
ಕೃಷ್ಣ ಎಂಬ ಪದ ಕಿವಿಯ ಮೇಲೆ ಬಿದ್ದೊಡನೆಯೇ ಅದೇನೋ ಸಂತೃಪ್ತಭಾವ. ರಾಮ ಎಂಬ ಪದ ಮನದಲ್ಲಿ ಭಕ್ತಿ ಭಾವನೆಯನ್ನು ಬಡಿದೆಬ್ಬಿಸಿದರೆ, ಕೃಷ್ಣ ಎನ್ನುವ ಪದ ಹೃದಯಕ್ಕೆ ಆಪ್ತವೆನಿಸುತ್ತದೆ. ಕೃಷ್ಣ ಎಂದು ಕರೆಸಿಕೊಳ್ಳುವ ಈ ನೀಲ ಮೇಘ ಶ್ಯಾಮ ಅದೆಷ್ಟೋ ಮನಸ್ಸುಗಳಿಗೆ ಸಾವಿರಾರು ವರ್ಷಗಳಿಂದ ಸ್ಫೂರ್ತಿಯ ಚಿಲುಮೆ. ಇಂತಹ ಮುರಾರಿಯ ಜನ್ಮದಿನೋತ್ಸವವನ್ನು ದೇಶದ ಉದ್ದಗಲಕ್ಕೂ ಜನತೆ ಆಚರಿಸಿ ಇಂದು ಸಂಭ್ರಮಿಸುತ್ತಿದ್ದಾರೆ.
ಕೃಷ್ಣ ಅದೆಷ್ಟೋ ಹೃದಯಗಳಿಗೆ ಸ್ಪೂರ್ತಿ ಎನಿಸುವುದೇ ತನ್ನ ವ್ಯಕ್ತಿತ್ವದ ಮೂಲಕ. ಈತನ ವ್ಯಕ್ತಿತ್ವ ಹಕ್ಕಿಗಳ ಬೆಳಗಿನ ಕಲರವದಷ್ಟೇ ಮನಸ್ಸಿಗೆ ಆಪ್ತ, ಸಾಗರದ ಗಾಂಭೀರ್ಯತೆಯು ಈತನ ವ್ಯಕ್ತಿತ್ವದಲ್ಲಿದ್ದು ಈತನಿಲ್ಲದ ಮಹಾಭಾರತವನ್ನು ಊಹಿಸಿಕೊಳ್ಳಲು ಅಸಾಧ್ಯ. ಆತನಿಂದಲೇ ಸ್ಫೂರ್ತಿ ಪಡೆದು ರಚಿಸಲ್ಪಟ್ಟ ಭಾರತವು ನಮ್ಮ ಕಣ್ಣಮುಂದಿದೆ. ಅದುವೇ ಕುಮಾರವ್ಯಾಸ ಎಂದೇ ಪ್ರಸಿದ್ಧವಾದ ಗದುಗಿನ ನಾರಣಪ್ಪನು ರಚಿಸಿರುವ ‘ಗದುಗಿನ ಭಾರತ’ ಅಥವಾ ‘ಕರ್ಣಾಟಕ ಭಾರತ ಕಥಾಮಂಜರಿ’, ಇಲ್ಲಿ ಕುಮಾರವ್ಯಾಸ ತನ್ನ ಸಂಪೂರ್ಣ ಕೃತಿಯನ್ನು ಕೃಷ್ಣಮಯವಾಗಿಸಿದ್ದಾನೆ. ಅವನ ಮಟ್ಟಿಗೆ ಅದು ಕೃಷ್ಣನ ಕಥಾನಕ, ಅದನ್ನೇ ಆತ “ತಿಳಿಯ ಹೇಳುವೆ ಕೃಷ್ಣ ಕಥೆಯ, ಇಳೆಯ ಚಾರರು ಕೇಳುವಂತೆ” ಎಂದು ಹೇಳುತ್ತಾನೆ.
ಇಂತಹ ಮುರಾರಿಯ ಜೀವನವೇನೂ ಹೂವಿನ ಹಾಸಿಗೆಯಾಗಿರಲಿಲ್ಲ. ಹುಟ್ಟಿನಿಂದಲೇ ಕಷ್ಟಗಳ ಸಂಕೋಲೆಯನ್ನು ಎದುರಿಸುವ ಪರಿಸ್ಥಿತಿ ಮಧುಸೂದನನಿಗೆ ಇತ್ತು. ಹುಟ್ಟುವ ಸಮಯಕ್ಕೆ ಪ್ರಾಣಾಪಾಯ ಬಾಗಿಲಲ್ಲೇ ನಿಂತು ಕಾಯುತ್ತಿತ್ತು!! ಎಲ್ಲಾ ಅಪಾಯಗಳನ್ನು ನಗುಮೊಗದಿಂದಲೇ ಎದುರಿಸುವ ಈತ ಕ್ರಾಂತಿ ಪುರುಷನೂ ಹೌದು, ಪ್ರಕೃತಿ ಪ್ರೇಮಿಯೂ ಹೌದು. ಗೋಕುಲದ ಜನರೆಲ್ಲರೂ ದೇವೇಂದ್ರನನ್ನು ಪೂಜಿಸುತ್ತಿದ್ದರು, ಪೂಜಿಸದಿದ್ದರೆ ಎಲ್ಲಿ ದೇವೇಂದ್ರನ ಕೋಪಕ್ಕೆ ಬಲಿಯಾಗುತ್ತೇವೆಯೋ? ಎಂಬ ಅಳುಕು ಆ ಜನರ ಮನದಲ್ಲಿ ಇತ್ತು. ಅದೇ ಜನರನ್ನು ನೀವೇಕೆ ಇಲ್ಲಿ ಹರಿಯುವ ನದಿಯನ್ನು, ನಿಮ್ಮ ಕರುಗಳಿಗೆ ಮೇವು ನೀಡುವ ಗೋವರ್ಧನ ಬೆಟ್ಟವನ್ನು ಪೂಜಿಸಬಾರದು ಎಂದು ಕೇಳುತ್ತಾನೆ ಈ ಗೋಪಾಲ!! ಆ ಮೂಲಕ ಭಯ ಪ್ರೇರಿತವಾದ ಅಲ್ಲಿನ ಜನರ ದೇವೇಂದ್ರನ ಮೇಲಿನ ಭಕ್ತಿಯನ್ನು ಹೋಗಲಾಡಿಸಿ ಪ್ರಕೃತಿಯ ಬಗೆಗಿನ ಒಲವೇ ಪ್ರಧಾನವಾಗುವಂತೆ ಮಾಡಿ ಅಲ್ಲಿನ ಜನರು ಪ್ರಕೃತಿಯ ಆರಾಧನೆಗೆ ತೊಡಗುವಂತೆ ಮಾಡಿದ ಈ ಗಿರಿಧರ.
‘ದುಷ್ಟ ಶಿಕ್ಷಣೆ, ಶಿಷ್ಟ ರಕ್ಷಣೆ’, ಎಂಬ ನೀತಿಯನ್ನು ತನ್ನ ಬಾಲ್ಯದಿಂದಲೇ ಪಾಲಿಸಿಕೊಂಡು ಬಂದವನು ಶ್ರೀಕೃಷ್ಣ. ತನ್ನ ಬಾಲ್ಯದಲ್ಲಿಯೇ ದುಷ್ಟನಾದ ತನ್ನ ಮಾವ ಕಂಸನನ್ನು ವಧಿಸಿ ಕಾರಾಗೃಹದಲ್ಲಿದ್ದ ತನ್ನ ಅಜ್ಜನನ್ನು ಬಿಡಿಸುವ ಮೂಲಕ, ಶಿಷ್ಟ ರಕ್ಷಣೆ ಎಂಬ ಕರ್ತವ್ಯಕ್ಕೆ ಕೃಷ್ಣ ವಿಮುಖನಾಗಲಿಲ್ಲ. ದೇವಕಿಸುತನಾದ ಈ ಮುರಾರಿ ತನ್ನ ಬಾಲ್ಯದ ತುಂಟಾಟಗಳ ಮೂಲಕ ತನ್ನನ್ನು ಸಾಕಿ ಸಲುಹಿದ ಯಶೋದೆಯ ಸಂತಸಕ್ಕೆ ಕಾರಣನಾಗುತ್ತ ತಾನು ವಾಸವಿದ್ದ ಪ್ರದೇಶದ ಜನರ ಕಣ್ಮಣಿಯಾಗಿ ಹೋಗಿದ್ದ.
ಜಾತಿ ತಾರತಮ್ಯವೆನ್ನುವುದು ಒಂದು ಕೆಟ್ಟ ಮನಸ್ಥಿತಿ, ಹಾಗೆಯೇ ಉದ್ಯೋಗ ತಾರತಮ್ಯವೂ ಕೂಡ. ಆದರೆ ಇವೆರಡರ ವಿರುದ್ಧವೂ ಸ್ಪಷ್ಟ ಸಂದೇಶವನ್ನು ಸಾರಿದವನು ಭಗವಾನ್ ಕೃಷ್ಣ. ಬಾಲ್ಯದಲ್ಲಿ ಈತ ಮಾಡಿದ್ದು ಗೋವುಗಳನ್ನು ಕಾಯುವ ಕೆಲಸ. ಹೀಗಾಗಿಯೇ ಈತ ಮುಂದೆ ‘ಗೋಪಾಲ’ನೆನಿಸಿಕೊಂಡ. ಈ ಒಂದು ಕಾರಣಕ್ಕಾಗಿ ಮುಂದೆ ದುರ್ಯೋಧನ ಹಾಗೂ ಆತನ ಸಂಗಡಿಗರಿಂದ ‘ಗೊಲ್ಲ’ ಎಂದು ಅವಹೇಳನಕ್ಕೆ ಒಳಗಾದವನು ಈ ಕೃಷ್ಣ. ಇವೆಲ್ಲವನ್ನು ಮೀರಿ ನಿಂತು ತನ್ನ ವ್ಯಕ್ತಿತ್ವದ ಮೂಲಕವೇ ಎಲ್ಲ ವರ್ಗದವರನ್ನು ಸೂಜಿಗಲ್ಲಿನಂತೆ ಈತ ಸೆಳೆಯುತ್ತಾನೆ.
ಈ ಮುರಾರಿಗೆ ತನ್ನ ಬಡ ಗೆಳೆಯ ಸುಧಾಮ ತಂದ ಅವಲಕ್ಕಿಯು ಮೃಷ್ಟಾನ್ನ ದಂತೆ ಭಾಸವಾಯಿತು. ಗೆಳೆತನಕ್ಕೆ ಧನಿಕ-ಬಡವ ಎಂಬ ಭೇದವಿಲ್ಲ ಎಂದು ತೋರಿಸಿಕೊಟ್ಟವರನು ಕೃಷ್ಣ. ತನ್ನ ತಂಗಿಯಾದ ಸುಭದ್ರೆ ಅರ್ಜುನನನ್ನು ಪ್ರೀತಿಸಲು ಅವಳ ಇಚ್ಛೆಗೆ ಅಡ್ಡಿ ಬರದಂತೆ ತನ್ನಿಷ್ಟದಂತೆ ವಿವಾಹವಾಗಲು ಅವಕಾಶ ಮಾಡಿ ಕೊಟ್ಟ ಮಾದರಿ ಅಣ್ಣನೂ ಹೌದು, ಈ ಮಧುಸೂಧನ! ಪಾಂಡಿತ್ಯವನ್ನು ಗಣನೆಗೆ ತೆಗೆದುಕೊಂಡರೆ ಮಹಾಭಾರತದಲ್ಲಿ ಕಾಣಸಿಗುವ ಒಬ್ಬ ಅಸಾಮಾನ್ಯ ವ್ಯಕ್ತಿ ವಿದುರ. ಆದರೆ ಅಂತಹ ವಿದುರನು ಕೂಡ ದಾಸೀಪುತ್ರ ಎಂದು ದುರ್ಯೋಧನ ಹಾಗೂ ಸಂಗಡಿಗರಿಂದ ಮೂದಲಿಕೆಗೆ ಒಳಗಾಗಿದ್ದ. ಹೀಗೆ ಮೂದಲಿಕೆಗೆ ಒಳಗಾದ ವಿದುರನ ಮನೆಗೆ ಊಟಕ್ಕಾಗಿ ಹೊರಟವನು ಕೃಷ್ಣ, ಅದೂ ದುರ್ಯೋಧನನ ಆತಿಥ್ಯವನ್ನು ತಿರಸ್ಕರಿಸಿ!! ಇಲ್ಲಿಯೂ ನಾವು ಕೃಷ್ಣನ ಮೇಲು-ಕೀಳೆಂಬ ತಾರತಮ್ಯವನ್ನು ಧಿಕ್ಕರಿಸುವ ಮನೋಭಾವವನ್ನು ನೋಡಬಹುದಾಗಿದೆ.
ಆಕಸ್ಮಿಕವಾಗಿ ಬೆರಳು ಗಾಯಗೊಂಡು ರಕ್ತ ಸುರಿದಾಗ ಅಲ್ಲಿದ್ದ ದ್ರೌಪದಿಯು ತನ್ನ ಸೀರೆಯನ್ನು ಹರಿದು ಕೃಷ್ಣನ ಬೆರಳಿಗೆ ಕಟ್ಟುತ್ತಾಳೆ, ಸುರಿಯುವ ರಕ್ತವನ್ನು ನಿಲ್ಲಿಸುತ್ತಾಳೆ.ಆ ಒಂದು ಋಣಕ್ಕಾಗಿ ಅವಳನ್ನು ಜೀವನಪರ್ಯಂತ ಕಾಪಾಡುವ ಹೊಣೆ ಹೊತ್ತವನು ಈ ಗೋಪಾಲ. ತುಂಬಿದ ಸಭೆಯಲ್ಲಿ ಗಂಗಾಪುತ್ರನಾದಿಯಾಗಿ ಎಲ್ಲ ವೀರರು ಕೈಚೆಲ್ಲಿ ಕುಳಿತಿರಲು ಸಹೋದರಿಯ ಕರೆಗೆ ಓಗೊಟ್ಟ ಹೃದಯವಂತನಲ್ಲವೆ!! ನಮ್ಮ ಮಧುಸೂದನ. ತಾನು ಮಾಡದ ತಪ್ಪಿಗೆ ಜೀವಮಾನವಿಡಿ ಕಷ್ಟವನ್ನು ಅನುಭವಿಸಿದವನು ಸೂರ್ಯಪುತ್ರ ಕರ್ಣ, ಆದರೆ ಆ ಕರ್ಣನು ಹಿಗ್ಗುವ ಸಂದರ್ಭವನ್ನು ಸೃಷ್ಟಿಸಿದ ವಾಸುದೇವ ಕುರುಕ್ಷೇತ್ರ ಕದನ ಭೂಮಿಯಲ್ಲಿ ಕರ್ಣನ ಬಾಣದ ತೀವ್ರತೆಗೆ ತಾನು ಮುನ್ನಡೆಸುತ್ತಿದ್ದ ರಥ ಎರಡು ಅಡಿ ಹಿಂದೆ ಸರಿಯಲು, ‘ಭಲೇ ಕರ್ಣ!!’ ಎಂದು ಉದ್ಗರಿಸಿದ್ದ ಈ ಮುರಾರಿ. ಲೋಕ ಪೂಜನೀಯನಾಗಿದ್ದ ವಾಸುದೇವನ ಬಾಯಿಂದ ಬಂದ ಇಂತಹ ಹೊಗಳಿಕೆಗೆ ಬಹುಶಃ ಕರ್ಣ ತನ್ನ ಜೀವಮಾನವಿಡೀ ಅನುಭವಿಸಿದ ನೋವನ್ನು ಮರೆತು ಬಿಟ್ಟಿರಲು ಸಾಧ್ಯ.
ಅತ್ತೆಯಾದ ಕುಂತಿಗೆ ತಾನು ನೀಡಿದ ಮಾತಿನಂತೆ ಎಲ್ಲ ಪಾಂಡವರನ್ನು ಕಣ್ಣಿನ ರೆಪ್ಪೆಯಂತೆ ಕಾಯುತ್ತಾನೆ ವಾಸುದೇವ. ಆತ್ಮವಿಲ್ಲದ ದೇಹವನ್ನು ಹೇಗೆ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೋ ಹಾಗೆಯೇ ಕೃಷ್ಣನಿಲ್ಲದ ಅರ್ಜುನನನ್ನು ಕಲ್ಪಿಸಿಕೊಳ್ಳಲೂ ಆಗದು. ಅರ್ಜುನನ ಬಹುತೇಕ ಗೆಲುವುಗಳ ರೂವಾರಿಯಾಗಿದ್ದ ವಾಸುದೇವ ಯುದ್ಧವು ಪ್ರಾರಂಭವಾಗುವ ಹೊತ್ತಿನಲ್ಲಿ ಮನೋದೌರ್ಬಲ್ಯಕ್ಕೆ ಒಳಗಾದವನಂತೆ ಬಡಬಡಿಸುತ್ತಿದ್ದ ಅರ್ಜುನನನ್ನು ಸಂತೈಸಿ, ಸಮಾಧಾನಿಸಿ, ಆ ಮೂಲಕ ಜಗತ್ತಿಗೆ ಬೋಧಿಸಿದ ಮಾತುಗಳೇ ಭಗವದ್ಗೀತೆ. ಅಲ್ಲಿ ಭಗವಾನ್ ಕೃಷ್ಣ ಹೇಳಿದ ಕರ್ತವ್ಯದ ಪ್ರಾಮುಖ್ಯತೆ ಕರ್ತವ್ಯದಿಂದ ವಿಮುಖರಾಗಿ ಬದುಕುವ ಇಂದಿನ ಜನತೆಗೆ ದಾರಿದೀಪ. ಸಮಾಜದ ಎಲ್ಲ ವರ್ಗದ ಜನರು ನನಗೆ ಸಮಾನರು ಎಂದು ಭಗವದ್ಗೀತೆಯ ಮೂಲಕ ಸಂದೇಶ ಸಾರಿದ ಈ ವಾಸುದೇವ. ಅಂತಹ ಘನ ವ್ಯಕ್ತಿತ್ವದ ಕೃಷ್ಣನ ಮಾತುಗಳು, ಆತ ತೋರಿದ ದಾರಿ ನಮಗೆಲ್ಲರಿಗೂ ಆದರ್ಶಪ್ರಾಯವಾಗಲಿ ಎಂದು ಹಾರೈಸುವೆ.












































