
ಕೃಷ್ಣ.. ಅದೆಂತಹ ಆಕರ್ಷಣೆ ಆ ಹೆಸರಿನಲ್ಲಿ. ಹೆಸರೇ ಹೇಳುವಂತೆ ಕೃಷ್ಣ ಎಂದರೆ ಕಪ್ಪು ಎಂದು ಹೌದು, ಆಕರ್ಷಕ ಎಂದೂ ಹೌದು. ಆತ ಮಾನುಷ ಗುಣವುಳ್ಳವನೂ ಹೌದು, ದೈವಿಕ ಗುಣವುಳ್ಳವನೂ ಹೌದು. ಆತ ಶಸ್ತ್ರವನ್ನು ಕೊಟ್ಟವನೂ ಹೌದು, ಶಾಸ್ತ್ರವನ್ನು ನೀಡಿದವನೂ ಹೌದು. ಆತ ಒಬ್ಬ ವೇದಾಂತಿಯೂ ಹೌದು, ಜೀವನ್ಮುಖಿಯೂ ಹೌದು. ಹೀಗೆ ಕೃಷ್ಣ ಅಂದರೇನೇ ಒಂದು ವಿಶೇಷ, ಒಂದು ಕುತೂಹಲ..
ದ್ವಾಪರಯುಗದ ತನ್ನ ಅವತಾರದಲ್ಲಿ ಎರಡು ದೊಡ್ಡ ಉಪದೇಶ ಮಾಡಿದ ಕೃಷ್ಣನಿಂದ ನಮ್ಮ ಜೀವನಕ್ಕೆ ಕಲಿಯಬೇಕಾದದ್ದು ಬೇಕಾದಷ್ಟಿದೆ. ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ಭೌತ ಶಾಸ್ತ್ರ, ಆಧ್ಯಾತ್ಮ, ಯುದ್ಧ ನೀತಿ, ವಿದೇಶಾಂಗ ನೀತಿ, ಟೈಮ್ ಮ್ಯಾನೇಜ್’ಮೆಂಟ್, ಲೈಫ್ ಮ್ಯಾನೇಜ್’ಮೆಂಟ್, ರಿಸೋರ್ಸ್ ಮ್ಯಾನೇಜ್’ಮೆಂಟ್ ಹೀಗೆ ಕೃಷ್ಣ ಹೇಳದ ವಿಷಯಗಳಿಲ್ಲ. ಅರ್ಜುನನ ನೆಪಮಾಡಿ ಇಡೀ ಮನುಕುಲಕ್ಕೆ ಸರ್ವೋಪನಿಷತ್ತುಗಳ ಸಾರವಾದ ಭಗವದ್ಗೀತೆಯನ್ನು ಕೊಟ್ಟವನು ಭಗವಂತ ಕೃಷ್ಣ. ಭಗವದ್ಗೀತೆ ಇಡೀ ಮನುಕುಲಕ್ಕೆ ಕೃಷ್ಣನ ದಿವ್ಯ ಸಂದೇಶ. ಮನುಷ್ಯ ಜೀವನದಲ್ಲಿ ಮನುಷ್ಯ ಮಾತ್ರದವರಿಗೆ ಏಳಬಹುದಾದ ಎಲ್ಲ ಸಂದೇಹಗಳಿಗೆ ಅದು ಸಾಮಾಜಿಕ, ಆಧ್ಯಾತ್ಮಿಕ, ಭೌತಿಕವಾಗಿ ಯಾವುದೇ ಇರಬಹುದು, ಮಾರ್ಮಿಕವಾದ ಉತ್ತರ ರೂಪದ ಸಂದೇಶ ಕೊಟ್ಟ ಗುರು ಕೃಷ್ಣ. ಹಾಗಾಗಿಯೇ ಎಷ್ಟೋ ಸಾವಿರ ವರ್ಷಗಳ ಹಿಂದೆ ಅವತಾರವೆತ್ತಿದ ಕೃಷ್ಣ ಅಂದಿಗೂ ಪ್ರಸ್ತುತ, ಇಂದಿಗೂ ಪ್ರಸ್ತುತ, ಮುಂದಿಗೂ ಪ್ರಸ್ತುತ.
ಅಂತಿರುವ ಕೃಷ್ಣನ ಬಗ್ಗೆ ಕೆಲವು ಮಿಥ್ಯೆಗಳು ಹರಡಿಕೊಂಡಿವೆ. ಕೃಷ್ಣನನ್ನು ಸರಿಯಾಗಿ ಅರ್ಥೈಸಿಕೊಳ್ಳದವರು, ಕೃಷ್ಣನ ಬಗ್ಗೆ ಏನೂ ತಿಳಿಯದವರು ಹರಡಿರುವ ಅಥವಾ ಕೃಷ್ಣನ ಮೇಲಿನ ಅಪನಂಬಿಕೆಯಿಂದ ಮಾಡಿರುವ ಆರೋಪಗಳೂ ಆಗಿರಬಹುದು. ಕೃಷ್ಣ ಅಂದರೆ ಜಾರ, ಚೋರ, ಮೋಸಗಾರ, ವಂಚಕ, ಕುಟಿಲ ಬುದ್ಧಿಯವನು ಹೀಗೆ. ಕೆಲವೆಡೆ ಕೃಷ್ಣನ ಲೆಕ್ಕ ರಾಮನ ಲೆಕ್ಕ ಎಂಬ ಪದ ಬಳಸಿ ಕೃಷ್ಣ ಅಂದರೆ ವಂಚನೆ ಅನ್ನುವವರೆಗೂ ಕೃಷ್ಣನ ಹೆಸರಿನ ಬಗ್ಗೆ ಮಿಥ್ಯೆ ಹರಡಿದೆ. ವಿಷ್ಣುವಿನ ಅವತಾರಗಳೇ ಆದಂತಹ ಶ್ರೀರಾಮಚಂದ್ರ ಹಾಗು ಕೃಷ್ಣ ಪರಮಾತ್ಮನನ್ನು ಪರಸ್ಪರ ಹೋಲಿಸಿ ನೋಡಿ ಕೃಷ್ಣನನ್ನು ಜರಿಯುವವರೂ, ನೀನು ಕೃಷ್ಣನಂತೆ ಆಗಬೇಡ – ರಾಮನಂತೆ ಆಗು ಎಂದು ಉದಾಹರಣೆ ನೀಡುವವವರೂ ಇದ್ದಾರೆ.
ಮೊದಲೇ ಹೇಳಿದಂತೆ ರಾಮ ಹಾಗು ಕೃಷ್ಣ ಎರಡೂ ವಿಷ್ಣುವಿನ ಅವತಾರಗಳೇ. ಆದರೂ ಎರಡೂ ಅವತಾರಗಳ ಗುಣಗಳಲ್ಲಿ ಹಲವು ವೈರುಧ್ಯಗಳಿವೆ. ರಾಮ ಜನಿಸಿದ್ದು ಬೆಳಗಿನ ಜಾವದಲ್ಲಾದರೆ, ಕೃಷ್ಣ ಜನಿಸಿದ್ದು ಮಧ್ಯರಾತ್ರಿಯ ಸಮಯದಲ್ಲಿ. ರಾಮ ಎಂಬ ಹೆಸರು ಬೆಳ್ಳಗೆ ಎಂಬುದನ್ನು ಸೂಚಿಸಿದರೆ, ಕೃಷ್ಣ ಕಪ್ಪು ಎಂಬ ಅರ್ಥ ಕೊಡುತ್ತದೆ. ಬೆಳ್ಳಗಿದ್ದಾನೆ ಎಂದರೆ ಆತ ಪಾರದರ್ಶಕನಾಗಿದ್ದಾನೆ, ನೇರವಾಗಿ ತೋರ್ಪಡಿಸುವ ಗುಣದವನು ಎಂದಾದರೆ, ಕಪ್ಪು ಎಂದರೆ ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ ಎಂಬುದನ್ನು ತಿಳಿದುಕೊಳ್ಳಬೇಕು. ಇಲ್ಲಿ ರಾಮನ ನಿಲುವುಗಳೇ ಬೇರೆ, ಕೃಷ್ಣನ ನಿಲುವುಗಳೇ ಬೇರೆ. ಉದಾಹರಣೆಗೆ ನೋಡುವುದಾದರೆ ರಾಮ ಹಾಗು ಕೃಷ್ಣ ಮೊದಲು ವಧಿಸಿದ್ದು ಒಬ್ಬ ಹೆಣ್ಣನ್ನು. ಶ್ರೀರಾಮ ತಾಟಕಿಯನ್ನು ಬಾಣ ಹೂಡಿ ಕೊಂದರೆ, ಕೃಷ್ಣ ಪೂತನಿಯನ್ನು ಸಾಯಿಸಿದ. ಆದರೆ ರಾಮ ತಾಟಕಿಯನ್ನು ಸಾಯಿಸುವ ಮೊದಲು ಗುರುಗಳಾದ ವಿಶ್ವಾಮಿತ್ರರಲ್ಲಿ ಒಂದು ಹೆಣ್ಣನ್ನು ಸಾಯಿಸುವುದು ಸರಿಯೇ, ಇದು ಧರ್ಮವೇ ಎಂದು ಸಲಹೆ ಕೇಳುತ್ತಾನೆ. ಆಗ ವಿಶ್ವಾಮಿತ್ರರು ಸುದೀರ್ಘ ಉಪದೇಶ ಮಾಡಿ ಲೋಕ ಕಂಟಕಳಾದ ತಾಟಕಿಯನ್ನು ಸಾಯಿಸುವುದೇ ಸರಿ ಎಂದು ಮನದಟ್ಟು ಮಾಡಿಸಿದ ಮೇಲೆ ರಾಮ ಬಾಣ ಹೂಡುತ್ತಾನೆ. ಆದರೆ ಕೃಷ್ಣ ಹಾಗಲ್ಲ. ಪೂತನಿಯನ್ನು ಸಾಯಿಸುವ ಮೊದಲು ಯಾರಲ್ಲೂ ಕೇಳಲಿಲ್ಲ. ಆ ಸಮಯದಲ್ಲಿ ಅಧರ್ಮಿಯಾದ ಆಕೆಯನ್ನು ಸಾಯಿಸಬೇಡ ಎಂದು ಬೇರೆ ಯಾರಾದರೂ ಹೇಳಿದ್ದರೂ ಕೂಡ ಕೃಷ್ಣ ಕೇಳುತ್ತಿರಲಿಲ್ಲ. ಅದು ಕೃಷ್ಣನ ವಿಶೇಷತೆ.
ಈಗಿನ ಕಾಲಘಟ್ಟಕ್ಕೇ ತೆಗೆದುಕೊಂಡರೆ ಈ ಕಲಿಯುಗದಲ್ಲಿ ನಾವು ತ್ರೇತಾಯುಗದ ಶ್ರೀರಾಮನಂತೆ ಬದುಕಲು ಸಾಧ್ಯವಿಲ್ಲ. ಆತನಂತೆ ಪಾರದರ್ಶಕನಾಗಿ ಬದುಕುತ್ತೇನೆ ಎಂದರೆ ಜನರೇ ಆ ರೀತಿ ಬದುಕಲು ಬಿಡುವುದಿಲ್ಲ. ಹಾಗಾಗಿ ಹೀಗೂ ಬದುಕಬಹುದು ಎನ್ನುವುದನ್ನು ತೋರಿಸಿಕೊಡಲು ಬಂದಿದ್ದೇ ಕೃಷ್ಣ. ಶ್ರೀರಾಮ ರಾವಣನ ಜತೆಗಿನ ಯುದ್ಧದಲ್ಲಿ ರಾವಣ ನಿರಾಯುಧನಾಗಿ ನಿಂತಿರುವಾಗ, ನಿರಾಯುಧನಾದ ರಾವಣನನ್ನು ಕೊಲ್ಲುವುದು ಕ್ಷತ್ರಿಯ ಧರ್ಮವಲ್ಲ ಎಂದು ನಿರ್ಧರಿಸಿ ರಾವಣನನ್ನು ಉದ್ಧೇಶಿಸಿ ಇಂದು ನೀನು ಹೋಗು, ಪತ್ನಿ ಮಂಡೋದರಿಯನ್ನು ಸಂಧಿಸಿ ಆಕೆಗೆ ವಿಷಯ ತಿಳಿಸಿ ಮತ್ತೆ ಮರಳಿ ಬರುವುದಿಲ್ಲ ಎಂದು ಹೇಳಿ ಮರುದಿನ ಯುದ್ಧಭೂಮಿಗೆ ಬರುವಂತೆ ಹೇಳುತ್ತಾನೆ. ಎದುರಿನವನು ಎಂತಹ ದುಷ್ಟನೇ ಆಗಿರಲಿ ನಾವು ಧರ್ಮದ ಮಾರ್ಗದಲ್ಲಿಯೇ ಇರಬೇಕು ಎಂಬುದು ರಾಮನ ನಿಲುವು. ಅದು ತ್ರೇತಾಯುಗ, ಆ ಯುಗಕ್ಕೆ ರಾಮನ ನೀತಿಯೇ ಸರಿ. ಆದರೆ ಈಗ? ಈ ಕಲಿಯುಗದಲ್ಲಿ ಭಾರತದ ಚರಿತ್ರೆಯಲ್ಲಿ ಬರುವ ಹೆಚ್ಚಿನ ರಾಜರು ರಾಮನ ಯುದ್ಧ ನೀತಿಯನ್ನು ಅನುಸರಿಸಿ ಭಾರತ ದಾಸ್ಯಕ್ಕೆ ಒಳಗಾಗುವಂತೆ ಮಾಡಿದ್ದು ಈಗ ಇತಿಹಾಸ. ಪ್ರಥ್ವಿರಾಜ ಚೌಹಾಣ್ ಹಾಗು ಪೌರವ ಇದಕ್ಕೆ ಒಂದು ಸಣ್ಣ ಉದಾಹರಣೆ. ಪ್ರಥ್ವಿರಾಜ ಚೌಹಾಣ್ ಮಹಮ್ಮದ್ ಘಜನಿಯನ್ನು ಬಂಧಿಸಿಯೂ ನಂತರ ಬಂಧನದಿಂದ ಬಿಡುಗಡೆಗೊಳಿಸಿ ಕಳುಹಿಸಿಕೊಟ್ಟ, ಪೌರವ ಕೂಡ ಅಲೆಕ್ಸಾಂಡರನನ್ನು ಸೋಲಿಸಿ ಸುಮ್ಮನೆ ಬಿಟ್ಟುಬಿಟ್ಟ. ಅದರ ಪರಿಣಾಮಗಳು ಏನಾಯಿತು ಅನ್ನುವುದು ಎಲ್ಲರಿಗೂ ತಿಳಿದೇ ಇದೆ. ಮುಂದೆ ಘಜನಿ, ಅಲೆಕ್ಸಾಂಡರ್ ಇಬ್ಬರೂ ಅನ್ಯಾಯದಿಂದ ಪ್ರಥ್ವಿರಾಜ್ ಹಾಗು ಪೌರವನನ್ನು ಕೊಂದುಬಿಟ್ಟರು. ಮುಂದೆ ಘಜಿನಿ ಭಾರತದ ಮೇಲೆ ಧಾಳಿ ಮೇಲೆ ಧಾಳಿ ಮಾಡಿ (ಒಟ್ಟು 17 ಬಾರಿ) ಇಲ್ಲಿನ ದೇವಾಲಯಗಳನ್ನು ಧ್ವಂಸ ಮಾಡಿ ಸಂಪತ್ತನ್ನು ಲೂಟಿಗೈಯುತ್ತಾ ಭಾರತದ ಸಂಪತ್ತನ್ನು ಬರಿದು ಮಾಡಿ ಹಾಕಿದ. ಆದರೆ ಕೃಷ್ಣನ ಯುದ್ಧ ತಂತ್ರ ಹಾಗಲ್ಲ. ದುಷ್ಟರನ್ನು ದುಷ್ಟರ ರೀತಿಯಲ್ಲಿಯೇ ಮಟ್ಟ ಹಾಕಬೇಕು ಎಂದು ಕೃಷ್ಣ ಹೇಳುತ್ತಾನೆ. ಧರ್ಮದ ರಕ್ಷಣೆಗೋಸ್ಕರ ದುಷ್ಟರನ್ನು ಹಣಿಯಲು ದುಷ್ಟ ಮಾರ್ಗವನ್ನು ಹಿಡಿಯುವುದು ತಪ್ಪಲ್ಲ ಎನ್ನುವ ಕೃಷ್ಣ ಮುಂದಿನ ಮನುಕುಲಕ್ಕೆ ಹೊಸ ಸಂದೇಶವನ್ನು ಕೊಡುತ್ತಾನೆ. ರಾಮನದ್ದು ಶುದ್ಧ ರಾಜಕಾರಣವಾದರೆ, ಕೃಷ್ಣನದ್ದು ಪರಿಸ್ಥಿತಿಗೆ ತಕ್ಕುದಾದ ರಾಜಕಾರಣ. ಇಬ್ಬರ ಉದ್ಧೇಶವೂ ಒಂದೇ, ಅದು ಧರ್ಮ ರಕ್ಷಣೆ. ಯಾವ ಕಾಲದಲ್ಲಿ ಯಾವ ಸಂದರ್ಭದಲ್ಲಿ ಯಾವ ರಾಜಕಾರಣವನ್ನು ಪ್ರಯೋಗಿಸಬೇಕು ಅನ್ನುವುದು ನಮ್ಮ ನಮ್ಮ ವಿವೇಚನೆಗೆ ಬಿಟ್ಟಿದ್ದು.
ಕೃಷ್ಣ ಬೇಕಂತಲೇ ಕುರುಕ್ಷೇತ್ರ ಯುದ್ಧ ಮಾಡಿಸಿದ, ಅವನಿಗ್ಯಾಕೆ ಬೇಕಿತ್ತು ಅಣ್ಣ ತಮ್ಮಂದಿರ ಜಗಳದ ನಡುವೆ ಬರುವ ಕೆಲಸ ಎಂದು ಕೆಲ ವಿಮರ್ಶಕರು ಕೇಳುತ್ತಾರೆ. ಪಾಂಡವರ ತಾಯಿ ಕುಂತಿ ಬೇರೆ ಯಾರೂ ಅಲ್ಲ, ಕೃಷ್ಣನ ಸೋದರತ್ತೆ. ಕೃಷ್ಣನ ತಂದೆ ವಸುದೇವನ ತಂಗಿ. ಪಾಂಡುವಿನ ಮರಣಾನಂತರ ರಾಜ್ಯಕ್ಕೆ ಬರುವ ಪಾಂಡವರನ್ನು ಧುರ್ಯೋಧನ ಅವಮಾನಿಸುತ್ತಾನೆ. ಇವರು ಯಾರಿಗೆ ಹುಟ್ಟಿದ ಮಕ್ಕಳು ಎಂದು ಜರಿಯುತ್ತಾನೆ. ಪಾಂಡವರ ಧರ್ಮರಾಜನು ಧುರ್ಯೋಧನನಿಗಿಂತ ಹಿರಿಯವನು ಎಂದು ತಿಳಿದಿದ್ದರೂ ಕೂಡ ಭೀಷ್ಮ ದ್ರೋಣಾದಿಗಳೂ ಪಾಂಡವರ ಬೆನ್ನಿಗೆ ನಿಲ್ಲುವ ಪ್ರಯತ್ನವನ್ನು ಮಾಡುವುದಿಲ್ಲ. ಧರ್ಮದ ದಾರಿಯಲ್ಲಿರುವ ಪಾಂಡವರಿಗೆ ವಂಚನೆಯಾಗುತ್ತಿದೆ, ಅನ್ಯಾಯವಾಗುತ್ತಿದೆ ಎಂದು ತಿಳಿದಾಗ ಕೃಷ್ಣ ಪ್ರವೇಶ ಮಾಡಿದ. ಅಲ್ಲಿ ಸಾತ್ವಿಕ ರಾಜಕಾರಣವನ್ನು ತೋರಿಸುವ ಮೂಲಕ ಕೃಷ್ಣ ಧರ್ಮದ ಪರ ನಿಂತ. ಮುಂದೆ ಪಾಂಡವರಿಗೆ ರಾಜ್ಯ ಕೊಡಿಸಲು, ಯುದ್ಧವನ್ನು ತಪ್ಪಿಸಲು ಸಂಧಾನಕಾರನಾಗಿಯೂ ಹೋದ. ದೃತರಾಷ್ಟ್ರ ತನ್ನ ಕೈಯಲ್ಲಿ ಏನೂ ಇಲ್ಲ ಎಂದು ತನ್ನ ಮಗನ ಕಡೆಗೆ ಬೊಟ್ಟು ಮಾಡಿ ತೋರಿಸಿದ. ಧುರ್ಯೋಧನನ್ನು ನನ್ನಿಂದ ಒಪ್ಪಿಸಲು ಸಾಧ್ಯವಿಲ್ಲ, ನಿನ್ನಿಂದ ಒಪ್ಪಿಸಲು ಸಾಧ್ಯವಾದರೆ ಪ್ರಯತ್ನಿಸು ಎಂದು ಹೇಳಿದ. ದೃತರಾಷ್ಟ್ರ ಕೈಚೆಲ್ಲಿದ ಮೇಲೆ ಕೃಷ್ಣ ಧುರ್ಯೋಧನನ ಸಭೆಗೆ ಬಂದಿದ್ದು. ಆದರೆ ಧುರ್ಯೋಧನ ಒಪ್ಪಲಿಲ್ಲ, ಬದಲಾಗಿ ಕೃಷ್ಣನನ್ನೇ ಹಗ್ಗದಿಂದ ಬಂಧಿಸಲು ಯತ್ನಿಸಿದ. ಧುರ್ಯೋಧನಾದಿ ಕೌರವರು ಅದಾಗಲೇ ಯುದ್ಧೋನ್ಮಾದದಲ್ಲಿ ಮುಳುಗಿಯಾಗಿ ಹೋಗಿತ್ತು. ಹಾಗಿರುವಾಗ ನಾನು ಪಾಂಡವರನ್ನು ತಡೆಯಲು ಹೋಗುವುದಿಲ್ಲ ಎಂದು ಕೃಷ್ಣ ನಿರ್ಧರಿಸಿದ. ಪಾಂಡವರಿಗೆ ಅವರ ಹಕ್ಕಿನ ರಾಜ್ಯ ನೀಡದೆ, ಕೊನೆ ಪಕ್ಷ ಅವರು ಕೇಳಿದ ಕೇವಲ 5 ಗ್ರಾಮಗಳನ್ನೂ ನೀಡದೆ ಅಧರ್ಮದ ದಾರಿ ಹಿಡಿದ ಕೌರವರನ್ನು ತಡೆಯಲು ಯುದ್ಧ ಅನಿವಾರ್ಯ ಎಂಬುದನ್ನು ಕೃಷ್ಣ ಜಗತ್ತಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದ. ಯುದ್ಧ ನಡೆಯಲು ದೃತರಾಷ್ಟ್ರ, ಧುರ್ಯೋಧನ ಹೀಗೆ ಹಲವರು ಕಾರಣವಿರಬಹುದು. ಆದರೆ ಯುದ್ಧ ಮಾಡಿಸಿದ್ದು ಮಾತ್ರ ಕೃಷ್ಣನೇ. ಧರ್ಮ ರಕ್ಷಣೆಗಾಗಿ ಆಗ ಅದು ಅನಿವಾರ್ಯ ಕೂಡ. ಈ ವಿಮರ್ಶೆ ಮಾಡುವ ಭರದಲ್ಲಿ ಕೃಷ್ಣ ಅವತರಿಸಿದ್ದೆ ಧರ್ಮ ಪರಿಪಾಲನೆಗಾಗಿ ಎಂಬುದನ್ನೇ ನಾವು ಮರೆತುಬಿಡುತ್ತೇವೆ.
ಕೃಷ್ಣ ತಾನು ಅಷ್ಟು ಪ್ರಭಾವಿಯಾಗಿದ್ದರೂ ಕೂಡ ಒಮ್ಮೆಯೂ ರಾಜನಾಗುವ ಆಸೆಗೆ ಬಿದ್ದವನಲ್ಲ. ಆತ ಸಾಮಾನ್ಯರಂತೆ ಸಾಮಾನ್ಯರ ಮಧ್ಯೆಯೇ ಬದುಕಿದ. ಕಂಸನನ್ನು ವಧಿಸಿದರೂ ಕೃಷ್ಣ ಆತನ ಸಿಂಹಾಸನವನ್ನು ಏರಲಿಲ್ಲ. ಅಂದು ಕೃಷ್ಣನನ್ನು ವಿರೋಧಿಸುವವರು ಯಾರೊಬ್ಬರೂ ಇರಲಿಲ್ಲ. ಆದರೆ ಕೃಷ್ಣ ಆಸೆ ಪಡಲಿಲ್ಲ. ನರಕಾಸುರನನ್ನು ಕೊಂದ, ಆತನ ರಾಜ್ಯವನ್ನು ತಾನು ಪಡೆಯಲಿಲ್ಲ. ಜರಾಸಂಧನನ್ನು ಕೊಲ್ಲಿಸಿದರೂ ಆತನ ರಾಜ್ಯವನ್ನು ತಾನು ಹೊಂದಲಿಲ್ಲ. ರಾಜನಾಗುವ ಅದೆಷ್ಟೋ ಅವಕಾಶವಿದ್ದಾಗ್ಯೂ ಸಹ ಕೃಷ್ಣ ಆಸೆ ಪಡಲಿಲ್ಲ. ಅಷ್ಟೊಂದು ವರ್ಣರಂಜಿತ ಆಕರ್ಷಕ ವ್ಯಕ್ತಿತ್ವದ ಕೃಷ್ಣ ಬದುಕಿದ್ದು ಅತಿ ಸಾಮಾನ್ಯವಾದ ಜೀವನ. ಹಾಗಾಗಿ ಆತ ವಂಚಕ, ಕಪಟಿ, ಕುಟಿಲ ಬುದ್ಧಿಯವ ಎನ್ನುವ ದೂಷಣೆಗೆ ಖಂಡಿತಾ ಕೃಷ್ಣ ಪಾತ್ರನಲ್ಲ. ಆತನದು ಸದಾ ದೋಷರಹಿತ, ಕಳಂಕರಹಿತ ವ್ಯಕ್ತಿತ್ವ.
ಕೃಷ್ಣನನ್ನು ಪೂರ್ಣವಾಗಿ ತಿಳಿಯಲು ಎಲ್ಲರಿಗೂ ಸಾಧ್ಯವಿಲ್ಲ. ಕೃಷ್ಣನನ್ನು ಅರಿಯುವ ಪ್ರಯತ್ನದಲ್ಲಿ ಸಾಗಿದಂತೆ ನಾವು ಆಳಕ್ಕೆ ಇಳಿದುಬಿಡುತ್ತೇವೆ. ನಾವು ಆಳಕ್ಕೆ ಇಳಿಯುತ್ತಾ ಸಾಗಿದಂತೆ ಕೃಷ್ಣ ಎತ್ತರಕ್ಕೆ ಬೆಳೆಯುತ್ತಾ ಹೋಗುತ್ತಾನೆ. ಕೃಷ್ಣನಿಗೆ ಎಲ್ಲೆಯಿಲ್ಲ. ಎಲ್ಲೆ ಮೀರಿದವನು ಕೃಷ್ಣ. ಯಾರಾದರೂ ಕೃಷ್ಣನ ಬಗ್ಗೆ ಪೂರ್ಣವಾಗಿ ವಿವರಿಸಿದರು ಅಂದರೆ ಅದು ಅವರು ಕೃಷ್ಣನ ಬಗ್ಗೆ ತಿಳಿದುಕೊಂಡದ್ದಷ್ಟನ್ನು ಮಾತ್ರ ಹೇಳಿದರು ಎಂದರ್ಥ. ಬದಲಾಗಿ ಅವರು ಹೇಳಿದ್ದಷ್ಟೇ ಭಗವಂತ ಎಂದಲ್ಲ. ಕೃಷ್ಣ ಎಂದರೆ ಇಂದು ನಾಳೆ ಬರೆದು ಮುಗಿಯುವ ವ್ಯಕ್ತಿತ್ವವಲ್ಲ. ಕೃಷ್ಣನ ಬಗ್ಗೆ ಬರೆದುಬಿಡುತ್ತೇವೆ ಅನ್ನಲು ನಾವ್ಯಾರೂ ಪೂರ್ಣ ಜ್ಞಾನಿಗಳೂ ಅಲ್ಲ. ಇದು ಸೀಮಿತ ಪದಗಳ ಪರಿಧಿಯೊಳಗೆ ನನಗೆ ತಿಳಿದ ಸಾಸಿವೆಯಷ್ಟು ಜ್ಞಾನವನ್ನು ಹೇಳುವ ಪ್ರಯತ್ನವಷ್ಟೇ.
ಕೃಷ್ಣಮ್ ವಂದೇ ಜಗದ್ಗುರುಮ್
– ಲೇಖಕರು : ಅಶ್ವಿನ್ ಲಕ್ಷ್ಮೀಶ (ಹವ್ಯಾಸಿ ಬರಹಗಾರರು – ರಾಜಕೀಯ, ಇತಿಹಾಸ ಮತ್ತು ಅಂತರರಾಷ್ಟ್ರೀಯ ವಿಚಾರಗಳು)