
ಲಾಹೋರ್: ಮುಂಬೈ ಭಯೋತ್ಪಾದಕ ಧಾಳಿಯ ಸೂತ್ರಧಾರ, ಜಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ಪಾಕಿಸ್ತಾನದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆಂದು ವಿಶ್ವಸಂಸ್ಥೆ ಹೇಳಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿಯು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವೆಂಟ್ ಮತ್ತು ಅಲ್-ಖೈದಾ ಮೇಲಿನ ನಿರ್ಬಂಧಗಳಾದ ಸ್ವತ್ತುಗಳು ಜಪ್ತಿ, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧಕ್ಕೆ ಒಳಪಟ್ಟಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಯಮಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡಿದೆ. ಅದರಲ್ಲಿ ಹಫೀಜ್ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಬಗ್ಗೆ ವಿವರಿಸಲಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ 2008ರಲ್ಲಿ ಸಯೀದ್ ನನ್ನು ಜಾಗತಿಕ ಭಯೋತ್ಪಾದಕ ಎಂದು ಗುರುತಿಸಿತ್ತು. ಹಫೀಜ್ ಸಯೀದ್ ಈಗ 2020 ರಿಂದ ಪಾಕಿಸ್ತಾನ ಜೈಲಿನಲ್ಲಿದ್ದು ಹಲವು ಪ್ರಕರಣಗಳಲ್ಲಿ ಒಟ್ಟು 78 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ ಎಂದು ವಿಶ್ವಸಂಸ್ಥೆ ಹೇಳಿಕೊಂಡಿದೆ.












































