
ಲೇಖನ: ವಿನಾಯಕ ಗಾಂವಕರ್
ಕಳೆದ ಫೆಬ್ರವರಿ 24 ರಂದು ರಷ್ಯಾ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿದ ದಿನದಿಂದ ಜಗತ್ತಿನಾದ್ಯಂತ ಅನೇಕ ಪಲ್ಲಟಗಳು ಸಂಭವಿಸಿವೆ. ಅನೇಕ ರಾಷ್ಟ್ರಗಳ ಆರ್ಥಿಕತೆಗೆ ಈ ಯುದ್ಧ ಪೆಟ್ಟು ನೀಡಿದೆ, ಜನರ ಬದುಕು ಕಠಿಣವಾಗುವಂತೆ ಮಾಡಿದೆ. ನ್ಯಾಟೋ ಗುಂಪು ಹಾಗೂ ರಷ್ಯಾದ ನಡುವಣ ತಿಕ್ಕಾಟ ಈ ಯುದ್ಧಕ್ಕೆ ಪ್ರಮುಖ ಕಾರಣ ಎನ್ನಬಹುದು. ಆದರೆ ಆ ತಿಕ್ಕಾಟದಲ್ಲಿ ಸಿಲುಕಿಕೊಂಡಿದ್ದು ಬಡಪಾಯಿ ಯುಕ್ರೇನ್. ನ್ಯಾಟೋ ಗುಂಪಿನ ರಾಷ್ಟ್ರಗಳ ಗಡಿ ತನ್ನ ಮನೆ ಬಾಗಿಲ ಬಳಿ ಬರುವುದನ್ನು ತಪ್ಪಿಸಲು ಯುಕ್ರೇನ್ ನ ಮೇಲೆ ರಷ್ಯಾ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಘೋಷಿಸಿತು, ಆದರೆ ತನ್ನ ಉದ್ದೇಶದಲ್ಲಿ ರಷ್ಯಾ ಸಫಲವಾಯಿತೇ? ಖಂಡಿತವಾಗಿಯೂ ಇಲ್ಲ! ಏಕೆಂದರೆ ಇಲ್ಲಿಯವರೆಗೂ ನ್ಯಾಟೋ ಪಡೆ ಸೇರದೆ ದೂರ ಉಳಿದಿದ್ದ ರಷ್ಯಾದ ನೆರೆಯ ರಾಷ್ಟ್ರಗಳಾದ ಫಿನ್ ಲ್ಯಾoಡ್ ಹಾಗೂ ಸ್ವೀಡನ್ ಗಳು ನ್ಯಾಟೋ ಬಣವನ್ನು ಸೇರುವ ನಿರ್ಧಾರವನ್ನು ಕೈಗೊಳ್ಳಲು ಯುಕ್ರೇನಿನ ಮೇಲಿನ ರಷ್ಯಾದ ಆಕ್ರಮಣ ಕಾರಣವಾಗಿದೆ. ಅಲ್ಲಿಗೆ ಯುಕ್ರೇನಿನ ಮೇಲಿನ ರಷ್ಯಾದ ಆಕ್ರಮಣ ರಷ್ಯಾಗೆ ಪ್ರತಿಕೂಲವಾಯಿತೆ ಎಂಬ ಪ್ರಶ್ನೆಯ ಜೊತೆಗೆ, ರಷ್ಯಾವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ನ್ಯಾಟೋ ಬಣ ಯಶಸ್ವಿಯಾಯಿತೇ ಎಂಬ ಪ್ರಶ್ನೆಯೂ ಮೂಡುತ್ತದೆ.
ಇಲ್ಲಿಯವರೆಗೆ ಬಹುತೇಕ ತಟಸ್ಥ ವಿದೇಶಾಂಗ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದ ಫಿನ್ ಲ್ಯಾಂಡ್ ಹಾಗೂ ಸ್ವೀಡನ್ ಗಳನ್ನು ಶತ್ರುವಿನ ಬಣಕ್ಕೆ ನೂಕಿದ್ದು ರಷ್ಯಾದ ತಪ್ಪು ಲೆಕ್ಕಾಚಾರಗಳು ಎನ್ನಬಹುದು. 1809 ರಲ್ಲಿ ರಷ್ಯಾದೊಂದಿಗೆ ನಡೆದ ಯುದ್ಧದಲ್ಲಿ ತನ್ನ ಭಾಗವಾಗಿದ್ದ ಫಿನ್ ಲ್ಯಾoಡ್ ನ್ನು ಸ್ವೀಡನ್ ಕಳೆದುಕೊಂಡಿತು. ಅಂದಿನಿಂದ ಇಂದಿನವರೆಗೆ ಅಂದರೆ ಸುಮಾರು 200 ವರ್ಷಗಳಿಂದ ಸ್ವೀಡನ್ ಹಾಗೂ ರಷ್ಯಾಗಳ ಮಧ್ಯೆ ಯಾವುದೇ ಘರ್ಷಣೆಗಳು ನಡೆದಿಲ್ಲ. 1917 ರಲ್ಲಿ ರಷ್ಯಾದ ಕ್ರಾಂತಿ ನಡೆದು ಅರಾಜಕತೆ ಸೃಷ್ಟಿಯಾದ ಸಂದರ್ಭದಲ್ಲಿ, ಅದೇ ವರ್ಷ ಫಿನ್ ಲ್ಯಾoಡ್ ರಷ್ಯಾದಿಂದ ಪ್ರತ್ಯೇಕಗೊಂಡು ತನ್ನ ಸ್ವಾತಂತ್ರವನ್ನು ಘೋಷಿಸಿಕೊಂಡಿತು. 1939 ರಲ್ಲಿ ಸ್ಟ್ಯಾಲಿನ್ ನ ನೇತೃತ್ವದ ಸೋವಿಯತ್ ರಷ್ಯಾ ಆಗ ನಡೆದ ಚಳಿಗಾಲದ ಯುದ್ಧ (Winter War) ದಲ್ಲಿ ಫಿನ್ ಲ್ಯಾoಡ್ ನ್ನು ಆಕ್ರಮಿಸಿದಾಗ ಫಿನ್ ಲ್ಯಾoಡ್ ತನ್ನ 10% ರಷ್ಟು ಭೂ ಭಾಗವನ್ನು ಕಳೆದುಕೊಂಡಿತ್ತು. 1941 ರಲ್ಲಿ ಸೋವಿಯತ್ ರಷ್ಯಾದೊಂದಿಗೆ ನಡೆದ ಎರಡನೆಯ ಯುದ್ಧದಲ್ಲಿ ಫಿನ್ ಲ್ಯಾಂಡ್ ತಾನು ಕಡೆದುಕೊಂಡ ಭೂ ಭಾಗವನ್ನು ಮರಳಿ ಪಡೆಯಿತು. ಅದರ ನಂತರದ ದಿನಗಳಲ್ಲಿ ಫಿನ್ ಲ್ಯಾಂಡ್ ರಷ್ಯಾದೊಂದಿಗೆ ಆಶ್ಚರ್ಯಕರ ರೀತಿಯಲ್ಲಿ ಉತ್ತಮವಾದ ಸಂಬಂಧವನ್ನು ಬೆಳೆಸಿಕೊಂಡಿತು.
ಫಿನ್ ಲ್ಯಾoಡ್ ಹಾಗೂ ಸ್ವೀಡನ್ ದೇಶಗಳ ನ್ಯಾಟೋ ಸೇರ್ಪಡೆ, ನ್ಯಾಟೋಗೆ ತೀರ ಲಾಭಕಾರಿ. ಎರಡೂ ದೇಶಗಳು ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ, ಉತ್ತಮ ಆರ್ಥಿಕತೆಯನ್ನೂ ಹಾಗೂ ಸದೃಢ ಮಿಲಿಟರಿ ವ್ಯವಸ್ಥೆಗಳನ್ನೂ ಹೊಂದಿವೆ. ಫಿನ್ ಲ್ಯಾoಡ್ ಉತ್ತಮವಾದ ನೌಕಾಪಡೆಯನ್ನು ಹೊಂದಿದ್ದರೆ, ಸ್ವೀಡನ್ ಉತ್ತಮವಾದ ವಾಯುಪಡೆಯನ್ನು ಹೊಂದಿದೆ. ಸ್ವೀಡನ್ ನಿರ್ಮಿತ ಗ್ರಿಪೆನ್ ಯುದ್ಧ ವಿಮಾನಗಳನ್ನು ಖರೀದಿಸಲು ಅನೇಕ ರಾಷ್ಟ್ರಗಳು ತವಕಿಸುವುದೂ ಇದೆ. ಹಾಗಾಗಿ ಸ್ವೀಡನ್ ಹಾಗೂ ಫಿನ್ ಲ್ಯಾoಡ್ ಗಳ ಸೇರ್ಪಡೆ ನ್ಯಾಟೋವನ್ನು ಇನ್ನಷ್ಟು ಸಶಕ್ತಗೊಳಿಸಲಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಈ ಎರಡು ದೇಶಗಳ ನ್ಯಾಟೋ ಸೇರ್ಪಡೆ ರಷ್ಯಾಗೆ ದೊಡ್ಡ ತಲೆನೋವಾಗಿ ಪರಿಣಮಿಸುವುದು ಖಚಿತ. ಫಿನ್ ಲ್ಯಾಂಡ್ ನೊoದಿಗೆ ಗಡಿಯನ್ನು ಹಂಚಿಕೊಂಡಿರುವ ರಷ್ಯಾದ ಭಾಗವಾಗಿರುವ ಕೋಲ ಪರ್ಯಾಯ ದ್ವೀಪ(Kola peninsula ) ದಲ್ಲಿ ರಷ್ಯಾ ತನ್ನ ಕ್ಷಿಪಣಿ ವ್ಯವಸ್ಥೆಯನ್ನು, ಪ್ರಮುಖ ಬಾಂಬರ್ ಗಳನ್ನೂ ಹೊಂದಿದೆ. ಆದರೆ ಈ ಕೋಲ ಪರ್ಯಾಯ ದ್ವೀಪ ರಷ್ಯಾದೊಂದಿಗೆ ಒಂದೇ ಒಂದು ಭೂಮಾರ್ಗದ ಮೂಲಕ ಸಂಪರ್ಕವನ್ನು ಹೊಂದಿದೆ. ಈ ಭೂಮಾರ್ಗ ಫಿನ್ ಲ್ಯಾಂಡ್ ನ ಗಡಿಗೆ ಅತೀ ಸನಿಹದಲ್ಲಿದ್ದು ಸುಲಭವಾಗಿ ದಾಳಿಗೆ ತುತ್ತಾಗಬಹುದಾಗಿದೆ. ಈ ಭೂ ಮಾರ್ಗವನ್ನೇನಾದರೂ ಫಿನ್ ಲ್ಯಾಂಡ್ ಹಾಳುಗೆಡವಿದರೆ ಕೋಲ ಪರ್ಯಾಯ ದ್ವೀಪ ಹಾಗೂ ರಷ್ಯಾದ ಇತರ ಭಾಗದ ನಡುವಿನ ಸಂಪರ್ಕವೇ ತಪ್ಪಿ ಹೋಗಬಹುದು. ಅದಲ್ಲದೆ ಫಿನ್ ಲ್ಯಾoಡ್ ಹಾಗೂ ಸ್ವೀಡನ್ ಗಳು ನ್ಯಾಟೋ ಬಣವನ್ನು ಸೇರುವುದರಿಂದ ಬಾಲ್ಟಿಕ್ ಸಮುದ್ರ ಸಂಪೂರ್ಣವಾಗಿ ನ್ಯಾಟೋಮಯವಾಗಿ ಬದಲಾಗುತ್ತದೆ. ಹೀಗಾಗಿ ರಷ್ಯಾದ ಜಲಾಂತರ್ಗಾಮಿಗಳು ಅಮೇರಿಕಾದ ಕಣ್ಣಿಗೆ ಗೋಚರವಾಗದಂತೆ ಬಾಲ್ಟಿಕ್ ಸಮುದ್ರದಲ್ಲಿ ಸಂಚರಿಸುವುದು ಇನ್ನು ಮುಂದಿನ ದಿನಗಳಲ್ಲಿ ಅಸಾಧ್ಯ. ಈ ಬಾಲ್ಟಿಕ್ ಸಮುದ್ರ ರಷ್ಯಾಗೆ ಅಂಟ್ಲಾಟಿಕ್ ಸಾಗರವನ್ನು ಪ್ರವೇಶಿಸಲು ಇದ್ದ ಸುಗಮವಾದ ಹಾದಿಯಾಗಿತ್ತು. ಇಂತಹ ಒಂದು ಅನುಕೂಲಕರವಾದ ಹಾದಿ ರಷ್ಯಾಗೆ ಇನ್ನು ಮುಂದಿನ ದಿನಗಳಲ್ಲಿ ಅನುಕೂಲಕರವಾಗಿರುವುದಿಲ್ಲ ಎಂಬುದು ವಾಸ್ತವ. ಅಲ್ಲದೆ ನ್ಯಾಟೋ ರಾಷ್ಟ್ರಗಳು ರಷ್ಯಾದೊಂದಿಗೆ ಹೊಂದಿದ್ದ ಗಡಿ ಮೊದಲಿಗಿಂತ ಎರಡು ಪಟ್ಟು ವಿಸ್ತರಣೆಯಾಗುವ ಕಾರಣ ತನ್ನ ಪಶ್ಚಿಮದ ಗಡಿ ರಕ್ಷಣೆಗಾಗಿ ರಷ್ಯಾ ಹೆಚ್ಚಿನ ಸಂಪನ್ಮೂಲವನ್ನು ವ್ಯಯಿಸಬೇಕಾಗುತ್ತದೆ.
ಆದರೆ ಈ ಎರಡೂ ರಾಷ್ಟ್ರಗಳ ನ್ಯಾಟೋ ಸೇರ್ಪಡೆ ಅಂದುಕೊಂಡಷ್ಟು ಸುಲಭವಾಗಿಲ್ಲ. 30 ಸದಸ್ಯರುಗಳಿರುವ ನ್ಯಾಟೋ ಗುಂಪಿನ ಎಲ್ಲಾ ರಾಷ್ಟ್ರಗಳೂ ಒಪ್ಪಿಕೊಂಡಾಗ ಮಾತ್ರ ಒಂದು ಹೊಸ ದೇಶ ನ್ಯಾಟೋದ ಸದಸ್ಯತ್ವವನ್ನು ಪಡೆಯಲು ಸಾಧ್ಯ. ಈ ಎರಡು ರಾಷ್ಟ್ರಗಳ ಸೇರ್ಪಡೆಯನ್ನು ಟರ್ಕಿ ಬಲವಾಗಿ ವಿರೋಧಿಸುತ್ತಿದೆ. ಇದಕ್ಕೆ ಕಾರಣ ಕುರ್ದಿಶ್ ಜನಾಂಗದವರಿಗೆ ಸ್ವೀಡನ್ ಹಾಗೂ ಫಿನ್ ಲ್ಯಾoಡ್ ಗಳು ನೀಡುತ್ತಿರುವ ಬೆಂಬಲ. ಕುರ್ದಿಶ್ ಜನಾಂಗದವರು ಇಸ್ಲಾಂ ಮತವನ್ನೇ ಅನುಸರಿಸಿದರೂ ತಮ್ಮದೇ ಆದ ಭಾಷೆ, ಸಂಸ್ಕೃತಿ ಉಡುಗೆ ತೊಡುಗೆಗಳನ್ನು ಹೊಂದಿದ್ದಾರೆ. ಇವೆಲ್ಲವನ್ನೂ ಹತ್ತಿಕ್ಕಿದ ಟರ್ಕಿ, ಕುರ್ದಿಷ್ ಭಾಷೆಯನ್ನೂ ನಿಷೇಧಿಸಿತ್ತು. ಇದರಿಂದ ಕುರ್ದಿಷ್ ಗುಂಪುಗಳು ಸಶಸ್ತ್ರ ಹೋರಾಟವನ್ನು ಆರಂಭಿಸಿದವು. ಕುರ್ದಿಶ್ ಸಂಘಟನೆಗಳಲ್ಲಿ ಮುಖ್ಯ ಸಂಘಟನೆಯಾದ ಕುರ್ದಿಸ್ತಾನ ವರ್ಕರ್ಸ್ ಪಾರ್ಟಿಯನ್ನು ಟರ್ಕಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಆದರೆ ಇಂತಹ ಸಂಘಟನೆಗಳಿಗೆ ಫಿನ್ ಲ್ಯಾಂಡ್ ಹಾಗೂ ಸ್ವೀಡನ್ ಬೆಂಬಲ ನೀಡುತ್ತಿವೆ ಎಂಬುದು ಟರ್ಕಿಯ ಕೋಪಕ್ಕೆ ಕಾರಣವಾಗಿದೆ.
ಟರ್ಕಿಯ ವಿರೋಧದಲ್ಲಿ ರಷ್ಯಾದ ಪಾತ್ರವನ್ನು ನಾವು ನಿರ್ಲಕ್ಷಿಸುವಂತಿಲ್ಲ. ಟರ್ಕಿ ರಷ್ಯಾದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ರಷ್ಯಾದೊಂದಿಗೆ ಇಂತಹ ಒಂದು ಸಂಬಂಧವನ್ನು ಹೊಂದಿರುವ ಕಾರಣ, ಅದು ನ್ಯಾಟೋ ಗುಂಪಿನಲ್ಲಿರಲು ಅರ್ಹವಲ್ಲ ಎಂಬ ವಾದಗಳೂ ಇವೆ. ಹಾಗಾಗಿ ಟರ್ಕಿಯನ್ನು ಬಳಸಿಕೊಂಡು ಫಿನ್ ಲ್ಯಾಂಡ್ ಹಾಗೂ ಸ್ವೀಡನ್ ಗಳ ಸೇರ್ಪಡೆಗೆ ರಷ್ಯಾ ಅಡ್ಡಗಾಲು ಹಾಕುತ್ತಿದೆಯೇ, ಎಂಬ ಪ್ರಶ್ನೆ ಉದ್ಭವಿಸುತ್ತದೆ. ತನ್ನ ವೈಯಕ್ತಿಕ ಹಿತಾಸಕ್ತಿಗಳ ಸಾಧನೆಗಾಗಿ ಟರ್ಕಿ ಈ ವಿರೋಧವನ್ನು ತೋರುತ್ತಿರುವ ಸಾಧ್ಯತೆಗಳೂ ಇಲ್ಲದಿಲ್ಲ. ಟರ್ಕಿ ರಷ್ಯಾದಿಂದ S-400 ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿದ ಕಾರಣಕ್ಕೆ ಆ ದೇಶಕ್ಕೆ F-35 ಯುದ್ದ ವಿಮಾನಗಳನ್ನು ನೀಡಲು ಅಮೆರಿಕ ನಿರಾಕರಿಸಿತ್ತು. ಈಗಿರುವ ಸನ್ನಿವೇಶವನ್ನು ಟರ್ಕಿ F-35 ಯುದ್ಧ ವಿಮಾನಗಳಿಗಾಗಿ ಲಾಬಿ ಮಾಡಲು ಬಳಸಬಹುದು. ಇತ್ತ ಫಿನ್ ಲ್ಯಾಂಡ್ ನ್ಯಾಟೋವನ್ನು ಸೇರುವ ತನ್ನ ನಿರ್ಧಾರವನ್ನು ಪ್ರಕಟಿಸುತ್ತಿದ್ದಂತೆ ರಷ್ಯಾ ತಾನು ಫಿನ್ ಲ್ಯಾಂಡ್ ಗೆ ಸರಬರಾಜು ಮಾಡುತ್ತಿದ್ದ ನೈಸರ್ಗಿಕ ಅನಿಲದ ಸರಬರಾಜನ್ನು ನಿಲ್ಲಿಸಿಬಿಟ್ಟಿದೆ.
ಫಿನ್ ಲ್ಯಾಂಡ್ ಹಾಗೂ ಸ್ವೀಡನ್ ನ್ಯಾಟೋ ಸೇರ್ಪಡೆಗಿರುವ ಅಡ್ಡಿಯನ್ನು ನಿವಾರಿಸಿಕೊಳ್ಳಲು ಟರ್ಕಿಯೊಂದಿಗೆ ಮಾತುಕತೆಯನ್ನು ಪ್ರಾರಂಭಿಸಿವೆ. ಅಮೆರಿಕವೂ ಸಹ ಟರ್ಕಿಯನ್ನು ಒಪ್ಪಿಸಲು ಪ್ರಯತ್ನಿಸುತ್ತಿದೆ. ಮುಂದಿನ ದಿನಗಳಲ್ಲಿ ಟರ್ಕಿ ತನ್ನ ಪಟ್ಟನ್ನು ಸಡಲಿಸಿ ನ್ಯಾಟೋದ ವಿಸ್ತರಣೆಗೆ ಹಸಿರು ನಿಶಾನೆಯನ್ನೇನೋ ತೋರಬಹುದು. ಆದರೆ ನ್ಯಾಟೋ ಪಡೆ ಹಾಗೂ ರಷ್ಯಾದ ನಡುವಿನ ಚದುರಂಗದಾಟ ಇನ್ನೊಂದು ದೊಡ್ಡ ಯುದ್ಧಕ್ಕೆ ಕಾರಣವಾದರೂ ಅಚ್ಚರಿಯಿಲ್ಲ. ಈಗಾಗಲೇ ನಡೆಯುತ್ತಿರುವ ರಷ್ಯಾ-ಯುಕ್ರೇನ್ ಯುದ್ಧ ಜಗತ್ತಿನಾದ್ಯಂತ ಆಹಾರ, ಅಗತ್ಯ ವಸ್ತುಗಳು, ಇಂಧನಗಳ ಅಲಭ್ಯತೆ ಹಾಗೂ ಬೆಲೆ ಏರಿಕೆಗೆ ಕಾರಣವಾಗಿ ಜನರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.ಇನ್ನೊಂದು ಯುದ್ಧ ನಡೆದರೆ ಅದು ಜಾಗತಿಕ ಅರ್ಥ ವ್ಯವಸ್ಥೆಗೆ ಇನ್ನಷ್ಟು ಹಾನಿಯನ್ನು ಉಂಟು ಮಾಡುವುದರಲ್ಲಿ ಸಂಶಯವಿಲ್ಲ. ಹೀಗೆ ಜಗತ್ತಿನ ಬಲಾಢ್ಯ ದೇಶಗಳ ನಡುವಿನ ಅಪನಂಬಿಕೆ, ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಅವು ಕೈಗೊಳ್ಳುವ ನಡೆಗಳು ಜಗತ್ತಿನಾದ್ಯಂತ ಜನರ ಬದುಕನ್ನು ಸಂಕಷ್ಟಕ್ಕೆ ನೂಕುತ್ತಿವೆ.
ಸುದ್ದಿಯನ್ನು ನೇರವಾಗಿ ಪಡೆಯಲು, ನಮ್ಮ ವಾಟ್ಸಾಪ್ ಗುಂಪು ಸೇರಲು ಇಲ್ಲಿ ಕ್ಲಿಕ್ ಮಾಡಿ :
https://chat.whatsapp.com/CMUDdTXoFVn7atm3zHYGrd