
ಮಂಗಳೂರು: ಇಲ್ಲಿನ ಹಂಪನಕಟ್ಟೆ ಸರ್ಕಲ್ ಬಳಿ ಬೈಕ್ ಒಂದು ಬಸ್ಸಿನಡಿ ಸಿಲುಕಿ ಹತ್ತಿಕೊಂಡ ಬೆಂಕಿಗೆ ಬಸ್ ಹೊತ್ತಿ ಉರಿದ ಘಟನೆ ಇಂದು (ಶುಕ್ರವಾರ) ಮಧ್ಯಾಹ್ನ ಜರಗಿದೆ. ಬಸ್ಸಿನಲ್ಲಿದ್ದ ೧೫ ಮಂದಿ ಪ್ರಯಾಣಿಕರು ಹಾಗು ಬಸ್ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ.
ಗಣೇಶಪುರ ಕೈಕಂಬ ದಿಂದ ಸ್ಟೇಟ್ ಬ್ಯಾಂಕ್ ಗೆ ಸಂಚರಿಸುವ ೪೫ಜಿ ಆಶೆಲ್ ಬಸ್ ಗೆ ಬೈಕ್ ಒಂದು ಅಡ್ಡ ಬಂದು ಬಿದ್ದ ಪರಿಣಾಮ ಬೈಕ್ ಬಸ್ಸಿನ ಟೈರಿನ ಅಡಿಗೆ ಸಿಲುಕಿದೆ. ಆ ಘರ್ಷಣೆಯಲ್ಲಿ ಬೆಂಕಿ ಹತ್ತಿಕೊಂಡಿದ್ದು ಮೊದಲಿಗೆ ಬಸ್ಸಿನ ಟೈರು ಉರಿಯತೊಡಗಿದ್ದು ನೋಡ ನೋಡುತ್ತಿದ್ದಂತೆ ಬೆಂಕಿ ಬಸ್ಸಿಗೆ ವ್ಯಾಪಿಸಿದೆ. ಆ ವೇಳೆ ಬಸ್ಸಿನಲ್ಲಿದ್ದ ೧೫ಕ್ಕೂ ಅಧಿಕ ಪ್ರಯಾಣಿಕರನ್ನು ಕೆಳಗಿಸಿ ಸಂಭಾವ್ಯ ಅಪಾಯದಿಂದ ತಪ್ಪಿಸಲಾಗಿದೆ.
ಬೈಕ್ ಸವಾರನನ್ನು ಬಲ್ಲಾಳ್ ಭಾಗ್ ನಿವಾಸಿ ಡೈಲಾನ್ ಏನು ಗುರುತಿಸಲಾಗಿದ್ದು ಆತನ ಕಾಲಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಬಸ್ ಸಂಪೂರ್ಣ ಹಾನಿಗೊಳಗಾಗಿದ್ದು ಅಗ್ನಿಶಾಮಕ ದಳ ಬೆಂಕಿ ನಂದಿಸಿದ ನಂತರ ರಸ್ತೆಯಿಂದ ತೆರವು ಮಾಡಲಾಗಿದೆ. ಘಟನೆ ನಡೆದ ಒಂದೆರಡು ಘಂಟೆಗಳ ಕಾಲ ಸದರಿ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಆ ಕಾರಣ ಸ್ಟೇಟ್ ಬ್ಯಾಂಕ್ ಹಂಪನಕಟ್ಟೆ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು.