
ಮಂಗಳೂರು: ಮಂಗಳೂರಿನ ವೇಲೆನ್ಸಿಯಾ ಬಳಿಯ ಕ್ರಿಶ್ಚಿಯನ್ ಸಮುದಾಯದ ಆಡಳಿತಕ್ಕೆ ಒಳಪಟ್ಟ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿ ಒಬ್ಬರು ಹಿಂದೂಗಳ ಆರಾಧ್ಯ ದೇವ ಶ್ರೀರಾಮ ದೇವರ ಅವಹೇಳನ ಮಾಡಿದ್ದು ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳ ಪೋಷಕರು ಶನಿವಾರ ಮಧ್ಯಾಹ್ನ ಶಾಲೆಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಸಿಸ್ಟರ್ ಕಮ್ ಶಾಲಾ ಶಿಕ್ಷಕಿ ಆಗಿರುವ ಮಹಿಳೆ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಸಮಯದಲ್ಲಿ ಹಿಂದೂ ಧರ್ಮ ಹಾಗೂ ಶ್ರೀರಾಮ ದೇವರಿಗೆ ಅವಮಾನಿಸಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಈ ಬಗ್ಗೆ ತಿಳಿದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಬಗ್ಗೆ ಆಡಿಯೋ ಹರಿಬಿಟ್ಟಿದ್ದರು. ಈ ಆಡಿಯೋ ಸಂದೇಶ ವೈರಲ್ ಆದ ಬಳಿಕ ಶಾಲೆಗೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಶನಿವಾರ ಮದ್ಯಾಹ್ನದ ಬಳಿಕ ಶಾಲೆ ಬಂದ್ ಆಗಿದ್ದರೂ ಪೋಷಕರು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಶಾಲೆಯ ಗೇಟ್ ಬಳಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ಬಂದ ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾ ಅವರ ಕಾರಿಗೂ ಹಿಂದೂ ಸಂಘಟನೆಯ ಕಾರ್ಯಕರ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದೂ ಧರ್ಮ, ದೇವರು ಹಾಗೂ ದೇಶದ ಪ್ರಧಾನಿ ಮೋದಿಯನ್ನು ಟೀಕಿಸಿ ಮಕ್ಕಳಿಗೆ ತಪ್ಪು ಸಂದೇಶ ನೀಡಿ ಪಾಠ ಮಾಡಿದ ಶಿಕ್ಷಕಿಯನ್ನು ಅಮಾನತು ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದು, ಶಿಕ್ಷಕಿಯನ್ನು ಅಮಾನತು ಮಾಡದೇ ಇದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.