Coastal

ಒತ್ತಡಕ್ಕೆ ಮಣಿದ ಸಂಸದ: ವಿವಾದಾತ್ಮಕ ಸುರತ್ಕಲ್ ಟೋಲ್ ಗೇಟ್ ರದ್ದು, ಸಂಸದ ನಳಿನ್ ಕುಮಾರ್ ಟ್ವೀಟ್

ಮಂಗಳೂರು: ಕಳೆದ ಹಲವು ವರ್ಷಗಳಿಂದ ಟೀಕೆಗೆ ಗುರಿಯಾಗಿದ್ದ ಹಾಗು ಇತ್ತೀಚಿಗಿನ ಕೆಲ ತಿಂಗಳಿಂದ ತೀವ್ರವಾದ ಹೋರಾಟ ಎದುರಿಸಿದ್ದ ಸುರತ್ಕಲ್ ಟೋಲ್‌ಗೇಟ್ ತೆಗೆಯಲು ಸುತರಾಂ ಪ್ರಯತ್ನಿಸದ ಸಂಸದ ಹಾಗು ಜನಪ್ರತಿನಿಧಿಗಳು ಕೊನೆಗೂ ಜನರ ಒತ್ತಡಕ್ಕೆ ಬಗ್ಗಿದಂತೆ ಕಾಣುತ್ತಿದೆ. ಸುರತ್ಕಲ್ ಟೋಲ್ ಗೇಟ್ ವಿರುದ್ಧ ಟೋಲ್‌ ವಿರೋಧಿ ಹೋರಾಟ ಸಮಿತಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿದ್ದು ಇದೀಗ ಟೋಲ್ ಸಂಗ್ರಹ ರದ್ದುಪಡಿಸಿರುವುದರ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿರುವ ಅವರು ‘ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ಪ್ರಧಾನಿ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು.’ ಎಂದು ಬರೆದುಕೊಂಡಿದ್ದಾರೆ.

ಟೋಲ್ ರದ್ದಾದ ಬಗ್ಗೆ ಅಧಿಕೃತ ಪ್ರಕಟಣೆ ಹೊರ ಬಾರದ ಹಿನ್ನಲೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಟೋಲ್ ವಿರೋಧಿ ಹೋರಾಟ ಸಮಿತಿ ‘ಟೋಲ್ ರದ್ದು ಮಾಡಿರುವುದರ ಬಗ್ಗೆ ಅಧಿಕೃತ ಮಾಹಿತಿ ಬಂದು ಟೋಲ್ ತೆರವು ಮಾಡುವವರೆಗೂ ನಾವು ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ’ ಎಂದು ಹೇಳಿದೆ.

ಕೆಲ ವರ್ಷಗಳಿಂದ ಜನರ ವಿರೋಧವಿದ್ದರೂ ಮೂರು ಬಾರಿ ಆಯ್ಕೆಯಾದ ಸಂಸದರೂ ಸೇರಿ ಜನಪ್ರತಿನಿಧಿಗಳು ಸುಮ್ಮನೆ ಇದ್ದಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಕೆಲ ತಿಂಗಳಿಂದ ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟ ಸಮಿತಿ ಅಡಿಯಲ್ಲಿ ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದು ತೀವ್ರವಾದ ಹೋರಾಟ ಮಾಡುತ್ತಾ ಬಂದ ಪರಿಣಾಮ ಒತ್ತಡಕ್ಕೆ ಬಾಗಿ ಇದೀಗ ಟೋಲ್ ರದ್ದು ಸುದ್ದಿ ಹೊರಬಿದ್ದಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version