
ಭಾರತವು ಅಫ್ಘಾನಿಸ್ತಾನದೊಂದಿಗೆ ದೀರ್ಘಕಾಲದ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದೆ. ಅದಕ್ಕಾಗಿಯೇ ಕಳೆದ ಎರಡು ದಶಕಗಳಲ್ಲಿ ಅಫ್ಘಾನಿಸ್ತಾನದಲ್ಲಿ ರಾಷ್ಟ್ರ ಪುನರ್ನಿರ್ಮಾಣ ಪ್ರಕ್ರಿಯೆಯಲ್ಲಿ ಭಾರತ ಸಕ್ರಿಯ ಪಾತ್ರ ವಹಿಸಿದೆ. ಭಾರತವು ಅಫ್ಗಾನಿಸ್ತಾನದ ಮೇಲೆ ಹೂಡಿರುವ ಬಂಡವಾಳ 23 ಸಾವಿರ ಕೋಟಿಗಿಂತಲೂ ಅಧಿಕ!!
ನೆನಪಿರಲಿ ನಮ್ಮ ಪ್ರಧಾನಿಗಳು 2015 ರಲ್ಲಿ ಹೋಗಿ ರಿಬ್ಬನ್ ಕತ್ತರಿಸಿ ಬಂದ ಅಫ್ಗನ್ ಪಾರ್ಲಿಮೆಂಟ್ ಕಟ್ಟಿದವರೂ ಭಾರತೀಯರೇ. ಅದರ ವೆಚ್ಚ ಬರೊಬ್ಬರಿ ತೊಂಭತ್ತು ಮಿಲಿಯನ್!( ಒಂದು ಮಿಲಿಯನ್ ಅಂದ್ರೆ ಹತ್ತು ಲಕ್ಷ)
ಕಳೆದ ಎರಡು ದಶಕಗಳಲ್ಲಿ ಯುಎಸ್-ನ್ಯಾಟೋ ಪಡೆಗಳು ತಾಲಿಬಾನ್ ಮತ್ತು ಇತರ ಮೂಲಭೂತವಾದಿ ಶಕ್ತಿಗಳ ವಿರುದ್ಧ ಗುರಾಣಿಯನ್ನು ಒದಗಿಸಿದಾಗ, ರಾಷ್ಟ್ರ ನಿರ್ಮಾಣದ ಎಲ್ಲಾ ಅಂಶಗಳಲ್ಲಿ ಭಾರತ ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಿದೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಭಾರತವು ಕಾದು ನೋಡುವ ತಂತ್ರ ಅನುಸರಿಸಿದರೂ, ಸಮಯಕ್ಕೆ ಸರಿಯಾಗಿ ತನ್ನ ಎಲ್ಲಾ ದೂತಾವಾಸಗಳನ್ನು ಮುಚ್ಚಿದೆ ಮತ್ತು ಕಾಬೂಲ್ನಿಂದ ತನ್ನ 120 ದೂತಾವಾಸ ಸಿಬ್ಬಂದಿಯನ್ನು ಸ್ಥಳಾಂತರಿಸಿದೆ.
ಸಧ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಭಾರತವು ಉಗ್ರಗಾಮಿ ಗುಂಪಿನಿಂದ ನಿಯಂತ್ರಿಸಲ್ಪಡುವ ಸರ್ಕಾರದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ತಾಲಿಬಾನ್ ಆಳ್ವಿಕೆಯು ಅಫ್ಘಾನಿಸ್ತಾನದೊಂದಿಗಿನ ಭಾರತದ ಸೌಹಾರ್ದಯುತ ಸಂಬಂಧವನ್ನು ಹಾಳುಮಾಡುತ್ತದೆ ಮತ್ತು ನಂತರ ಯುದ್ಧದಿಂದ ಹಾನಿಗೊಳಗಾದ ದೇಶದಲ್ಲಿ ಅದರ ಕಾರ್ಯತಂತ್ರದ ಹೂಡಿಕೆಯನ್ನು ಅಡ್ಡಿಪಡಿಸುತ್ತದೆ.
2001ರ ಅನಾಹುತಗಳಿಂದ ಪೂರ್ತಿ ನಿರ್ನಾಮದ ಹಂತದಲ್ಲಿದ್ದ ಅಫ್ಗನ್ ಜನ ಜೀವನಕ್ಕೆ ಭಾರತದ ಕೊಡುಗೆ ಅಪರಿಮಿತವಾದುದು. Strategic interest ಅಂತಲೇ ಕರೆಸಿಕೊಳ್ಳುವ ಇಂತಹ ಒಪ್ಪಂದಗಳು ಭಾರತಕ್ಕೆ ಅನಿವಾರ್ಯವೂ ಆಗಿತ್ತು. ಚೀನಿಯರು ಪಾಕಿಸ್ತಾನದಲ್ಲಿ ಭದ್ರ ಬುನಾದಿ ಹೂಡಿದ್ದಕ್ಕೆ, ನಮಗೂ ಅಫ್ಗನ್ನರ ಸಹಾಯ ಬೇಕಿತ್ತು, ಅದಕ್ಕೆಂದೇ ಅಲ್ಲಿನ ರಸ್ತೆಗಳು, ಶಾಲೆಗಳು, ಆಸ್ಪತ್ರೆಗಳು,ಡ್ಯಾಮ್ ಗಳು, ಸೋಲಾರ ಪ್ನಯಾನೆಲ್, ವಿದ್ಯುತ್ ಸಂಪರ್ಕ ಹೀಗೆ ಹೆಚ್ಚಿನ ಎಲ್ಲವೂ ನಮ್ಮ ದೇಶದ ಕೊಡುಗೆಗಳೇ.
2011 ರಲ್ಲಿ ಉಭಯ ರಾಷ್ಟ್ರಗಳು ಭಾರತ-ಅಫ್ಘಾನಿಸ್ತಾನ ಕಾರ್ಯತಂತ್ರದ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದವು. ಇದು ವ್ಯಾಪಾರ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡಿತು. ಒಪ್ಪಂದದ ಭಾಗವಾಗಿ, ಉಭಯ ದೇಶಗಳು ,ವ್ಯಾಪಾರ, ಆರ್ಥಿಕ, ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರವನ್ನು ಬಲಪಡಿಸುವ ಭರವಸೆ ನೀಡಿವೆ. ಜೊತೆಗೆ ವ್ಯಾಪಾರ ಮತ್ತು ಉದ್ಯಮದ ಪ್ರತಿನಿಧಿಗಳ ನಡುವಿನ ಸಹಕಾರ, ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ದೃಷ್ಟಿಯಿಂದ, ಒಪ್ಪಂದದ ಭಾಗವಾಗಿ ಅಫ್ಘಾನಿಸ್ತಾನವು ಭಾರತೀಯ ಮಾರುಕಟ್ಟೆಗೆ ಸುಂಕ ರಹಿತ ಪ್ರವೇಶವನ್ನು ಪಡೆಯಿತು. 2019-20ರ ವೇಳೆಗೆ, ಭಾರತ ಮತ್ತು ಅಫ್ಘಾನಿಸ್ತಾನದ ನಡುವಿನ ದ್ವಿಪಕ್ಷೀಯ ವ್ಯಾಪಾರವು $ 1 ಬಿಲಿಯನ್ಗಿಂತಲೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ.
ಆದಾಗ್ಯೂ, ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ನ ಹೊಸ ನಿಯಂತ್ರಣವು ಭಾರತದೊಂದಿಗಿನ ದೇಶದ ವ್ಯಾಪಾರ ಸಂಬಂಧಕ್ಕೆ ಧಕ್ಕೆ ತಂದಿದೆ. ಹೋದ ವರ್ಷವಷ್ಟೇ ನಮ್ಮ ವಿದೇಶಾಂಗ ಮಂತ್ರಿಗಳು, 400 ಪ್ರಾಜೆಕ್ಟ್ ಗಳ ಘೋಷಣೆ ಮಾಡಿ, 34 ಪ್ರಾಂತ್ಯಗಳಲ್ಲಿ ಅವುಗಳ ನಿರ್ಮಾಣ ಕಾಮಗಾರಿ ಕೂಡ ಶುರುಮಾಡಿಯಾಗಿತ್ತು!
ಅಫ್ಘಾನಿಸ್ತಾನದಲ್ಲಿ ಭಾರತದ ಅನುದಾನಿತ ಯೋಜನೆಗಳಲ್ಲೊಂದು 42 ಮೆಗಾವ್ಯಾಟ್ ಸಾಮರ್ಥ್ಯದ ಸಲ್ಮಾ ಅಣೆಕಟ್ಟು ಯೋಜನೆ (ಹೆರಾತ್ ಪ್ರಾಂತ್ಯದ ಅಫಘಾನ್-ಭಾರತ ಸ್ನೇಹ ಅಣೆಕಟ್ಟು ಯೋಜನೆ). ಇದು ಜಲವಿದ್ಯುತ್ ಮತ್ತು ನೀರಾವರಿ ಯೋಜನೆಯಾಗಿದ್ದು, ಇದನ್ನು 2016 ರಲ್ಲಿ ಪೂರ್ಣಗೊಳಿಸಲಾಯಿತು.
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ನಿರ್ಮಿಸಿದ 218 ಕಿಮೀ ಮಾರ್ಗವಾದ ಜರಂಜ್-ದೇಲಾರಾಮ್ ಹೆದ್ದಾರಿಯು ಅಫ್ಘಾನಿಸ್ತಾನದಲ್ಲಿ ಭಾರತದ ಪ್ರಮುಖ ಯೋಜನೆಯಾಗಿದೆ. ಅಫ್ಘಾನಿಸ್ತಾನ-ಇರಾನ್ ಗಡಿಯ ಬಳಿ ಹೆದ್ದಾರಿ ನಿರ್ಮಾಣದ ವೆಚ್ಚ $ 150 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಹೆದ್ದಾರಿಯು ಇರಾನ್ನ ಪ್ರಮುಖ ಚಹಬಾರ್ ಬಂದರಿಗೆ ಪ್ರವೇಶವನ್ನು ಒದಗಿಸುತ್ತದೆ ಮತ್ತು ಇದು ನವದೆಹಲಿಗೆ ಕಾರ್ಯತಂತ್ರವಾಗಿ ಮುಖ್ಯವಾಗಿದೆ.
ಸಮಸ್ಯೆ ಇರುವುದು ಮೇಲಿನ ಕೆಲಸಗಳಲ್ಲಿ ಹಾಗೂ ಅದರಲ್ಲಿ ಹೂಡಿಕೆಯಾದ ಭಾರತದ ಹಣದಲ್ಲಿ. ಇವೆಲ್ಲದರ ಭವಿಷ್ಯ ಸದ್ಯ ಅನಿಶ್ಚಿತವಾಗಿದೆ. ತಾಲಿಬಾನಿಗಳು ಅಧಿಕಾರದಲ್ಲಿ ಇರುವಷ್ಟು ದಿನ ಇದ್ಯಾವುದಕ್ಕೂ ಅವಕಾಶ ಕೊಡದಂತೆ ಚೀನಿಯರು ತನ್ನ ಮಿತ್ರ ಪಾಕಿಸ್ತಾನದೊಟ್ಟಿಗೆ ಸೇರಿಕೊಂಡು ಇವರ ತಲೆಯನ್ನು ಈಗಾಗಲೇ ಕೆಡಿಸಲು ಶುರುಮಾಡಿದ್ದಾರೆ.
ಮೊನ್ನೆ ಯಾವುದೇ ತೊಂದರೆಯಿಲ್ಲದೇ ಭಾರತದ ಎಲ್ಲ ಡೆವೆಲೆಂಪಮೆಂಟ್ ಕೆಲಸಗಳು ಮುಂದುವರೆಯುತ್ತಿವೆ ಎಂದು ಹೇಳುತ್ಯಿದ್ದ ತಾಲಿಬಾನ್ ವಕ್ತಾರ, ಇವತ್ತಿಗಾಗಲೇ ಭಾರತಕ್ಕೂ ನಮಗೂ ಯಾವ ಸಂಬಂಧ ಇಲ್ಲ, ಎಲ್ಲ ಕನೆಕ್ಷನ್ ಕಟ್ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದಾನೆ.
ಬೆಳಿಗ್ಗೆ ಒಂದು ಸಂಜೆಯೊಂದು ಮಾತನಾಡುವ, ಸದಾ ಬಂದೂಕು ಹಿಡಿದು ಓಡಾಡುವ ಉಗ್ರರ ಮಧ್ಯೆ, ದಿನಾ ಸತ್ತು ಬದುಕುವ ಜನರಿಗಾಗಿ ಇದನ್ನೆಲ್ಲ ಮುಂದುವರೆಸಿಕೊಂಡು ಹೋಗಲು ಭಾರತ ತಯಾರಿದೆಯೆ ಎಂಬುದು ಪ್ರಶ್ನೆ!
ದೊಡ್ಡ ಮಟ್ಟದಲ್ಲಿ ಇದೆಲ್ಲ ಚರ್ಚೆ ನಡೆಯುವಾಗ ಫೇಸ್ಬುಕ್ ಪಂಡಿತರು, ನಾವೆಷ್ಟು ಅದೃಷ್ಟವಂತರು, ಅವರೆಷ್ಟು ನತದೃಷ್ಟರು, ಯಾರನ್ನು ಕಾಬೂಲ್ ಗೆ ಕಳಿಸೋದು, ಇನ್ಯಾರನ್ನು ಭಯೋತ್ಪಾದಕರು ಎಂದು ಕರೆಯೋದು, ನಮ್ದೇನು ಕಮ್ಮಿ, ನಾವ್ಯಾಕೆ ಹೆಚ್ಚು ಎಂಬ ಚರ್ಚೆಯಲ್ಲಿ ನಿರತರಾಗಿದ್ದಾರೆ!!












































