HomeAutomobileಭಾರತದಿಂದ ನಿರ್ಗಮಿಸಿದ ಕಾರು ತಯಾರಿಕಾ ಕಂಪನಿ 'ಫೋರ್ಡ್': 2 ಉತ್ಪಾದನಾ ಘಟಕಗಳು ಸ್ಥಗಿತ

ಭಾರತದಿಂದ ನಿರ್ಗಮಿಸಿದ ಕಾರು ತಯಾರಿಕಾ ಕಂಪನಿ ‘ಫೋರ್ಡ್’: 2 ಉತ್ಪಾದನಾ ಘಟಕಗಳು ಸ್ಥಗಿತ

ನವದೆಹಲಿ: ಕಳೆದ 10 ವರ್ಷಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 2 ಶತಕೋಟಿ ಡಾಲರ್’ಗಳಿಗಿಂತಲೂ ಅಧಿಕ ನಷ್ಟ ಅನುಭವಿಸಿದ ಬಳಿಕ ಅಮೇರಿಕ ಮೂಲದ ಕಾರು ತಯಾರಿಕಾ ಕಂಪನಿ ಫೋರ್ಡ್ ಭಾರತದಿಂದ ಹೊರ ಹೋಗಲು ನಿರ್ಧರಿಸಿದೆ. ಪೂರಕವಾಗಿ ಭಾರತದಲ್ಲಿನ ತನ್ನ ಎರಡು ಕಾರು ಉತ್ಪಾದನಾ ಘಟಕಗಳನ್ನು ಮುಚ್ಚಿದೆ.

25 ವರ್ಷಗಳ ಹಿಂದೆ ಭಾರತಕ್ಕೆ ಪ್ರವೇಶಿಸಿದರೂ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಏಷಿಯಾ ಮೂಲದ ಕಾರು ಕಂಪನಿಗಳ ಪ್ರಾಬಲ್ಯದ ಎದುರು ಅಮೇರಿಕಾದ ಫೋರ್ಡ್ ಸ್ಥಿರವಾಗಿ ನಿಲ್ಲಲು ಸಾಧ್ಯವಾಗಿಲ್ಲ. ಪ್ರಸ್ತುತ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಕೇವಲ ಶೇಕಡಾ 2 ರಷ್ಟು ಗ್ರಾಹಕರನ್ನು ಫೋರ್ಡ್ ಹೊಂದಿದೆ. ಇದು ಇತ್ತೀಚಿಗೆ ಸ್ಪರ್ಧೆ ಕೊಡಲು ಸಾಧ್ಯವಾಗದೆ ಭಾರತವನ್ನು ತೊರೆದ ಮೂರನೆಯ ಅಟೋಮೊಬೈಲ್ ಕಂಪನಿಯಾಗಿದೆ. ಜನರಲ್ ಮೋಟಾರ್ಸ್ ಹಾಗು ಹ್ಯಾರ್ಲೆ ಡೇವಿಡ್ಸನ್ ಉಳಿದೆರಡು ಕಂಪನಿಗಳು. ಫೋರ್ಡ್ ಕಂಪನಿ ಈ ವರ್ಷದ ಆರಂಭದಲ್ಲಿ ನಷ್ಟ ತಗ್ಗಿಸುವ ಸಲುವಾಗಿ ಬ್ರೆಜಿಲ್’ನಿಂದ ಕೂಡ ಹೊರ ನಡೆದಿತ್ತು. ಫೋರ್ಡ್ ಕಂಪನಿಯ ಈ ನಿರ್ಧಾರವು ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಶಿ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಕೊಂಚ ಹಿನ್ನಡೆ ತಂದಂತಾಗಿದೆ.

ನಮ್ಮ ನಿರಂತರ ಪ್ರಯತ್ನಗಳ ಹೊರತಾಗಿಯೂ ನಾವು ದೀರ್ಘಾವಧಿಯ ಲಾಭದತ್ತ ಮುಂದುವರಿಯಲು ಸಾಧ್ಯವಾಗಲಿಲ್ಲ. ಕಳೆದ 10 ವರ್ಷಗಳಲ್ಲಿ ಭಾರತದಲ್ಲಿ ಫೋರ್ಡ್ 2 ಶತಕೋಟಿ ಡಾಲರ್’ಗಿಂತಲೂ ಹೆಚ್ಚಿನ ನಷ್ಟವನ್ನು ಅನುಭವಿಸಿದೆ ಮತ್ತು ಹೊಸ ವಾಹನಗಳ ಬೇಡಿಕೆ ಕುಗ್ಗಿದೆ ಎಂದು ಫೋರ್ಡ್ ಇಂಡಿಯಾ ಮುಖ್ಯಸ್ಥ ಅನುರಾಗ್ ಮೆಹರೋತ್ರಾ ಫೋರ್ಡ್ ಕಂಪನಿ ಪರವಾಗಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

2020ರ ವೇಳೆಗೆ 5 ಮಿಲಿಯನ್ ಕಾರು ಉತ್ಪಾದನಾ ಗುರಿ ಸಾಧಿಸಿ ಅಮೇರಿಕ ಚೀನಾ ಬಳಿಕ ಮೂರನೇ ಸ್ಥಾನಕ್ಕೆ ಏರುವ ನಿರೀಕ್ಷೆ ಹೊಂದಿದ್ದ ಭಾರತ ಕೋವಿಡ್ ಕಾರಣ ಕೇವಲ 3 ಮಿಲಿಯನ್ ಕಾರು ಉತ್ಪಾದನೆಗೆ ಸೀಮಿತವಾಯಿತು. ಯುರೋಪ್ ಒಕ್ಕೂಟ ಹಾಗು ಜಪಾನ್ ಇನ್ನೂ ಕಾರು ಉತ್ಪಾದನೆಯಲ್ಲಿ ಭಾರತಕ್ಕಿಂತ ಮುಂದೆ ಇವೆ. ಮಾರುತಿ ಸುಜುಕಿ ಭಾರತದ ಅತೀ ದೊಡ್ಡ ಗ್ರಾಹಕ ಬಳಗವನ್ನು ಹೊಂದಿದ್ದು ಉತ್ಪಾದನೆಯಲ್ಲಿ ದೊಡ್ಡ ಪಾಲು ಪಡೆದಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ ಮೂಲದ ಹುಂಡೈ ಕಂಪನಿ ಇದೆ.

ಫೋರ್ಡ್ ಗುಜರಾತ್ ಹಾಗು ಚೆನ್ನೈನಲ್ಲಿರುವ ಉತ್ಪಾದನಾ ಘಟಕಗಳನ್ನು ಮುಚ್ಚಲಿದ್ದು ಸುಮಾರು 4000 ಮಂದಿ ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ. ಆದರೆ ಸನಂದ್ ನಲ್ಲಿರುವ ತನ್ನ ಎಂಜಿನ್ ಕಾರ್ಖಾನೆಯನ್ನು ಉಳಿಸಿಕೊಳ್ಳಲಿದೆ. ಭಾರತದ ಈ ಘಟಕವನ್ನು ವಿಶ್ವದೆಲ್ಲೆಡೆ ತನ್ನ ರೇಂಜರ್ ಪಿಕ್-ಅಪ್ ಟ್ರಕ್‌ಗಳಿಗೆ ಎಂಜಿನ್‌ಗಳನ್ನು ರಫ್ತು ಮಾಡಲು ಬಳಸಿಕೊಳ್ಳಲಿದೆ.

ಫೋರ್ಡ್ ಭಾರತದಲ್ಲಿ ಸುಮಾರು 391 ಷೋರೂಮ್’ನೊಂದಿಗೆ 170 ಡೀಲರ್‌ಗಳನ್ನು ಹೊಂದಿದೆ. ಡೀಲರ್’ಗಳಲ್ಲಿ 2000 ಕೋಟಿಗೂ ಮಿಕ್ಕಿದ ಹೂಡಿಕೆಯಿದ್ದು ಈಗ ಫೋರ್ಡ್ ಕಂಪನಿಯ ಅಚಾನಕ್ ನಿರ್ಧಾರದಿಂದ ಡೀಲರ್’ಗಳ ಭವಿಷ್ಯ ಡೋಲಾಯಮಾನವಾದಂತಾಗಿದೆ. ಸುಮಾರು 1000ಕ್ಕೂ ಮಿಕ್ಕಿ ಕಾರುಗಳು ಡೀಲರುಗಳ ಬಳಿಯಿದ್ದು ಈಗ ಗ್ರಾಹಕರು ಖರೀದಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಮತ್ತು ಮುಂದಿನ ದಿನಗಳಲ್ಲಿ ಬಿಡಿ ಭಾಗಗಳ ಕೊರತೆ ಹಾಗು ಅವುಗಳ ಬೆಲೆ ಏರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments