ ಮರಳಿ ಅಧಿಕಾರಕ್ಕೆ ಏರಲು ತೀವ್ರ ಕಸರತ್ತು ನಡೆಸಿತ್ತು. ಕಾಂಗ್ರೆಸ್ ಈ ಬಾರಿ ನಾವೇ ಗೆಲ್ಲುವುದು ಅನ್ನುವ ಆತ್ಮವಿಶ್ವಾಸ ಹೊಂದಿತ್ತು. ಜೆಡಿಎಸ್ 30-40 ಸ್ಥಾನ ಗೆದ್ದು ಕಿಂಗ್ ಮೇಕರ್ ಆಗುವ ಪ್ಲಾನ್ ಹೊಂದಿತ್ತು. ಈ ಮೂರು ಪಕ್ಷಗಳ ಭವಿಷ್ಯ ಇದೀಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದ್ದು ಮೇ 13ರಂದು ಜನತಾ ತೀರ್ಪು ಯಾವ ಪಕ್ಷದ ಪರವಾಗಿರಲಿದೆ ಎನ್ನುವುದು ಬಹಿರಂಗಗೊಳ್ಳಲಿದೆ.
ಆಡಳಿತ ವಿರೋಧಿ ಅಲೆಯ ಮಧ್ಯೆಯೂ ಕೇಂದ್ರ ನಾಯಕರ ಸರಣಿ ಪ್ರಚಾರಗಳ ಕಾರಣದಿಂದ ಹಾಗು ಪ್ರಧಾನಿ ಮೋದಿ ಅವರ ವರ್ಚಸ್ಸಿನ ಕಾರಣ ಬಿಜೆಪಿ 86ರಿಂದ 99ರ ಆಸುಪಾಸಿಗೆ ಬಂದು ನಿಲ್ಲಬಹುದಾಗಿದೆ. 40 ಶೇಕಡಾ ಭ್ರಷ್ಟಾಚಾರ ಆರೋಪ, ಹಿರಿಯರ ಕಡೆಗಣನೆ, ಮುಖ್ಯಮಂತ್ರಿ ಮುಖವಾಗಿ ಈ ಬಾರಿ ಯಡಿಯೂರಪ್ಪ ಇಲ್ಲದಿರುವುದು ಇವೆಲ್ಲ ದಕ್ಷಿಣದಲ್ಲಿ ಬಿಜೆಪಿಗೆ ಮತ್ತೆ ಸರಕಾರ ರಚಿಸುವಲ್ಲಿ ತಡೆಗೋಡೆಯಾಗುವ ಲಕ್ಷಣಗಳಿತ್ತು. ಅದೀಗ ನಿಜವಾಗುವ ಸಂಭವವಿದೆ. ಇನ್ನು ಈ ಬಾರಿ ಗೆದ್ದೇ ಗೆಲ್ಲುತ್ತೇವೆ ಎಂದು ಭಾರೀ ಆತ್ಮವಿಶ್ವಾಸ ಹೊಂದಿರುವ ಕಾಂಗ್ರೆಸ್ 100ರ ಗಡಿ ದಾಟಲಿದ್ದು ಸ್ವತಂತ್ರವಾಗಿ ಅಧಿಕಾರಕ್ಕೆ ಏರಲು ಕೆಲವು ಸೀಟುಗಳ ಕೊರತೆಯನ್ನು ಎದುರಿಸಬಹುದು. ಹಿಂದೂ ವಿರೋಧಿ ನೀತಿ, ಭಜರಂಗದಳ ನಿಷೇಧದಂತಹ ಕೊನೇ ಕ್ಷಣದ ಮೂರ್ಖ ನಿರ್ಧಾರಗಳು ಕಾಂಗ್ರೆಸ್ ಅನ್ನು ಸ್ಪಷ್ಟ ಬಹುಮತದಿಂದ ದೂರ ಇರುವಂತೆ ಮಾಡಿದೆ. ಹಾಗಾಗಿ ಬಿಜೆಪಿ ಅಥವಾ ಕಾಂಗ್ರೆಸ್ ಮೂರನೇ ಪಕ್ಷವಾದ ಜೆಡಿಎಸ್ ಪಕ್ಷದೊಂದಿಗೆ ಕೈಜೋಡಿಸುವುದು ಅನಿವಾರ್ಯವಾಗಿದ್ದು ಸಮ್ಮಿಶ್ರ ಸರಕಾರ ಅಧಿಕಾರ ನಡೆಸುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ.
ಬಿಜೆಪಿ 86-99, ಕಾಂಗ್ರೆಸ್ 100-111, ಜೆಡಿಎಸ್ 22-25, ಪಕ್ಷೇತರ 1-3 ಸ್ಥಾನ ಗೆಲ್ಲುವ ಬಗ್ಗೆ ವಿಜಯಕನ್ನಡ ನಡೆಸಿದ ಜಿಲ್ಲಾವಾರು ಸರ್ವೆಯಿಂದ ತಿಳಿದುಬಂದಿದೆ. ಹಲವೆಡೆ ನಿರೀಕ್ಷೆಗಿಂತ ಕಡಿಮೆ ಮತದಾನವಾಗಿದ್ದು ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.












































