
ಬೆಂಗಳೂರು: ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ನೀಡಬೇಕು. ಏಕೆಂದರೆ, ಗೋಧ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರು ಅಹಿತಕರ ಘಟನೆ ಕರ್ನಾಟಕದಲ್ಲಿ ಆಗಬಹುದು, ನನಗೆ ಈ ಬಗ್ಗೆ ಮಾಹಿತಿ ಸಿಗುತ್ತಿದೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ. ಈ ಹಿಂದೆ ಕರಸೇವಕರು ಅಯೋಧ್ಯೆಯಿಂದ ಹಿಂತಿರುಗುವಾಗ ಗುಜರಾತ್ ನಲ್ಲಿ ಗೋಧ್ರಾ ದುರಂತ ನಡೆದಿತ್ತು. ಈ ಬಾರಿ ಅಯೋಧ್ಯೆಗೆ ತೆರಳುವ ಭಕ್ತರಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡಬೇಕು. ಈ ಬಗ್ಗೆ ಮಾಹಿತಿ ಸಿಕ್ಕಿಯೇ ನಾನು ಹೇಳುತ್ತಿದ್ದೇನೆ ಎಂದು ಹರಿಪ್ರಸಾದ್ ಹೇಳಿದ್ದಾರೆ.
ರಾಮಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮ ಅಲ್ಲ. ಇದೊಂದು ರಾಜಕೀಯ ಕಾರ್ಯಕ್ರಮವಾಗಿ ಬದಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ನಾವೆಲ್ಲರೂ ಹೋಗುತ್ತಿದ್ದೆವು. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗಿ ಆಗಬೇಕಿತ್ತು. ಉದ್ಘಾಟನೆಯನ್ನು ಧರ್ಮ ಗುರುಗಳು ನಡೆಸಿಕೊಟ್ಟಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು, ಆದರೆ ರಾಮಮಂದಿರ ಉದ್ಘಾಟನೆ ಹಾಗೆ ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಧರ್ಮ ಯಾವುದು ಅಂತ ಇನ್ನೂ ಗೊತ್ತಾಗಿಲ್ಲ. ಅಮಿತ್ ಶಾ ಧರ್ಮವೇ ಯಾವುದೂ ಅಂತ ಗೊತ್ತಾಗಿಲ್ಲ. ಅಯೋಧ್ಯೆಗೆ ಹೋಗುವವರ ಜತೆ ಗೋದ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರೂ ಆಗಬಹುದು. ಇವು ನನ್ನ ವೈಯಕ್ತಿಕ ಹೇಳಿಕೆ, ಪಕ್ಷಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಹರಿಪ್ರಸಾದ್ ಖಚಿತ ಮಾಹಿತಿಯ ಮೇರೆಗೆ ಹೇಳಿದ್ದಾರೋ ಅಥವಾ ರಾಮ ಭಕ್ತರ ದಿಕ್ಕು ತಪ್ಪಿಸಲು ಹೇಳಿದ್ದಾರೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಹರಿಪ್ರಸಾದ್ ಅವರು ರಾಜಕೀಯ ವಲಯದಲ್ಲಿ ಹರಕು ಬಾಯಿ ರಾಜಕಾರಣಿ ಎಂಬ ಹಣೆಪಟ್ಟಿ ಹೊಂದಿದ್ದಾರೆ ಅನ್ನುವುದು ಇಲ್ಲಿ ಉಲ್ಲೇಖನೀಯ.












































