
ಬೆಂಗಳೂರು: ಭಾರತದ ಚೆಸ್ ತಾರೆ ರಮೇಶ್ ಬಾಬು ಪ್ರಜ್ಞಾನಂದ ಅವರು ಇತಿಹಾಸ ಸೃಷ್ಟಿಸಿದ್ದು ನೆದರ್ಲ್ಯಾನ್ಡ್ ನ ವಿಜ್ಕ್ ಆನ್ ಝೀ ಅಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರಿನ್ ಅವರನ್ನು ಮಣಿಸಿ ಚೆಸ್ ಮಾಸ್ಟರ್ ವಿಶ್ವನಾಥನ್ ಆನಂದ್ ನಂತರ ಹಾಲಿ ಚಾಂಪಿಯನ್ ಆಟಗಾರನನ್ನು ಮಣಿಸಿದ 2ನೇ ಭಾರತೀಯ ಎಂಬ ದಾಖಲೆ ಬರೆದಿದ್ದಾರೆ. ಅಲ್ಲದೆ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಮೊದಲ ಬಾರಿ ಟೀಮ್ ಇಂಡಿಯಾದ ನಂಬರ್ 1 ಚೆಸ್ ಆಟಗಾರ ಎಂಬ ಪಟ್ಟವನ್ನು ಅಲಂಕರಿಸಿದ್ದಾರೆ.
ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಭಾರತದ ಚೆಸ್ ತಾರೆ ರಮೇಶ್ ಬಾಬು ಪ್ರಜ್ಞಾನಂದ ಅವರು ಹಾಲಿ ಚೆಸ್ ಚಾಂಪಿಯನ್ ಚೀನಾದ ಡಿಂಗ್ ಲಿರಿನ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಚೆಸ್ ಚಾಂಪಿಯನ್ ವಿಶ್ವನಾಥನ್ ನಂತರ ಚಾಂಪಿಯನ್ ಆಟಗಾರನನ್ನು ಸೋಲಿಸಿದ ಎರಡನೇ ಭಾರತೀಯ ಎಂಬ ದಾಖಲೆಗೆ ಆರ್. ಪ್ರಜ್ಞಾನಂದ ಪಾತ್ರರಾಗಿದ್ದಾರೆ. ತಮ್ಮ ಇತ್ತೀಚಿಗಿನ ಅದ್ಭುತ ಪ್ರದರ್ಶನದಿಂದ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ ಪ್ರಜ್ಞಾನಂದ ಭಾರತದ ನಂಬರ್ 1 ಚೆಸ್ ಆಟಗಾರನಾಗಿ ಹೊರಹೊಮ್ಮಿದ್ದಾರೆ.
“ನಾನು ಯಾವುದೇ ದಿನವಾಗಲಿ, ಎಂತಹ ಚಾಂಪಿಯನ್ ಆಗಿರಲಿ ಅವರನ್ನು ನಾನು ಮಣಿಸುತ್ತೇನೆ ಎಂದು ಯೋಚಿಸುತ್ತಿದ್ದೆ. ಈ ಪಂದ್ಯ ನನಗೆ ಅತ್ಯಂತ ವಿಶೇಷವಾಗಿತ್ತು ಏಕೆಂದರೆ ಎದುರಾಳಿ ಚಾಂಪಿಯನ್ ಆಟಗಾರನನ್ನು ಮಣಿಸುವುದು ಅಷ್ಟು ಸುಲಭವಾಗಿರಲಿಲ್ಲ. ಕ್ಲಾಸಿಕ್ ಚೆಸ್ ನಲ್ಲಿ ಮೊಟ್ಟ ಮೊದಲ ಬಾರಿ ಚಾಂಪಿಯನ್ ಆಟಗಾರನನ್ನು ಮಣಿಸಿರುವುದು ತುಂಬಾ ಉತ್ತಮ ಅನುಭವವಾಗಿದೆ” ಎಂದು ಹೇಳಿದ್ದಾರೆ.












































