
ಕರಾಚಿ: ಭಾರತದಲ್ಲಿ ರಾಮ ಮಂದಿರ ಆರಂಭದ ಸಂಭ್ರಮ ಕಳೆಗಟ್ಟಿರುವಂತೆಯೇ ಪಾಕಿಸ್ತಾನದಲ್ಲಿ ಪಾಕ್ ಕ್ರಿಕೆಟಿಗನೊಬ್ಬ ಕೇಸರಿ ಧ್ವಜ ಕೈಯಲ್ಲಿ ಹಿಡಿದು ಜೈ ಶ್ರೀ ರಾಮ್ ಎಂದು ಕೂಗಿದ್ದಾರೆ. ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ದಾನಿಶ್ ಕನೇರಿಯಾ, ಪಾಕಿಸ್ತಾನಿ ಹಿಂದೂ ಆಗಿದ್ದಾರೆ. 2000ರಿಂದ 2010ರವರೆಗೆ ಪಾಕಿಸ್ತಾನ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಅವರು, ಪ್ರಮುಖ ಸ್ಪಿನ್ ಬೌಲರ್ ಆಗಿ ಗುರುತಿಸಿಕೊಂಡಿದ್ದರು.
ಅವರು ಸಾಮಾಜಿಕ ಮಾಧ್ಯಮದಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ ಬಗ್ಗೆ ತಮ್ಮ ನಿರೀಕ್ಷೆ ಹಾಗು ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ದಾನಿಶ್ ಕನೇರಿಯಾ ಅವರು ಭಗವಾನ್ ರಾಮನಿಗೆ ಸಮರ್ಪಿತವಾದ ಭವ್ಯವಾದ ದೇವಾಲಯದ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. ಭವ್ಯವಾದ ಮಂದಿರವು ಸಿದ್ಧವಾಗಿದೆ ಮತ್ತು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಕೇವಲ ಎಂಟು ದಿನಗಳು ಮಾತ್ರ ಇವೆ ಎಂದು ಕನೇರಿಯ ಹೇಳಿದ್ದಾರೆ. ಜತೆಗೆ ಭಗವಾನ್ ಶ್ರೀರಾಮನ ಚಿತ್ರ ಮತ್ತು ದೇವಸ್ಥಾನ ಹಿನ್ನೆಲೆಯಲ್ಲಿ ಅಲಂಕರಿಸಿದ ಧ್ವಜವನ್ನು ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಚಿತ್ರದಲ್ಲಿ, ದಾನಿಶ್ ಕನೇರಿಯಾ ಅವರು ಕೇಸರಿ ಧ್ವಜದೊಂದಿಗೆ ನಿಂತಿರುವ ಚಿತ್ರವಿದೆ ಹಾಗೂ ಅದರಲ್ಲಿ ಭಗವಾನ್ ರಾಮ ಮತ್ತು ದೇವಾಲಯವನ್ನು ಕಾಣಬಹುದಾಗಿದೆ. ಪಾಕಿಸ್ತಾನದಂತಹ ಹಿಂದೂ ದಮನಕಾರಿ ದೇಶದಲ್ಲಿ ಹಿಂದೂ ಧರ್ಮ ಹಾಗೂ ಹಿಂದೂ ದೇವರ ಬಗೆಗಿನ ಒಲವು ವ್ಯಕ್ತಪಡಿಸುವ ಅವರ ಧೈರ್ಯವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ












































