
ಉಡುಪಿ: ತರಗತಿಯೊಳಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಪ್ರತಿಭಟನೆ ನಡೆಸಿ ಕೋರ್ಟ್ ಮೆಟ್ಟಿಲೇರಿದ್ದ 6 ವಿದ್ಯಾರ್ಥಿನಿಯರ ಗುಂಪಿನ ಹಜ್ರಾ ಶಿಫಾ ಎಂಬಾಕೆಯ ತಂದೆಯ ಹೋಟಲ್ ಮೇಲೆ ಸೋಮವಾರ ತಡರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು ಶಿಫಾಳ ಅಣ್ಣನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಈ ಘಟನೆ ನಡೆದಿದ್ದು ಹಿಜಾಬ್ ಪರ ಪಿಯುಸಿ ವಿದ್ಯಾರ್ಥಿನಿ ಹಜ್ರಾ ಶಿಫಾ ಕರ್ನಾಟಕ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಳು. ಧಾಳಿ ಕುರಿತು ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಹಜ್ರಾ ಸಂಘಪರಿವಾರದ ಗೂಂಡಾಗಳಿಂದ ದಾಳಿ ನಡೆದಿದೆ ಎಂದು ಆರೋಪಿಸಿದ್ದಾಳೆ.
ಹಜ್ರ ಶಿಫಾ ತಂದೆ ಹೈದರ್ ಅಲಿ ಎಂಬವರು ಉಡುಪಿಯ ಮಲ್ಪೆ ಪೇಟೆಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ. ಈ ಹೋಟೆಲ್’ಗೆ ತೆರಳಿರುವ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ಹಜ್ರತ್ ಅಣ್ಣ ಸೈಫ್ (20) ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ. ತಕ್ಷಣ ಸ್ಥಳಕ್ಕಾಗಮಿಸಿದ ಮಲ್ಪೆ ಪೊಲೀಸರು ಸ್ಥಳದಲ್ಲಿ ನೆರೆದಿದ್ದ ಜನರನ್ನು ಚದುರಿಸಿ ಹೆಚ್ಚಿನ ಅನಾಹುತವಾಗದಂತೆ ತಡೆದಿದ್ದಾರೆ.












































