Coastal

ಮಳಲಿ ಮಸೀದಿ ವಿವಾದ: ಮಸೀದಿ ಅರ್ಜಿ ತಿರಸ್ಕರಿಸಿ ಹಿಂದೂ ಪರ ಅರ್ಜಿ ಪುರಸ್ಕರಿಸಿದ ಕೋರ್ಟ್

ಮಂಗಳೂರು: ದರ್ಗಾ ಕೆಡವುವಾಗ ಹಿಂದೂ ದೇಗುಲದ ಕುರುಹುಗಳು ಪತ್ತೆಯಾದ ಬಳಿಕ ವಿವಾದದ ಕೇಂದ್ರ ಬಿಂದುವಾದ ಮಂಗಳೂರು ಹೊರವಲಯದ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಹಿಂದೂ ದೇಗುಲದ ಕುರುಹುಗಳು ಪತ್ತೆಯಾದ ಹಿನ್ನಲೆಯಲ್ಲಿ ಮಸೀದಿ ಸರ್ವೇ ಮಾಡಬೇಕೆಂದು ಒತ್ತಾಯಿಸಿ ವಿಹೆಚ್‌ಪಿ (ವಿಶ್ವ ಹಿಂದೂ ಪರಿಷತ್) ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿ ಸ್ವೀಕರಿಸಿದ ಕೋರ್ಟ್ 2023ರ ಜನವರಿ 8ಕ್ಕೆ ವಿಚಾರಣೆ ಮುಂದೂಡಿದೆ. ಮಸೀದಿ ಕಾಮಗಾರಿ ತಡೆಯಾಜ್ಞೆ ತೆರವು ಮಾಡುವಂತೆ ಮನವಿ ಮಾಡಿದ್ದ ಮಸೀದಿ ಅರ್ಜಿಯನ್ನು ತಿರಸ್ಕರಿಸಿದೆ.

ಗುರುಪುರ ಗಂಜಿಮಠ ಬಳಿಯ ಮಳಲಿ ಬಳಿ ಅಸಯ್ಯಿದ್ ಅಬ್ದುಲ್ಲಾ ಹಿಲ್ ಮದನಿ ದರ್ಗಾದಲ್ಲಿ ಹಿಂದೂ ದೇವಸ್ಥಾನ ಹೋಲುವ ರಚನೆಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿತ್ತು. ಇದೀಗ ಈ ಕೇಸು ವಕ್ಫ್ ಟ್ರಿಬ್ಯುನಲ್​​ನಲ್ಲಿ ನಡೆಯಬೇಕೋ ಅಥವಾ ಸಿವಿಲ್ ಕೋರ್ಟ್​ನಲ್ಲಿ ನಡೆಯಬೇಕೋ ಎಂಬ ಬಗ್ಗೆ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ತೀರ್ಪು ನೀಡಿದೆ. ಇನ್ನೊಂದೆಡೆ ಮಸೀದಿ ಕಾಮಗಾರಿ ತಡೆಯಾಜ್ಞೆ ತೆರವು ನೀಡಿ ವಿಹೆಚ್‌ಪಿ ಅರ್ಜಿ ವಜಾಗೊಳಿಸುವಂತೆ ಮಸೀದಿ ಕಮಿಟಿ ಮನವಿ ಮಾಡಿತ್ತು. ಆದರೆ ಮಸೀದಿ ಕಮಿಟಿ ಅರ್ಜಿಯನ್ನೇ ಕೋರ್ಟ್ ವಜಾಗೊಳಿಸಿದೆ.

ಮಳಲಿ ದರ್ಗಾವನ್ನು ನವೀಕರಣಕ್ಕಾಗಿ ಕೆಡವಿದಾಗ ಹಿಂದೂ ದೇಗುಲ ಹೋಲುವ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು. ಈ ಹಿನ್ನಲೆ ಮಸೀದಿ ಸಮುಚ್ಚಯದ ಸರ್ವೇಕ್ಷಣೆಗೆ ಆದೇಶ ಮಾಡಬೇಕು ಎಂದು ಹಿಂದು ಸಂಘಟನೆಗಳು ಮನವಿ ಮಾಡಿದ್ದವು. ಇದನ್ನು ವಿರೋಧಿಸಿದ್ದ ಮಸೀದಿ ಆಡಳಿತ ಮಂಡಳಿ ಮತ್ತು ಮುಸ್ಲಿಂ ಸಂಘಟನೆಗಳು ಈ ದಾವೆಯ ವಿಚಾರಣೆ ನಡೆಸುವ ಅಧಿಕಾರವು ನ್ಯಾಯಾಲಯಕ್ಕೆ ಇಲ್ಲ. ಒಂದು ಜಾಗವನ್ನು ಪುರಾತನ ಸ್ಮಾರಕ ಎಂದು ಹೇಳಲು ಕೇಂದ್ರ ಸರ್ಕಾರದ ಅಧಿಸೂಚನೆ ಇರಬೇಕು. ಮಳಲಿ ಮಸೀದಿಯ ಮೇಲೆ ಯಾವುದೇ ಗೆಜೆಟ್ ನೋಟಿಫಿಕೇಶನ್ ಇಲ್ಲ. ಹೀಗಿರುವಾಗ ಇದನ್ನು ಪುರಾತನ ಸ್ಮಾರಕವೆಂದು ಹೇಳಲು ಸಾಧ್ಯವಿಲ್ಲ. ಇದರ ವಿಚಾರಣೆ ವಕ್ಫ್ ನ್ಯಾಯಾಲಯದಲ್ಲಿ ಮಾತ್ರ ವಿಚಾರಣೆ ಮಾಡಬಹುದು ಎಂದು ವಾದ ಮಂಡಿಸಿತ್ತು.

ತೀರ್ಪು ಹೊರ ಬಂದ ಬೆನ್ನೆಲ್ಲೆ ವಿಶ್ವ ಹಿಂದೂ ಪರಿಷತ್ ನಗರದಲ್ಲಿ ವಿಜಯೋತ್ಸವ ಆಚರಿಸಿದೆ.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

Exit mobile version